ವಿಜಯನಗರದ ಗತ ವೈಭವ ಮರುಕಳಿಸಿದ ವಿಶ್ವ ವಿಖ್ಯಾತ ಹಂಪಿ ಉತ್ಸವ ಸಂಪನ್ನ : ಹರಿದು ಬಂದ 8 ಲಕ್ಷ ಜನಸಾಗರ

| N/A | Published : Mar 03 2025, 01:48 AM IST / Updated: Mar 03 2025, 11:07 AM IST

ವಿಜಯನಗರದ ಗತ ವೈಭವ ಮರುಕಳಿಸಿದ ವಿಶ್ವ ವಿಖ್ಯಾತ ಹಂಪಿ ಉತ್ಸವ ಸಂಪನ್ನ : ಹರಿದು ಬಂದ 8 ಲಕ್ಷ ಜನಸಾಗರ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ವಿಖ್ಯಾತ ಹಂಪಿ ಉತ್ಸವ ಸಾಗರೋಪಾದಿಯಲ್ಲಿ ಜನರು ಆಗಮಿಸುವುದರೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಹಂಪಿ ಉತ್ಸವ ಇದು ಜನೋತ್ಸವ ಎಂಬುದನ್ನು ಸಾಬೀತುಪಡಿಸುವುದರೊಂದಿಗೆ ಉತ್ಸವಕ್ಕೆ ತೆರೆ ಬಿದ್ದಿತು.

 ಕೃಷ್ಣ ಎನ್‌. ಲಮಾಣಿ

 ಹಂಪಿ : ವಿಶ್ವ ವಿಖ್ಯಾತ ಹಂಪಿ ಉತ್ಸವ ಸಾಗರೋಪಾದಿಯಲ್ಲಿ ಜನರು ಆಗಮಿಸುವುದರೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಹಂಪಿ ಉತ್ಸವ ಇದು ಜನೋತ್ಸವ ಎಂಬುದನ್ನು ಸಾಬೀತುಪಡಿಸುವುದರೊಂದಿಗೆ ಉತ್ಸವಕ್ಕೆ ತೆರೆ ಬಿದ್ದಿತು.

ಮೂರು ದಿನಗಳು ಹಂಪಿ ನೆಲದಲ್ಲಿ ಕಲೆ, ಸಾಹಿತ್ಯ, ಪುನರ್ಜನ್ಮ ಪಡೆದಿದ್ದು, ಹಂಪಿ ನೆಲದಲ್ಲಿ ಜೀವಕಳೆ ಮೂಡಿಸಿದ ಉತ್ಸವ ವಿಜೃಂಭಣೆಯೊಂದಿಗೆ ಸಮಾಪ್ತಿಗೊಂಡಿತು. ಹಂಪಿ ಉತ್ಸವದ ಮೂರನೇ ದಿನ ಸಾಗರೋಪಾದಿಯಲ್ಲಿ ಜನರು ಹರಿದು ಬಂದಿದ್ದು, ಹಂಪಿಯ ಎಲ್ಲೆಡೆ ಜನರ ದಂಡೇ ಕಾಣಿಸಿದ್ದು, ಉತ್ಸವದ ಮೂರು ದಿನಗಳಲ್ಲಿ ಎಂಟು ಲಕ್ಷ ಜನ ಹಂಪಿಗೆ ಹರಿದು ಬಂದಿದ್ದಾರೆ.

ಹಂಪಿ ಉತ್ಸವದ ಮೊದಲ ದಿನ ಒಂದು ಲಕ್ಷ ಜನ ಆಗಮಿಸಿದ್ದರೆ, ಎರಡನೇ ದಿನ 2 ಲಕ್ಷ ಜನ ಬಂದಿದ್ದು, ಮೂರನೇ ದಿನ 5 ಲಕ್ಷ ಜನ ಹಂಪಿಗೆ ಹರಿದು ಬಂದಿದ್ದಾರೆ. ಪ್ರಧಾನ ವೇದಿಕೆ, ಎದುರು ಬಸವಣ್ಣ ವೇದಿಕೆ, ಮಹಾನವಮಿ ದಿಬ್ಬ ವೇದಿಕೆ, ಸಾಸಿವೆ ಕಾಳು ಗಣಪತಿ ವೇದಿಕೆ, ಶ್ರೀವಿರೂಪಾಕ್ಷೇಶ್ವರ ದೇವಾಲಯ ವೇದಿಕೆ ಮತ್ತು ಧ್ವನಿ ಮತ್ತು ಬೆಳಕು ವೇದಿಕೆಗಳಲ್ಲಿ ಸಾವಿರಾರು ಜನರು ಆಗಮಿಸಿದ್ದರು.

ಜನವೋ ಜನ:

ಹಂಪಿ ಉತ್ಸವದ ಮೂರನೇ ದಿನ ಎಲ್ಲೆಡೆ ಜನರು ಸಾಗರೋಪಾದಿಯಲ್ಲಿ ಆಗಮಿಸಿದ್ದರು. ಅದರಲ್ಲೂ ಪ್ರಧಾನ ವೇದಿಕೆಗೆ ಅಪರಾಹ್ನ 4 ಗಂಟೆಯಿಂದಲೇ ಜನರ ದಂಡೇ ಸೇರಿತ್ತು. ಸಂಜೆ 6:30 ಆಗುತ್ತಲೇ ಕುರ್ಚಿಗಳು ಫುಲ್‌ ಆಗಿದ್ದವು. ವಿಐಪಿ, ವಿವಿಐಪಿ ಪಾಸುಗಳು ಇದ್ರೂ ಜನರು ವಾಪಸ್‌ ಹೋಗುವ ಸ್ಥಿತಿ ನಿರ್ಮಾಣ ಆಗಿತ್ತು. ಎಲ್ಲಾ ಕುರ್ಚಿಗಳು ಫುಲ್‌ ಆಗಿದ್ದರಿಂದ ಜನರು ನಿಂತುಕೊಂಡೇ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು.

ಬಂಡೆಗಳ ಮೇಲೂ ಜನರು:

ಹಂಪಿ ಉತ್ಸವದಲ್ಲಿ ಜಾನಪದ ವಾಹಿನಿ ವೀಕ್ಷಣೆಗೆ ಜನರು ಬಂಡೆಗಳ ಮೇಲೆ ಕುಳಿತು ವೀಕ್ಷಿಸಿದರು. ಕೆಲ ಸ್ಮಾರಕಗಳ ಬಳಿಯೂ ಜನರು ಕುಳಿತು ವೀಕ್ಷಣೆ ಮಾಡಿದರು. ಉತ್ಸವದಲ್ಲಿ ಜನರು ಭಾರೀ ಪ್ರಮಾಣದಲ್ಲಿ ಜನರು ಜಮಾಯಿಸಿದ್ದರು. ಹಂಪಿಯಲ್ಲಿ ಜಾತ್ರೆ ಮಾದರಿಯಲ್ಲಿ ಜನರು ಸೇರಿದ್ದರು. ಜಾನಪದ ವಾಹಿನಿಯನ್ನು ಬಿಸಿಲು ಲೆಕ್ಕಿಸದೇ ಜನರು ವೀಕ್ಷಿಸಿದರು.

ಹಂಪಿ ಉತ್ಸವದಲ್ಲಿ ಜನ ಕಂಡು ಉತ್ಸಾಹ:

ಹಂಪಿ ಉತ್ಸವದಲ್ಲಿ ಭಾರೀ ಸಂಖ್ಯೆಯಲ್ಲಿ ಜನಸ್ತೋಮ ಕಂಡು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ಅವರು ಹಂಪಿ ಉತ್ಸವ ನಿಜಕ್ಕೂ ಯಶಸ್ವಿ ಆಗಿದೆ. ಈ ಮಾದರಿಯಲ್ಲಿ ನಾವು ಉತ್ಸವ ಆಚರಿಸೋಣ. ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸುವ ಕಾರ್ಯಕ್ಕೆ ಕನ್ನಡಿಗರು ಸದಾ ಮುಂದಿದ್ದಾರೆ. ಹಂಪಿ ಉತ್ಸವದಲ್ಲಿ ಸಾಗರೋಪಾದಿಯಲ್ಲಿ ಜನರು ಬಂದಿದ್ದಾರೆ ಎಂದು ಗುಣಗಾನ ಮಾಡಿದ್ದರು.

ಜಾಮ್‌.. ಜಾಮ್‌.. ಎಲ್ನೋಡಿ ಜಾಮ್‌:

ಹಂಪಿ ಉತ್ಸವದ ಮೂರನೇ ದಿನ ಹಂಪಿ ಉತ್ಸವಕ್ಕೆ ಜನ ಸಾಗರವೇ ಹರಿದು ಬಂದಿದ್ದು, ಕೊನೇ ದಿನ ಹಂಪಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಉತ್ಸವದಲ್ಲಿ ಭಾಗಿಯಾಗಲು ದೂರದೂರುಗಳಿಂದಲೂ ಜನರ ದಂಡೇ ಹರಿದು ಬಂದಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಕೂಡ ಹೈರಾಣಾದರು. ಕೆಲ ಪೊಲೀಸರು ತಮ್ಮ ಕರ್ತವ್ಯಸ್ಥಳಕ್ಕೆ ತೆರಳಲು ಜಾಮ್‌ನಲ್ಲಿ ಸಿಲುಕಿಕೊಂಡು ಪರದಾಡಿದರು.

ಹಂಪಿ ಉತ್ಸವದಲ್ಲಿ ವೇದಿಕೆಗಳಿಗೆ ಕಲಾವಿದರು ತೆರಳಲು ಕೂಡ ಪರದಾಡಿದರು. ಹಲವು ಕಲಾವಿದರ ವಾಹನಗಳು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡಿದ್ದವು. ಎಸ್ಪಿ ಶ್ರೀಹರಿಬಾಬು ಅವರು ಟ್ರಾಫಿಕ್‌ ನಿಯಂತ್ರಿಸಲು ಪೊಲೀಸ್‌ ಸಿಬ್ಬಂದಿಗೆ ನಿರ್ದೇಶನ ನೀಡಿದರು.

ವೇದಿಕೆಗಳಲ್ಲಿ ಕುಣಿದು ಕುಪ್ಪಳಿಸಿದ ಜನ:

ಹಂಪಿ ಉತ್ಸವದ ವೇದಿಕೆಗಳಲ್ಲಿ ಜನರು ಕುಣಿದು ಕುಪ್ಪಳಿಸಿದರು. ತಮ್ಮ ನೆಚ್ಚಿನ ನಟರ ಕಾರ್ಯಕ್ರಮ ವೀಕ್ಷಿಸಿದ ಜನರು ಗಾಯನಗಳಿಗೆ ಕುಣಿದು ಕುಪ್ಪಳಿಸಿದರು.

ಹಂಪಿ ಉತ್ಸವದಲ್ಲಿ ಮೂರು ದಿನವೂ ಎಲ್ಲಾ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಫಲಪುಷ್ಪ ಪ್ರದರ್ಶನ, ಕೃಷಿ ಪ್ರದರ್ಶನ, ಕರಕುಶಲ ಪ್ರದರ್ಶನ ನಡೆಯಿತು. ವಿಜಯನಗರದ ಗತ ವೈಭವವನ್ನು ಮರುಕಳಿಸುವ ಮಾದರಿಯಲ್ಲಿ ನಡೆದ ಉತ್ಸವದಲ್ಲಿ ಜನರು ಕೂಡ ಅಷ್ಟೇ ಉತ್ಸಾಹದಿಂದ ಭಾಗಿಯಾಗಿ ಸಂಪನ್ನಗೊಳಿಸಿದರು. ಈ ಉತ್ಸವ ಈ ನೆಲದಲ್ಲಿ ಮತ್ತೊಮ್ಮೆ ವಿಜಯನಗರ ವೈಭವ ಸೃಷ್ಟಿಸುವ ಉತ್ಸವ ಆಗಲಿ ಎಂಬ ಆಶಯದೊಂದಿಗೆ ಸಂಪನ್ನಗೊಂಡಿತು.