ಹಂಪಿ ಉತ್ಸವ: ವಿಜಯನಗರ ವಾಸ್ತುಶಿಲ್ಪ ಮಾದರಿ ವೇದಿಕೆ ನಿರ್ಮಾಣ

| Published : Feb 11 2025, 12:47 AM IST

ಸಾರಾಂಶ

ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ನಾಲ್ಕು ವೇದಿಕೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ನಾಲ್ಕು ವೇದಿಕೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರಲ್ಲೂ ಗಾಯತ್ರಿಪೀಠದ ಬಯಲು ಜಾಗದಲ್ಲಿ ವಿಜಯನಗರ ವಾಸ್ತುಶಿಲ್ಪ ಮಾದರಿಯಲ್ಲಿ ಪ್ರಮುಖ ವೇದಿಕೆ ನಿರ್ಮಾಣ ಕಾರ್ಯ ಆರಂಭವಾಗಲಿದೆ.

ಹಂಪಿಯಲ್ಲಿ ಉಡುಪಾಸ್‌ ಎಂಟರ್‌ಪ್ರೈಸಸ್‌ ವತಿಯಿಂದ ವೇದಿಕೆಗಳ ನಿರ್ಮಾಣ ಕಾರ್ಯ ನಡೆಯಲಿದೆ. ಎದುರು ಬಸವಣ್ಣ ಮಂಟಪ, ವಿರೂಪಾಕ್ಷೇಶ್ವರ ದೇವಾಲಯದ ಆವರಣ, ಸಾಸಿವೆಕಾಳು ಗಣಪತಿ ಮಂಟಪದ ಬಳಿ ವೇದಿಕೆಗಳ ನಿರ್ಮಾಣ ಕಾರ್ಯ ನಡೆಯಲಿದೆ.

ಇನ್ನು ಗಜಶಾಲೆ ಬಳಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕಾಗಿ 12 ಕಿರುವೇದಿಕೆಗಳ ನಿರ್ಮಾಣ ಕಾರ್ಯ ನಡೆಯಲಿದೆ. ಹಂಪಿ ಉತ್ಸವದಲ್ಲಿ ನಾಡಿನ ಕಲಾವಿದರು ಹಾಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಕಲಾವಿದರು ಹಂಪಿ ಗತವೈಭವ ಮರುಕಳಿಸುವ ನಿಟ್ಟಿನಲ್ಲಿ ಕಲೆ ಅನಾವರಣಗೊಳಿಸಲಿದ್ದಾರೆ. ಇದಕ್ಕಾಗಿ ವೇದಿಕೆ ನಿರ್ಮಾಣ ಕಾರ್ಯದ ಪೂಜೆ ಫೆ. 12ರಂದು ನಡೆಯಲಿದೆ.

ಹಂಪಿ ಉತ್ಸವದಲ್ಲಿ ವೇದಿಕೆ ನಿರ್ಮಾಣ ಕಾರ್ಯದಲ್ಲಿ ಅನುಭವ ಇರುವ ಉಡುಪಾಸ್‌ ಎಂಟರ್‌ಪ್ರೈಸಸ್‌ಗೆ ನೀಡಲಾಗಿದೆ. ಈಗ ಪ್ರಮುಖ ವೇದಿಕೆಯ ಸ್ವರೂಪದ ಕುರಿತು ಡಿಸೈನ್‌ ಅನ್ನು ನುರಿತ ತಜ್ಞರು ಸಿದ್ಧಪಡಿಸುತ್ತಿದ್ದಾರೆ. ಫೆ.12ರ ಹೊತ್ತಿಗೆ ಈ ಡಿಸೈನ್‌ ಕೈ ಸೇರಿದ ಬಳಿಕವೇ ವೇದಿಕೆ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದು ಉಡುಪಾಸ್‌ ಎಂಟರ್ ಪ್ರೈಸಸ್‌ನ ಸಿದ್ದಿಕ್‌ ಅವರು ''''ಕನ್ನಡಪ್ರಭ''''ಕ್ಕೆ ತಿಳಿಸಿದರು.

ಹಂಪಿ ಉತ್ಸವದ ವೇದಿಕೆ ನಿರ್ಮಾಣಕ್ಕಾಗಿ ಮೆಟಿರಿಯಲ್‌ ಈ ದಿನ ಬಂದಿದೆ. ಫೆ.12ರಂದು ಪೂಜಾ ಕಾರ್ಯ ನಡೆಸಿ ವೇದಿಕೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌.