ಹಂಪಿ ಕನ್ನಡ ವಿಶ್ವವಿದ್ಯಾಲಯ ವಿದ್ಯುತ್‌ ಬಿಲ್‌ ಬಾಕಿ ಮೊತ್ತ ಪಾವತಿಗೆ ಅಸ್ತು

| Published : Mar 26 2024, 01:16 AM IST

ಹಂಪಿ ಕನ್ನಡ ವಿಶ್ವವಿದ್ಯಾಲಯ ವಿದ್ಯುತ್‌ ಬಿಲ್‌ ಬಾಕಿ ಮೊತ್ತ ಪಾವತಿಗೆ ಅಸ್ತು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ವಿವಿ 2019ರ ಮಾರ್ಚ್‌ನಿಂದ 2024ರ ಫೆಬ್ರವರಿವರೆಗೆ ₹1.05 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿತ್ತು.

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯ ಗುಲ್ಬರ್ಗಾ ವಿದ್ಯುತ್‌ ಸರಬರಾಜು (ಜೆಸ್ಕಾಂ) ಕಂಪನಿಗೆ ಬಾಕಿ ಉಳಿಸಿಕೊಂಡಿದ್ದ ಬರೋಬ್ಬರಿ ₹1.05 ಕೋಟಿಯನ್ನು ಉನ್ನತ ಶಿಕ್ಷಣ ಇಲಾಖೆಯೇ ಪುನರ್ವಿನಿಯೋಗ ಮೂಲಕ ಪಾವತಿಗೆ ಮಾ.25ರಂದು ಆದೇಶಿಸಿದೆ.

ಕನ್ನಡ ವಿವಿ 2019ರ ಮಾರ್ಚ್‌ನಿಂದ 2024ರ ಫೆಬ್ರವರಿವರೆಗೆ ₹1.05 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿತ್ತು. ಲೆಕ್ಕ ಶೀರ್ಷಿಕೆ ಸಹಾಯಾನುದಾನ- ಸಾಮಾನ್ಯ ಅಡಿಯಲ್ಲಿ ಪುನರ್ವಿನಿಯೋಗದ ಮೂಲಕ ಒದಗಿಸಿ ಬಿಡುಗೊಡೆಗೊಳಿಸಿ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಎನ್‌.ಕುಮಾರ್‌ ಆದೇಶಿಸಿದ್ದಾರೆ.

ಈ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಒದಗಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ನಿಯಮಾನುಸಾರ ವೆಚ್ಚ ಮಾಡತಕ್ಕದ್ದು ಎಂದು ಸೂಚಿಸಿದ್ದಾರೆ.

ಕನ್ನಡಪ್ರಭಕ್ಕೆ ವಿಶೇಷ ಕೃತಜ್ಞತೆ: ಹಂಪಿ ಕನ್ನಡ ವಿವಿಯ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಕನ್ನಡಪ್ರಭ ವಿಶೇಷ ವರದಿಗಳನ್ನು ಪ್ರಕಟಿಸಿತ್ತು. 2023ರ ಅಕ್ಟೋಬರ್‌ 30ರಂದು "ಹಣಕಾಸಿನ ಮುಗ್ಗಟ್ಟಿನಲ್ಲಿ ಹಂಪಿ ಕನ್ನಡ ವಿವಿ! " ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಬೆಳಕು ಚೆಲ್ಲಿತ್ತು. ಇನ್ನು ಬೆಳಗಾವಿ ಅಧಿವೇಶನದ ವೇಳೆಯೂ ಕನ್ನಡಪ್ರಭ ವಿವಿಯ ಆರ್ಥಿಕ ಸ್ಥಿತಿಯ ಬಗ್ಗೆ ವರದಿ ಪ್ರಕಟಿಸಿತ್ತು. ಬಜೆಟ್‌ ನಿರೀಕ್ಷೆ ಸರಣಿ ಮಾಲಿಕೆ ವೇಳೆಯೂ ಹಂಪಿ ಕನ್ನಡ ವಿವಿಗೂ ಅನುದಾನ ದೊರೆಯಲಿ ಎಂದು ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡಪ್ರಭ ವಿವಿ ಆರ್ಥಿಕ ಸ್ಥಿತಿ ಬಗ್ಗೆ ವರದಿ ಪ್ರಕಟಿಸಿದ್ದನ್ನು ಸ್ಮರಿಸಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮಾ.25ರಂದು ಕನ್ನಡಪ್ರಭಕ್ಕೆ ಪತ್ರ ಬರೆದು, ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.

"ಕನ್ನಡ ವಿವಿಯ ಅನೇಕ ಸಮಸ್ಯೆಗಳನ್ನು ತಮ್ಮ ಪತ್ರಿಕೆ ಮೂಲಕ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ತಿಳಿಸುವ ಮೂಲಕ ಆ ಕಷ್ಟಗಳ ನಿವಾರಣೆಗೆ ಪ್ರಯತ್ನಪಟ್ಟಿರುವಿರಿ. ಈ ಪ್ರಯತ್ನದ ಫಲವಾಗಿ ವಿದ್ಯುತ್‌ ಇಲಾಖೆಗೆ ಪಾವತಿ ಮಾಡಬೇಕಾಗಿದ್ದ ಬಿಲ್ಲಿನ ಮೊತ್ತ ₹1.05 ಕೋಟಿ ಮಂಜೂರು ಮಾಡಿರುವುದಾಗಿ ಉನ್ನತ ಶಿಕ್ಷಣ, ಹಣಕಾಸು ಇಲಾಖೆಯಿಂದ ಪತ್ರ ಬಂದಿದೆ. ವಿಶ್ವವಿದ್ಯಾಲಯದ ಕಷ್ಟ ನೀಗಿದಂತಾಗಿದೆ. ಇದಕ್ಕಾಗಿ ಕನ್ನಡಪ್ರಭಕ್ಕೆ ವಿಶ್ವವಿದ್ಯಾಲಯದ ಪರವಾಗಿ ಮತ್ತು ವೈಯಕ್ತಿಕವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ " ಎಂದು ಕನ್ನಡ ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.