ಹಂಪಿ ಪ್ರವಾಸಿಗರಿಗೆ ಬೇಕಿದೆ ನೆರಳಿನ ವ್ಯವಸ್ಥೆ!

| Published : Feb 12 2024, 01:31 AM IST

ಸಾರಾಂಶ

ಹಂಪಿಯಲ್ಲಿ ಪ್ರವಾಸಿಗರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ, ಪ್ರವಾಸಿಗರಿಗೂ ಅನುಕೂಲವಾಗಲಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಹಂಪಿ ಉತ್ಸವದ ಬಳಿಕ ಹಂಪಿ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಈಗ ಬಿಸಿಲಿನ ತಾಪಮಾನ ಶುರುವಾಗಿರುವ ಹಿನ್ನೆಲೆಯಲ್ಲಿ ಬ್ಯಾಟರಿಚಾಲಿತ ವಾಹನಗಳಿಗಾಗಿ ಕಾಯುವ ಪ್ರವಾಸಿಗರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಬೇಕೆಂಬ ಕೂಗು ಕೇಳಿಬರತೊಡಗಿದೆ.

ಹಂಪಿ ಉತ್ಸವದಲ್ಲಿ ಮೂರು ದಿನಗಳಲ್ಲಿ ಬರೋಬ್ಬರಿ ಹತ್ತು ಲಕ್ಷಕ್ಕೂ ಹೆಚ್ಚು ಜನಸಾಗರ ಹರಿದುಬಂದಿದೆ. ಜಿಲ್ಲಾಡಳಿತ ₹14 ಕೋಟಿಗೂ ಅಧಿಕ ಹಣ ಖರ್ಚು ಮಾಡಿ ಮೂರು ದಿನಗಳ ವರೆಗೆ ಹಂಪಿ ಉತ್ಸವ ನಡೆಸಿದೆ. ಇನ್ನೂ ಏಳು ದಿನ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆದಿದೆ. ಈಗ ಹಂಪಿ ಸ್ಮಾರಕಗಳ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿ- 20 ಶೃಂಗಸಭೆಯಿಂದ ಆರಂಭಗೊಂಡಿರುವ ಪ್ರವಾಸಿಗರ ದಂಡು ಹಂಪಿಗೆ ಹರಿದು ಬರುತ್ತಿರುವುದು ಇನ್ನೂ ನಿಂತಿಲ್ಲ. ಹಂಪಿ ಈಗ ಪ್ರಮುಖ ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟಿದೆ.

ಪ್ರವಾಸಿಗರ ನೆಚ್ಚಿನ ತಾಣ: ಈ ಮೊದಲು, ಗೋವಾ, ಕೇರಳಕ್ಕೆ ಹೋಗಿ ಬಳಿಕ ಹಂಪಿಯತ್ತ ದೇಶ- ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಈಗ ಎಲ್ಲವೂ ಉಲ್ಟಾ ಆಗಿದ್ದು, ಹಂಪಿಗೆ ಬಂದ ಬಳಿಕವೇ ದೇಶದ ಉಳಿದ ತಾಣಗಳಿಗೆ ತೆರಳುತ್ತಿದ್ದಾರೆ. ಹಾಗಾಗಿ ಹಂಪಿಯ ಸ್ಮಾರಕಗಳೇ ಪ್ರವಾಸಿಗರ ಪ್ರಮುಖ ಆಕರ್ಷಣೀಯ ತಾಣವಾಗಿ ಮಾರ್ಪಡುತ್ತಿದೆ. ಪ್ರವಾಸಿಗರಿಗೂ ಅನುಕೂಲ ಕಲ್ಪಿಸಬೇಕೆಂಬ ಕೂಗು ಕೇಳಲಾರಂಭಿಸಿದೆ.

ಆಗಲಿ ನೆರಳಿನ ವ್ಯವಸ್ಥೆ: ಹಂಪಿಯ ಗೆಜ್ಜಲ ಮಂಟಪದ ಬಳಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ನೆರಳಿನ ವ್ಯವಸ್ಥೆ ಮಾಡಿದೆ. ಬ್ಯಾಟರಿ ಚಾಲಿತ ವಾಹನ ಏರುವಾಗ ಇರುವ ಸೌಲಭ್ಯ, ವಿಜಯ ವಿಠ್ಠಲ ದೇವಸ್ಥಾನ, ಕಲ್ಲಿನತೇರು, ರಾಜರ ತುಲಾಭಾರ, ಪುರಂದರದಾಸರ ಮಂಟಪ, ವಿಷ್ಣು ದೇವಾಲಯ, ವಿಜಯ ವಿಠ್ಠಲ ಬಜಾರ, ಪುಷ್ಕರಣಿ ಸೇರಿದಂತೆ ವಿವಿಧ ಸ್ಮಾರಕಗಳನ್ನು ವೀಕ್ಷಿಸಿ ಮರಳಿ ಬರುವಾಗ ನೆರಳಿನ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ಪ್ರವಾಸಿಗರು ಬಿಸಿಲಿನಲ್ಲೇ ಬ್ಯಾಟರಿಚಾಲಿತ ವಾಹನಗಳಿಗಾಗಿ ಕಾಯುವ ಸ್ಥಿತಿ ಇದೆ.

ಬ್ಯಾಟರಿ ಚಾಲಿತ ವಾಹನಗಳನ್ನು ಏರಲು ವಿಜಯ ವಿಠ್ಠಲ ದೇವಾಲಯದ ಬಳಿ ಪ್ರವಾಸಿಗರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಪ್ರವಾಸಿಗರು ಬ್ಯಾಟರಿಚಾಲಿತ ವಾಹನಗಳಿಗಾಗಿ ಎರಡು ಬದಿಯ ಟಿಕೆಟ್‌ ಪಡೆದಿರುತ್ತಾರೆ. ಹಾಗಾಗಿ ಈ ಸ್ಥಳದಲ್ಲಿ ವಾಹನಗಳಿಗಾಗಿ ಕಾದು ಮರಳಿ ಬರುತ್ತಾರೆ. ಆದರೆ, ಇಲ್ಲಿ ನೆರಳಿನ ವ್ಯವಸ್ಥೆ ಮಾಡದ್ದರಿಂದ ಪ್ರವಾಸಿಗರು ಬಿಸಿಲಿನ ತಾಪಮಾನಕ್ಕೆ ಬಸಿವಳಿಯುತ್ತಿದ್ದಾರೆ.

ಹಂಪಿಯಲ್ಲಿ ಪ್ರವಾಸಿಗರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ, ಪ್ರವಾಸಿಗರಿಗೂ ಅನುಕೂಲವಾಗಲಿದೆ. ಫೆಬ್ರವರಿಯಲ್ಲೇ ಬಿಸಿಲು ಏರಿದೆ, ಮಾರ್ಚ್, ಏಪ್ರಿಲ್‌ನಲ್ಲಿ ಬಿಸಲಿನ ತಾಪಮಾನ ಇನ್ನಷ್ಡು ಹೆಚ್ಚಲಿದ್ದು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದರೆ ಪ್ರವಾಸಿಗರಿಗೂ ಅನುಕೂಲವಾಗಲಿದೆ ಎಂಬುದು ಪ್ರವಾಸಿಗರ ಒತ್ತಾಯವಾಗಿದೆ.

ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಬಹುತೇಕ ಪ್ರವಾಸಿಗರು ಗೆಜ್ಜಲ ಮಂಟಪದಿಂದ ನಡೆದುಕೊಂಡು ತೆರಳುತ್ತಾರೆ. ಈ ರಸ್ತೆಯಲ್ಲಿ ಧೂಳು ಏಳದಂತೆ ಕ್ರಮವಹಿಸಲಿ ಎಂಬ ಬೇಡಿಕೆಯೂ ಇದೆ. ನೀರು ಸಿಂಪರಣೆ ಮಾಡಿದರೆ ಅನುಕೂಲವಾಗಲಿದೆ ಎಂಬುದು ಪ್ರವಾಸಿಗರ ಅಭಿಪ್ರಾಯವಾಗಿದೆ. ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿದರೆ ಇನ್ನಷ್ಟು ಪ್ರವಾಸೋದ್ಯಮ ಬೆಳವಣಿಗೆ ಕಾಣಲಿದೆ ಎಂಬುದು ಸ್ಥಳೀಯರ ಆಗ್ರಹ.ಸೌಕರ್ಯ ಕಲ್ಪಿಸಿ: ಹಂಪಿಯ ವಿಜಯ ವಿಠ್ಠಲ ದೇವಾಲಯದ ಬಳಿ ಬ್ಯಾಟರಿಚಾಲಿತ ವಾಹನಕ್ಕಾಗಿ ಕಾಯಬೇಕಾಗುತ್ತದೆ. ಇಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಗೆಜ್ಜಲ ಮಂಟಪದ ಬಳಿ ಮಾಡಿದ್ದಂತೆ ಇಲ್ಲೂ ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಹಂಪಿಯ ಪ್ರಮುಖ ಸ್ಮಾರಕಗಳ ಬಳಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮೂಲ ಸೌಕರ್ಯ ಕಲ್ಪಿಸಿದರೆ ಉತ್ತಮ ಎಂದು ಪ್ರವಾಸಿಗರಾದ ರಾಜೀವ್‌ಕುಮಾರ, ನರೇಶ್ ಆಗ್ರಹಿಸಿದರು.