ಹಂಪಿ ಉತ್ಸವ ಜಾನಪದ ವಾಹಿನಿಗೆ ಜನ ಜಾತ್ರೆ

| Published : Feb 05 2024, 01:48 AM IST / Updated: Feb 05 2024, 12:28 PM IST

ಸಾರಾಂಶ

ಜಾನಪದ ವಾಹಿನಿಯು ಗ್ರಾಮೀಣ ಭಾಗದ ಜಾನಪದ ಕಲಾವಿದರಿಂದ ತುಂಬಿಕೊಂಡಿತ್ತು.ಅಂದಿನ ವಿಜಯನಗರ ಸಾಮ್ರಾಜ್ಯದಲ್ಲಿ ವಿರೋಧಿಗಳನ್ನು ಯುದ್ಧದಲ್ಲಿ ಸೋಲಿಸಿ ಜಯ ಸಿಕ್ಕ ಬಳಿಕ ನಡೆಯುವ ಸಂಭ್ರಮಾಚರಣೆಯಂತೆ ಜಾನಪದ ವಾಹಿನಿ ಭಾಸ

ಚಂದ್ರು ಕೊಂಚಿಗೇರಿ ಹಂಪಿ

ಹಂಪಿ ಉತ್ಸವದಲ್ಲಿ ಆಯೋಜಿಸಿದ್ದ ಜಾನಪದ ವಾಹಿನಿ ಕಾರ್ಯಕ್ರಮ ವಿಜಯನಗರ ಅರಸ ಕೃಷ್ಣದೇವರಾಯನ ಪಟ್ಟಾಭಿಷೇಕ ನೆನಪಿಸುವಂತಿತ್ತು. 

ಗತ ಕಾಲದ ವೈಭವ ಹಾಗೂ ಸಾಂಸ್ಕೃತಿಕ ಪರಂಪರೆ ಪ್ರತಿಬಿಂಬಿಸುವ ಗ್ರಾಮೀಣ ಭಾಗದ ಎಲ್ಲ ಕಲಾ ಪ್ರಕಾರಗಳ ಜಾನಪದ ಕಲೆಯ ಅನಾವರಣ ಜನ ನೋಡಿ ಕಣ್ಮುಂಬಿಕೊಂಡರು.

ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಜಾನಪದ ವಾಹಿನಿಗೆ ಶಾಸಕ ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಸೇರಿದಂತೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು.

ಜಾನಪದ ವಾಹಿನಿಯು ಗ್ರಾಮೀಣ ಭಾಗದ ಜಾನಪದ ಕಲಾವಿದರಿಂದ ತುಂಬಿಕೊಂಡಿತ್ತು.ಅಂದಿನ ವಿಜಯನಗರ ಸಾಮ್ರಾಜ್ಯದಲ್ಲಿ ವಿರೋಧಿಗಳನ್ನು ಯುದ್ಧದಲ್ಲಿ ಸೋಲಿಸಿ ಜಯ ಸಿಕ್ಕ ಬಳಿಕ ನಡೆಯುವ ಸಂಭ್ರಮಾಚರಣೆಯಂತೆ ಜಾನಪದ ವಾಹಿನಿ ಭಾಸವಾಗಿತ್ತು. 

ಕಹಳೆ ಕಂಸಾಳೆಯ ನಾದ ನಿನಾದಕ್ಕೆ ನೆರೆದಿದ್ದ ಪ್ರೇಕ್ಷಕರು ಹೆಜ್ಜೆ ಹಾಕುತ್ತಿದ್ದರು, ಸೀಳ್ಳೆ ಕೇಕೆ ಹಾಕುತ್ತಾ ಕಲಾವಿದರಿಗೆ ಹುಮ್ಮಸ್ಸು ತುಂಬುತ್ತಿದ್ದರು.

ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ ಹೋಗುವ ರಾಜಬೀದಿಯಲ್ಲಿ ನೆರೆದಿದ್ದ ಅಪಾರ ಪ್ರಮಾಣದ ಜನಸ್ತೋಮ, ತಮ್ಮ ಮೊಬೈಲ್‌ಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಜತೆಗೆ ವಿದೇಶಿಗರು ಭಾರತದ ಜಾನಪದ ಕಲಾ ಪ್ರಕಾರ ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿದ್ದರು.

ಎಚ್.ಕೆ. ಕಾರಮಂಚಪ್ಪ ಮತ್ತು ತಂಡ ಮಲಪನಗುಡಿಯ ಡೊಳ್ಳು ಕುಣಿತ, ಸುಬ್ಬರಾಯಡು ಮತ್ತು ತಂಡ ಹೊಸಪೇಟೆ ನಾದಸ್ವರ, ಕೆ ವೀರೇಶ ಮತ್ತು ತಂಡ, ಹೊಸಪೇಟೆಯ ಕಹಳೆ ವಾದ್ಯ, ಬಸವೇಶ್ವರ ಸಮಾಳ ಮತ್ತು ನಂದಿಧ್ವಜ ಸಾಂಸ್ಕೃತಿಕ ಕಲಾ ಸೇವಾ ಟ್ರಸ್ಟ್ ಚಾಡಾಪುರ ಸಮಾಳ ಮತ್ತು ನಂದಿಧ್ವಜ, ಎಚ್.ಕೆ. ರಮೇಶ ಮತ್ತು ತಂಡ ಮಲಪನಗುಡಿ ಡೊಳ್ಳು ಕುಣಿತ, 

ಎಚ್.ಲಕ್ಷ್ಮಪ್ಪ ಮತ್ತು ತಂಡ ಕಡ್ಲಬಾಳು ಮಂಗಳ ವಾದ್ಯ, ವಾಸುದೇವ ಬನ್ನಂಜೆ ಮತ್ತು ತಂಡದವರು, ಉಡುಪಿ ಇವರ ಚೆಂಡೆ ವಾದ್ಯ ಸಿಂಗಾರ ಮೇಳ, ಹರೀಶ್ ಎನ್ ಮತ್ತು ತಂಡ ಚಾಮರಾಜನಗರದ ಕಂಸಾಳೆ ನೃತ್ಯ, ಶೇಕಪ್ಪ ಮತ್ತು ತಂಡ ಜಂಬುನಾಥನಹಳ್ಳಿ ಹೊಸಪೇಟೆ ಇವರ ಸುಡುಗಾಡು ಸಿದ್ದರ ಕೈಚಳ ಮತ್ತು ಚಮತ್ಕಾರ, 

ಜಿ.ಎಂ. ಕುಮಾರ್ ಮತ್ತು ತಂಡ ಗಾಮನಹಳ್ಳಿ. ಮಂಡ್ಯ ಇವರ ಸಂಸ್ಕೃತಿ ಜನಪದ ಕಲೆ, ಸಂತೋಷ ಆಟೋ ಮತ್ತು ತಂಡ, ಗಂಗನಕಟ್ಟೆ ಇವರ ಚಿಲಿಪಿಲಿ ಬೊಂಬೆ ನೃತ್ಯ,ಎ.ಕೆ.ಮಾರೆಪ್ಪ ಇವರ ತಮಟೆ ವಾದನ, ಜಿ.ಗೌತಮ ಮತ್ತು ತಂಡ ಚಿತ್ರದುರ್ಗ ಇವರ ಹಲಗೆ ವಾದನ, 

ಇಟ್ಟಗಿ ಗ್ರಾಮದ ಬಸವೇಶ್ವರ ಸಮಾಳ ಮತ್ತು ನಂದಿಕೋಲು ಸಂಘದವರ ಸಮಾಳ ನಂದಿಕೋಲು ಕುಣಿತ, ಕೆ. ರಮೇಶ ಮತ್ತು ತಂಡ ಗಾದಿಗನೂರು ಇವರ ಹಲಗೆ ವಾದನ, ಎ.ಬಿ. ಸುನಿಲ್ ಕುಮಾರ್ ಮತ್ತು ತಂಡ ಮದ್ದೂರು, ಮಂಡ್ಯ ಇವರ ವೀರಗಾಸೆ ನೃತ್ಯ, ಡಿ.ಕೊಟ್ರೇಶ್ ಮತ್ತು ತಂಡ ಸೋಗಿ ಇವರ ಗೊಂಬೆ ಕುಣಿತ, 

ಎಸ್ ಯೋಗೀಶ್ ಮತ್ತು ತಂಡ, ಸೋಗಿ ಚಿಲಿಪಿಲಿ ಗೊಂಬೆ ಕುಣಿತ, ಚೇತನ್ ಮತ್ತು ತಂಡ ಅನೇಕಲ್ ಇವರ ವೀರಗಾಸೆ ನೃತ್ಯ, ಹರಪನಹಳ್ಳಿ ನುರುಲ್ಲಾ ಇವರ ಕೀಲು ಗೊಂಬೆ ಕುಣಿತ, ಮೋತಿ ನಾಗರಾಜ ಮತ್ತು ತಂಡ ದಾವಣಗೆರೆ ಇವರ ಜಾನಪದ ನೃತ್ಯ ಎಲ್ಲರ ಗಮನ ಸೆಳೆಯಿತು.