ಹೊಸಪೇಟೆ: ಹಂಪಿಯೇ ಒಂದು ವಸ್ತು ಸಂಗ್ರಹಾಲಯವಾಗಿದೆ. ಹಂಪಿಯ ಇತಿಹಾಸ ಮತ್ತು ಸ್ಮಾರಕಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಂಡು ಹಂಪಿಯನ್ನು ಪ್ರತಿಯೊಬ್ಬರು ಸಂರಕ್ಷಿಸಬೇಕಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಹೇಳಿದರು.

ತಾಲೂಕಿನ ಕಮಲಾಪುರದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಹಂಪಿ ವೃತ್ತ ಹಾಗೂ ವಿರೂಪಾಕ್ಷೇಶ್ವರ ಪದವಿ ಕಾಲೇಜು, ಹಂಪಿ ಪ್ಯಾಲೇಸ್ ಹೋಟೆಲ್ ಸಂಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವ ಪರಂಪರಾ ತಾಣವಾದ ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯ ಮತ್ತು ವಿಜಯನಗರ ಸಾಮ್ರಾಜ್ಯದ ಪೂರ್ವದಲ್ಲಿ ಆಳ್ವಿಕೆ ಮಾಡಿದಂತಹ ಸಾಮ್ರಾಜ್ಯಗಳ ಕುರಹಗಳು ಹಾಗೂ ಸ್ಮಾರಕಗಳು, ನಾಣ್ಯಗಳು, ಶಾಸನಗಳು ಸೇರಿದಂತೆ ಹಂಪಿಯ ಇತಿಹಾಸಕ್ಕೆ ಸಂಬಂಧಿಸಿದ ಇತರೆ ವಸ್ತುಗಳನ್ನು ಸಂರಕ್ಷಣೆ ಮಾಡುವ ಕೆಲಸವನ್ನು ವಸ್ತು ಸಂಗ್ರಾಲಯ ಇಲಾಖೆ ಮಾಡುತ್ತಿರುವುದರಿಂದ ಇಂದು ನಾವು ಮತ್ತು ಮುಂದಿನ ಪೀಳಿಗೆಗೆ ಇತಿಹಾಸದ ಮಹತ್ವವನ್ನು ತಿಳಿಯಲು ಅನುಕೂಲವಾಗಿದೆ ಎಂದು ಅವರು ಹೇಳಿದರು.

ವಿಶ್ವ ಪರಂಪರ ಪಟ್ಟಿಗೆ 1986ರಲ್ಲಿ ಹಂಪಿಯು ಮೊಟ್ಟಮೊದಲ ಬಾರಿಗೆ ಕರ್ನಾಟಕದಿಂದ ಆಯ್ಕೆಯಾಗಿದ್ದು, ಇಲ್ಲಿನ ಶ್ರೀಮಂತ ಪರಂಪರೆ ಸಂಸ್ಕೃತಿ ಮತ್ತು ಸ್ಮಾರಕಗಳನ್ನು ಗಮನಿಸಿದ ಯುನೆಸ್ಕೋ ಹಂಪಿಗೆ ಒಂದು ಬಿರುದನ್ನು ಕೂಡ ನೀಡಿದ್ದು, ಹಂಪಿಯು ಪ್ರಪಂಚದ ಜೀವಂತ ಬಯಲು ವಸ್ತು ಸಂಗ್ರಹಾಲಯ ಎಂದು ಹೇಳಿ ಮೆಚ್ಚಿಗೆ ವ್ಯಕ್ತಪಡಿಸಿದೆ. ಇಂತಹ ಮಹತ್ವವನ್ನು ಹೊಂದಿರುವ ಐತಿಹಾಸಿಕ ಹಂಪಿಯನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ವಿರೂಪಾಕ್ಷೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಬಸವರಾಜ್ ಎಮ್ಮಿಗನೂರು ಮಾತನಾಡಿ, ಹಂಪಿಯಲ್ಲಿರುವ ದೇವಸ್ಥಾನಗಳು, ಸ್ಮಾರಕಗಳು ಸೇರಿದಂತೆ ಹಂಪಿಯ ವಸ್ತು ಸಂಗ್ರಹಾಲಯಗಳ ಬಗ್ಗೆ ವಿದ್ಯಾರ್ಥಿಗಳು, ಯುವಕರು ಮತ್ತು ಸ್ಥಳೀಯರು ಸಮಗ್ರವಾಗಿ ತಿಳಿದುಕೊಳ್ಳುವ ಮೂಲಕ ಹಂಪಿಯ ಇತಿಹಾಸವನ್ನು ಉಳಿಸಬೇಕಾಗಿದೆ ಎಂದು ಹೇಳಿದರು.


ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತ ಪುರಾತತ್ವ ಅಧೀಕ್ಷಕ ಕೆ. ರಾಮಕೃಷ್ಣ ರೆಡ್ಡಿ ಸಮಾರಂಭದ ಅಧ್ಯಕ್ಷತೆವಹಿಸಿಕೊಂಡು ಸಭೆಯಲ್ಲಿ ಮಾತನಾಡಿದರು.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಹಂಪಿ ವೃತ್ತ ಉಪ ಅಧಿಕ್ಷಕ ದೇವರಾಜ್, ಜೆಎಸ್‌ಡಬ್ಲ್ಯೂ ಪ್ರತಿನಿಧಿ ಪಂಕಜ್‌ ಕುಮಾರ್‌, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಸಿಬ್ಬಂದಿಗಳಾದ ಅಬ್ದುಲ್, ಕುಮಾರ್ ಇದ್ದರು.

ಕಾರ್ಯಕ್ರಮದ ನಂತರದ ವಸ್ತು ಸಂಗ್ರಹಾಲಯದ ಮಹತ್ವ ಹಾಗೂ ಇದರ ಪ್ರಾಮುಖ್ಯತೆ ಬಗ್ಗೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿಯನ್ನು ಮೂಡಿಸಲಾಯಿತು.

18ಎಚ್‌ಪಿಟಿ1

ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ ನಡೆದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯಲ್ಲಿ ಹಂಪಿ ವಿವಿಯ ಕುಲಸಚಿವ ಡಾ. ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿದರು.