ಮಾರುತಿ ಶಿಡ್ಲಾಪೂರ

ಹಾನಗಲ್ಲ: ರಾಜ್ಯದಲ್ಲಿಯೇ ಹಾನಗಲ್ಲ ಅತೀ ದೊಡ್ಡ ತಾಲೂಕಾಗಿದ್ದರೂ ಅಭಿವೃದ್ಧಿಯ ವಿಷಯದಲ್ಲಿ ಬೇಡಿಕೆಗಳ ಮಹಾಪೂರವೇ ಇದೆ. ಆದರೆ, ಪ್ರಗತಿ ಮಾತ್ರ ಆಮೆಗತಿಗಿಂತಲೂ ಕಡಿಮೆ ವೇಗದಲ್ಲಿದೆ.

ಪಟ್ಟಣಕ್ಕೆ ಒಳ ಚರಂಡಿ ವ್ಯವಸ್ಥೆಗೆ ₹60 ಕೋಟಿ ಬೇಡಿಕೆ ಇದೆ. ಎಚ್‌ಡಿಪಿಇ ಪೈಪ್ ಲೈನ್‌ ಹಾಕಿ ಪ್ರತಿ ಮನೆಗೆ ವ್ಯವಸ್ಥಿತ ನೀರು ಪೂರೈಕೆ ಯೋಜನೆಗೆ ₹40 ಕೋಟಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾನಗಲ್ಲ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಅಥವಾ ಬೈಪಾಸ್ ಜರೂರ ಆಗಬೇಕು. ಕ್ರೀಡಾಂಗಣ ಅಭಿವೃದ್ಧಿ, ಈಜುಗೊಳ ದುರಸ್ತಿ, ಬೊಮ್ಮನಹಳ್ಳಿ ಭಾಗಕ್ಕೊಂದು ಪೊಲೀಸ್ ಠಾಣೆ ಬೇಕು. ಉದ್ಯೋಗ ಸೃಷ್ಟಿಗಾಗಿ ಕಾರ್ಖಾನೆ ಬೇಡಿಕೆಯೂ ಸೇರಿ ಈ ಬಾರಿಯ ಬಜೆಟ್‌ನಲ್ಲಿ ನಿರೀಕ್ಷೆಗಳು ಬಹಳಷ್ಟಿವೆ.

ನೀರಾವರಿ ವಿಷಯದಲ್ಲಿ 10 ವರ್ಷಗಳಲ್ಲಿ ಉತ್ತಮ ಬೆಳವಣಿಗೆ ಇದ್ದರೂ ಇದಕ್ಕಾಗಿ ವರದಾ, ಬೇಡ್ತಿ ಜೋಡಣೆ ತೀರಾ ಅವಶ್ಯ. ಸರ್ಕಾರ ಒಂದು ಹೆಜ್ಜೆ ಮುಂದಿಟ್ಟು, ಈ ಕಾರ್ಯ ಪೂರ್ಣಕ್ಕೆ ಬಜೆಟ್‌ನಲ್ಲಿ ಹಣ ತೆಗೆದಿಡುವಂತಾಗಬೇಕು. ₹220 ಕೋಟಿಯಲ್ಲಿ ನರೇಗಲ್ಲ ಕೂಸನೂರು ಏತ ನೀರಾವರಿ ಯೋಜನೆ ಕಾರ್ಯಾರಂಭಕ್ಕೆ ಹಣ ನೀಡಬೇಕು. ತಾಲೂಕಿನಲ್ಲಿ ಉದ್ಯೋಗ ಸೃಷ್ಟಿಗಾಗಿ ಕಾರ್ಖಾನೆ ಬೇಕೆಂಬ ಬೇಡಿಕೆಯೂ ಇದ್ದು, ಬಜೆಟ್‌ನಲ್ಲಿ ಯೋಜನೆ ಘೋಷಣೆ ಜೊತೆ ಅನುದಾನ ಬಿಡುಗಡೆಯಾಗಬೇಕು. ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು 200 ಬೆಡ್‌ಗೆ ಉನ್ನತೀಕರಿಸಲು ಹಣ ಬೇಕು. ಎಲ್ಲದಕ್ಕೂ ಮೊದಲು ಸಿಬ್ಬಂದಿ ಕೊರತೆ ನೀಗಬೇಕಿದೆ. ಗೋವಿನ ಜೋಳ ಉಪ ಉತ್ಪನ್ನ ಘಟಕ ಬೇಕಾಗಿದೆ. ಮಾವು ಅಭಿವೃದ್ಧಿಗಾಗಿ 28 ಎಕರೆಯಲ್ಲಿ ಮಾವು ಸಂಸ್ಕರಣ ಘಟಕ ಘೋಷಣೆಯಾಗಿ ಯಳವಟ್ಟಿ ಬಳಿ ಜಾಗೆ ಗುರುತಿಸಲಾಗಿದೆ. ಆದರೆ, ಕೆಲಸ ನನೆಗುದಿಗೆ ಬಿದ್ದಿದೆ. ಟೆಂಡರ್ ಹಂತದಲ್ಲಿರುವ ₹35 ಕೋಟಿ ಯೋಜನೆ ಶೀಘ್ರ ಕಾರ್ಯರೂಪಕ್ಕೆ ಬರಬೇಕಾಗಿದೆ. ಈ ಬಜೆಟ್‌ನಲ್ಲಿ ಹಣ ಕೊಟ್ಟು ಕೂಡಲೇ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಾರ್ಯಾರಂಭಕ್ಕೆ ಮುಂದಾಗಬೇಕು. ಇದರಿಂದ ಮಾವು ತೋಟಗಳನ್ನು ಕಡಿಯುತ್ತಿರುವುದು ನಿಲ್ಲಬಹುದು. ಪಾವರ್ ಟ್ರೇಲರ್‌ಗಳಿಗಾಗಿ ₹30 ಲಕ್ಷ ಬೇಡಿಕೆ ಇದೆ. ಹನಿ ನೀರಾವರಿಗಾಗಿ 250 ಎಕರೆ ಪ್ರಸ್ತಾವನೆ ಅರ್ಜಿಗೆ ₹75 ಲಕ್ಷ ಬರಬೇಕಾಗಿದೆ.

ತಾಲೂಕಿನಲ್ಲಿ ಹಾಳಾದ ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿಗೆ ₹50 ಕೋಟಿ ಬೇಕಾಗಿದೆ. ಜಿಲ್ಲಾ ಪಂಚಾಯತ್ ರಸ್ತೆಗಳಿಗೆ ₹50 ಕೋಟಿ ಬೇಕು. ಕೆರೆ ಹೂಳೆತ್ತಲು, ಕೆರೆಗಳ ತೂಬು ದುರಸ್ತಿ, ಬಂಡು ನಿರ್ಮಾಣ, ಕೆರೆ ಏರಿ ನಿರ್ಮಾಣಕ್ಕೆ ₹20 ಕೋಟಿ ಬೇಕು. ಹಾನಗಲ್ಲ ಪ್ರವಾಸಿ ಮಂದಿರ ದುರಸ್ತಿ ಅತ್ಯವಶ್ಯವಾಗಿ ಆಗಬೇಕಾಗಿದೆ.


ಹಾನಗಲ್ಲ ಪಟ್ಟಣದ ಕಸ, ಚರಂಡಿ, ರಸ್ತೆ ನಿರ್ವಹಣೆಯಲ್ಲಿ ವಿಫಲವಾಗಿದ್ದು, ತೀರಾ ಅಗತ್ಯವಾಗಿ ಒಳ ಚರಂಡಿ ವ್ಯವಸ್ಥೆಯಾಗಬೇಕು. ಇದಕ್ಕಾಗಿ ₹700 ಕೋಟಿ ಬೇಕು. ಕಿರಿದಾದ ಮುಖ್ಯ ರಸ್ತೆ ಅಗಲೀಕರಣ ಅಥವಾ ಬೈಪಾಸ್ ಅತ್ಯಂತ ಜರೂರ ಬೇಡಿಕೆಯಾಗಿದ್ದು, ಇದಕ್ಕಾಗಿ ಬೆಜೆಟ್‌ನಲ್ಲಿ ಅನುದಾನ ನೀಡಬೇಕಾಗಿದೆ. ಪಟ್ಟಣದ ಸೌಂದರ್ಯಿಕರಣಕ್ಕೆ ಅನುದಾನ ಬೇಕು. ದಶಕಗಳ ಹಿಂದೆ ನಿರ್ಮಾಣವಾದ ತಾಲೂಕು ಕ್ರೀಡಾಂಗಣ ಅಭಿವೃದ್ಧಿಗೆ ಮುಂದಾಗಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಅಗತ್ಯವಿದೆ. ಸಂಪೂರ್ಣವಾಗಿ ಬಳಕೆಗೆ ಬಾರದಂತಾದ ಈಜುಗೊಳಕ್ಕೆ ಅನುದಾನ ನೀಡಿ ದುರಸ್ತಿ ಬೇಕಾಗಿದೆ.ದೊಡ್ಡ ಸಾಧನೆ

ಈ ಬಾರಿ ಹಾವೇರಿ ಜಿಲ್ಲೆಯ ಎಲ್ಲ ಶಾಸಕರು ತಮ್ಮ ತಮ್ಮ ತಾಲೂಕಿಗೆ ಬಜೆಟ್‌ನಲ್ಲಿ ಏನು ಸಿಗಬಹುದು ಎಂಬ ನಿರೀಕ್ಷೆಗಿಂತ ಹಾವೇರಿಯಲ್ಲಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಗೆ ಅನುದಾನ ಒದಗಬೇಕು ಎಂಬ ನೀರಿಕ್ಷೆಯಲ್ಲಿದ್ದೇವೆ. ಇದರಿಂದ ಇಡೀ ಜಿಲ್ಲೆ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆಯಾಗಲಿದೆ. ಅದಕ್ಕಾಗಿ ನಮ್ಮೆಲ್ಲರ ಒತ್ತಾಯವಿದೆ ಎನ್ನುತ್ತಾರೆ ಶಾಸಕ ಶ್ರೀನಿವಾಸ ಮಾನೆ.ಉದ್ಯೋಗಕ್ಕೆ ಪ್ರೋತ್ಸಾಹ

ಆಸ್ಪತ್ರೆಗೆ ಅನುದಾನ ಬೇಕು. ಉದ್ಯೋಗ ಕ್ಷೇತ್ರಕ್ಕೆ ಪ್ರೋತ್ಸಾಹ, ಮಾಂಸ ಮಾರಾಟ ಅಂಗಡಿಗಳು ವೈಜ್ಙಾನಿಕವಾಗಿ ಪಟ್ಟಣದ ಹೊರಗೆ ಮಳಿಗೆ ಆಗಬೇಕು. ಅಡಕೆ, ಶುಂಟಿ ಅಭಿವೃದ್ಧಿ ಆಧಾರಿತ ಮಾರಾಟ ಮಳಿಗೆ ಹಾಗೂ ಶಿಥಲೀಕರಣ ಘಟಕ ಬೇಕು. ಹಾನಗಲ್ಲಿಗೆ ಕಂದಾಯ ಉಪವಿಭಾಗಾಧಿಕಾರಿ ಕಚೇರಿ ಬೇಕು. ಒಂದು ಆಯುರ್ವೇದ ಕಾಲೇಜು, ಕಾನೂನು ಕಾಲೇಜು ಬೇಕಾಗಿದೆ. ಹಾನಗಲ್ಲ ದೊಡ್ಡ ತಾಲೂಕು ಎಂಬ ಅರಿವು ಇರಲಿ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಮುಚ್ಚಂಡಿ ಆಗ್ರಹಿಸಿದ್ದಾರೆ.