ಹಾನಗಲ್ಲ ಕುಮಾರ ಶಿವಯೋಗಿಗಳ ಕೊಡುಗೆ ಅಪಾರ: ಶಿವಲಿಂಗ ಶಿವಾಚಾರ್ಯರು

| Published : Mar 04 2025, 12:33 AM IST

ಸಾರಾಂಶ

ಮಠ ಮತ್ತು ಮಠಾಧೀಶರು ಹೇಗಿರಬೇಕು ಎಂಬ ಚೌಕಟ್ಟನ್ನು ಹಾನಗಲ್ಲ ಕುಮಾರ ಸ್ವಾಮಿಗಳು ಹಾಕಿಕೊಟ್ಟಿದ್ದರು.

ರಾಣಿಬೆನ್ನೂರು: ಪವಾಡ ಪುರುಷ, ಆಧ್ಯಾತ್ಮಿಕ ತತ್ವಜ್ಞಾನಿ ಅಂಧಕಾರದ ಸಮಾಜವನ್ನು ಬೆಳಕಿನಡೆಗೆ ಕೊಂಡೊಯ್ದ ಹಾನಗಲ್ಲ ಗುರುಕುಮಾರ ಶಿವಯೋಗಿಗಳು ಜನಿಸಿದ ಜಿಲ್ಲೆಯಲ್ಲಿ ಜನಿಸಿದ ನಾವು ಪುಣ್ಯವಂತರು ಎಂದು ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯರು ನುಡಿದರು. ತಾಲೂಕಿನ ತಿರುಮಲದೇವರಕೊಪ್ಪ ಗ್ರಾಮದಲ್ಲಿ ಶನಿವಾರ ಸಂಜೆ ಹಾನಗಲ್ಲ ಗುರುಕುಮಾರ ಶಿವಯೋಗಿಗಳ 158ನೇ ಜಯಂತಿ ಮಹೋತ್ಸವ ಹಾಗೂ 5ನೇ ವರ್ಷದ ಮಹಾರಥೋತ್ಸವ ಅಂಗವಾಗಿ ಏರ್ಪಡಿಸಿದ್ದ ಕುಮಾರೇಶ್ವರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಠ ಮತ್ತು ಮಠಾಧೀಶರು ಹೇಗಿರಬೇಕು ಎಂಬ ಚೌಕಟ್ಟನ್ನು ಹಾನಗಲ್ಲ ಕುಮಾರ ಸ್ವಾಮಿಗಳು ಹಾಕಿಕೊಟ್ಟಿದ್ದರು. ಬ್ರಿಟಿಷರ ಕಾಲದಲ್ಲೇ ಮಹಿಳೆಯರಿಗೆ ಪ್ರತ್ಯೇಕ ಶಾಲೆ ತೆರೆದಿದ್ದರು. ಆಧ್ಯಾತ್ಮಿಕ ಜತೆ ವೈಚಾರಿಕತೆಯನ್ನು ರೂಢಿಸಿಕೊಂಡಿದ್ದ ಶ್ರೀಗಳು ಜಗತ್ತಿಗೆ ನೀಡಿದ ಕೊಡುಗೆ ಅಪಾರ ಎಂದರು. ಹೊಳಲು ಗ್ರಾಮದ ಮಲ್ಲಿಕಾರ್ಜುನ ವಿರಕ್ತಮಠದ ಚೆನ್ನಬಸವದೇವರು ಸಾನ್ನಿಧ್ಯ ವಹಿಸಿದ್ದರು. ಗುರುಕುಮಾರರ ಜೀವನ ದರ್ಶನ ಪವಚನವನ್ನು ಬೆಳಗಾವಿ ಕಾರಂಜಿ ಮಠದ ಡಾ. ಶಿವಯೋಗಿ ದೇವರು ನೆರವೇರಿಸಿಕೊಟ್ಟರು.

ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿದರು. ಹೇಮರಡ್ಡಿ ದಬಲಪರ, ಗೋವಿಂದಪ್ಪ ಹಳ್ಳಿ, ಭೀಮಪ್ಪ ಕಗನಾಳ, ಚನ್ನಪ್ಪ ಗೌಡ್ರ, ನಾಗಯ್ಯ ಮಠದ, ರುದ್ರಪ್ಪ ಹಾದಿಮನಿ, ರಂಗಪ್ಪ ಕಡ್ಲಿಗೊಂದಿ, ಗದಿಗೆಪ್ಪ ಬಣಕಾರ, ಹನುಮಂತಪ್ಪ ಸಾದರ, ಜಗದೀಶ ದಾಸರಡ್ಡಿ, ಸೋಮರಡ್ಡಿ ಮೈದೂರು, ರಂಗಪ್ಪ ಸಾದರ, ಕೃಣ್ಣಪ್ಪ ಗೌಡರ, ಸಿದ್ದಪ್ಪ ಸಾದರ ಮತ್ತಿತರರಿದ್ದರು.

ಇದಕ್ಕೂ ಪೂರ್ವದಲ್ಲಿ ಜೋಯಿಸರಹರಳಹಳ್ಳಿ ಗ್ರಾಮದಿಂದ ಹೊರಟ ಕುಮಾರೇಶ್ವರ ಜ್ಯೋತಿ ರಥಯಾತ್ರೆಯು ಎರೇಕುಪ್ಪಿ ಮಾರ್ಗವಾಗಿ ತಿರುಮಲದೇವರಕೊಪ್ಪ ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನದ ಆವರಣಕ್ಕೆ ಬಂದು ಸೇರಿತು. ಪೂರ್ಣ ಕುಂಭ ಹೊತ್ತ ಸುಮಂಗಲಿಯರು, ಭಾಜಾ ಭಜಂತ್ರಿ, ಡೊಳ್ಳು, ಸಮಾಳದೊಂದಿಗೆ ಯಾತ್ರೆಗೆ ಭವ್ಯ ಸ್ವಾಗತ ಕೋರಲಾಯಿತು.

ಇಂದಿನಿಂದ ಮೂಕಪ್ಪ ಸ್ವಾಮಿಗಳ ಜಾತ್ರಾ ಮಹೋತ್ಸವ

ಬ್ಯಾಡಗಿ: ತಾಲೂಕಿನ ಸುಕ್ಷೇತ್ರ ಗುಡ್ಡದಮಲ್ಲಾಪುರ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಹಾಗೂ ಮೂಕಪ್ಪ ಸ್ವಾಮಿಗಳ (ವೃಷಭರೂಪಿ) ಉತ್ಸವ, ಗುಗ್ಗಳ 71ನೇ ಶಿವಾನುಭವ ಧರ್ಮಸಭೆ ಹಾಗೂ ಹಿರಿಯ ಮೂಕಪ್ಪಸ್ವಾಮಿಗಳ 15ನೇ ವರ್ಷದ ತುಲಾಭಾರ ಕಾರ್ಯಕ್ರಮಗಳು ಮಾ. 4ರಿಂದ 6ರ ವರೆಗೆ ಮೂರು ದಿನಗಳ ಕಾಲ ಜರುಗಲಿವೆ.ಮಾ. 4ರಂದು ಬೆಳಗ್ಗೆ 8 ಗಂಟೆಗೆ ಷ.ಬ್ರ. ಹುಚ್ಚೇಶ್ವರ ಶಿವಾಚಾರ್ಯರ ಕರ್ತೃಗದ್ದುಗೆಗೆ ಕ್ಷೀರಾಭಿಷೇಕ, ಮದ್ವೀರಶೈವ ಪಂಚಾಚಾರ್ಯ ಧ್ವಜಾರೋಹಣ ಜರುಗಲಿದೆ.ಮಾ. 5ರಂದು ಬಾಳೆಹೊನ್ನೂರು ರಂಭಾಪುರಿಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಬೆಳಗ್ಗೆ 8 ಗಂಟೆಗೆ ಷ.ಬ್ರ. ಮೂಕಪ್ಪಸ್ವಾಮಿಗಳ ಉತ್ಸವ, ಗುಗ್ಗಳ, ಸಂಜೆ 6 ಗಂಟೆಗೆ ಧರ್ಮಸಭೆ ಹಾಗೂ 15ನೇ ವರ್ಷದ ನಾಣ್ಯಗಳ ತುಲಾಭಾರ ಕಾರ್ಯಕ್ರಮಗಳು ಜರುಗಲಿವೆ.

ಮಾ. 6ರಂದು ಸಂಜೆ 7 ಗಂಟೆಗೆ ಶ್ರೀ ಮೂಕೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಠದ ಧರ್ಮಾಧಿಕಾರಿ ಹುಚ್ಚಯ್ಯಸ್ವಾಮಿ ದಾಸೋಹಮಠ ಜಾತ್ರೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿದ್ದಾರೆ.ನಾಡಿನ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ಪಂಚ ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಸೇರಿದಂತೆ ನಾಡಿನ ಪ್ರಸಿದ್ಧ ಸಾಹಿತಿಗಳು, ಜನಪ್ರತಿನಿಧಿಗಳು ಹಾಗೂ ಕಲಾವಿದರು ಜಾತ್ರೋತ್ಸವದಲ್ಲಿ ಪಾಲ್ಗೊಳ್ಳುವರು.