ಹಾಡು ಹಗಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆದು ನಾಲ್ಕು ದಿನಗಳಾದರೂ ಕೂಡ ಸ್ಥಳೀಯ ಶಾಸಕರು ತಾಲೂಕಿಗೆ ಆಗಮಿಸಿ ಸ್ಥಳಕ್ಕೆ ಭೇಟಿ ನೀಡದೆ ಒಳಗಿನವರು, ಹೊರಗಿನವರು ಎಂದು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿರುವುದು ವಿಷಾದದ ಸಂಗತಿ ಎಂದು ಹಿಂದು ಧ್ವಜ ಅಭಿಯಾನ ಸಮಿತಿ ಅಧ್ಯಕ್ಷ ಸಿದ್ದಲಿಂಗಪ್ಪ ಕಮಡೊಳ್ಳಿ ಕಿಡಿಕಾರಿದರು.

ಹಾನಗಲ್ಲ: ಹಾಡು ಹಗಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆದು ನಾಲ್ಕು ದಿನಗಳಾದರೂ ಕೂಡ ಸ್ಥಳೀಯ ಶಾಸಕರು ತಾಲೂಕಿಗೆ ಆಗಮಿಸಿ ಸ್ಥಳಕ್ಕೆ ಭೇಟಿ ನೀಡದೆ ಒಳಗಿನವರು, ಹೊರಗಿನವರು ಎಂದು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿರುವುದು ವಿಷಾದದ ಸಂಗತಿ ಎಂದು ಹಿಂದು ಧ್ವಜ ಅಭಿಯಾನ ಸಮಿತಿ ಅಧ್ಯಕ್ಷ ಸಿದ್ದಲಿಂಗಪ್ಪ ಕಮಡೊಳ್ಳಿ ಕಿಡಿಕಾರಿದರು.

ಗುರುವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದುಗಳ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿವೆ. ಹಾನಗಲ್ಲ ತಾಲೂಕಿನ ನರೇಗಲ್ಲಿನಲ್ಲಿ ಕಾರಹುಣ್ಣಿಮೆಯಲ್ಲಿ ಹೋರಿ ಬೆದರಿಸುವವರು ಪಟಾಕಿ ಹಾರಿಸಿದರೆಂದು ಹಲ್ಲೆ ಮಾಡಿರುವುದನ್ನು ಯಾರೂ ಸಮರ್ಥನೆ ಮಾಡಿಕೊಳ್ಳುವಂತಹದ್ದಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಾಯ್. ವಿಜಯೇಂದ್ರ ಘಟನೆ ನಡೆದ ನರೇಗಲ್ಲಿಗೆ ಭೇಟಿ ನೀಡಿ ಹಲ್ಲೆಗೊಳಗಾದ ಕುಟುಂಬಗಳಿಗೆ ಸಮಾಧಾನ ಹೇಳಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿದ್ದನ್ನು ಹಾನಗಲ್ಲ ಶಾಸಕರು ಹೊರಗಿನವರು ಬಂದು ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ವಿಜಯೇಂದ್ರ ಅವರು ಬಿಜೆಪಿಯ ರಾಜ್ಯ ನಾಯಕರು. ಹಿಂದುಗಳ ಮೇಲೆ ಹಲ್ಲೆ ನಡೆದರೂ ಎಲ್ಲರೂ ಸುಮ್ಮನಿರಬೇಕೆ. ಹಿಂದುಗಳ ಪರವಾಗಿ ಯಾರೇ ಧ್ವನಿ ಎತ್ತಿದರೆ ಅವರು ಹೊರಗಿನವರಾಗುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಶಾಸಕ ಶ್ರೀನಿವಾಸ ಮಾನೆ ಅವರೇ ಹೊರಗಿನಿಂದ ಬಂದವರು. ಆದ್ದರಿಂದಲೇ ಅವರು ಇನ್ನೂ ಹಲ್ಲೆಗೊಳಗಾದವರನ್ನು ಭೇಟಿ ಮಾಡಲು ಆಗಿಲ್ಲ. ಅವರು ಸಚಿವ ಸ್ಥಾನಕ್ಕಾಗಿ ಅಲೆದಾಡುತ್ತಿರುವಾಗ ಈ ತಾಲೂಕಿನವರ ನೋವುಗಳು ಅವರಿಗೆ ಅರ್ಥವಾಗುವುದಿಲ್ಲ ಎಂದು ಕಿಡಿ ಕಾರಿದರು.

ನರೇಗಲ್ಲಿನಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನರೇಗಲ್ಲ ಘಟನೆಯ ಬೆನ್ನಲ್ಲೇ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ವ್ಯಾಪಾರದಲ್ಲಿದ್ದ ಹಿಂದುವನ್ನು ಅನ್ಯ ಕೋಮಿನವರು ಹಲ್ಲೆ ಮಾಡಿ ಸಾವಿಗೆ ಕಾರಣರಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೇಳಿದಂತೆ ನಾವು ಭಾರತದಲ್ಲಿದ್ದೇವೆಯೋ ಪಾಕಿಸ್ತಾನದಲ್ಲಿದ್ದೇವೆಯೋ ಎಂಬ ಸಂಶಯ ಕಾಡುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಮು ಯಳ್ಳೂರ, ಸಿದ್ದಲಿಂಗೇಶ ತುಪ್ಪದ, ಜಗದೀಶ ಸಿಂಧೂರ, ವಿಶ್ವನಾಥ ಭಿಕ್ಷಾವರ್ತಿಮಠ ಇದ್ದರು.