ಸಾರಾಂಶ
ದೇವಾಲಯದಲ್ಲಿ ಕಾಂಕ್ರೀಟ್ ರಸ್ತೆ, ಸೋಪಾನಂ ಕಟ್ಟೆ, ತಡೆಗೋಡೆ, ಫೆನ್ಸಿಂಗ್, ಇಂಟರ್ ಲಾಕ್, ವಾಹನ ನಿಲುಗಡೆಗೆ ಸ್ಥಳಾವಕಾಶ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಹಾನಗಲ್ಲು ಗ್ರಾಮದ ದುದ್ದುಗಲ್ಲು ಶ್ರೀ ಮಲ್ಲಿಕಾರ್ಜುನ ದೇವಾಲಯವನ್ನು 4.80 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡೆಸಲು ಉದ್ದೇಶಿಸಿದ್ದು, ಈ ಕಾಮಗಾರಿಗಳಿಗೆ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮತ್ತು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಭೂಮಿ ಪೂಜೆ ನೆರವೇರಿಸಿದರು.ದೇವಾಲಯದ ನೀಲಿನಕ್ಷೆಯಂತೆ ದುದ್ದುಗಲ್ಲು ಹೊಳೆಯಿಂದ ದೇವಾಲಯದ ವರೆಗೆ ಮೆಟ್ಟಿಲು ಹಾಗೂ ರಸ್ತೆ ನಿರ್ಮಾಣ ಆಗಬೇಕಿದ್ದು, ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಮುತುವರ್ಜಿಯಲ್ಲಿ ಕಾಮಗಾರಿಗೆ 4.80 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಕಾಂಕ್ರೀಟ್ ರಸ್ತೆ, ಸೋಪಾನಂ ಕಟ್ಟೆ, ತಡೆಗೋಡೆ, ಫೆನ್ಸಿಂಗ್, ಇಂಟರ್ ಲಾಕ್, ವಾಹನ ನಿಲುಗಡೆಗೆ ಸ್ಥಳಾವಕಾಶ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಮಂಥರ್ ಗೌಡ ಹೇಳಿದರು.ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಯಾವುದೇ ಸಬೂಬು ಹೇಳಬಾರದು. 9 ತಿಂಗಳೊಳಗೆ ಮುಗಿಯಬೇಕು. ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು. ಕೆಲಸ ಶಾಶ್ವತವಾಗಿರಬೇಕು. ಸರ್ಕಾರದಿಂದ ಹೆಚ್ಚಿನ ಅನುದಾನ ಅವಶ್ಯಕತೆಯಿದ್ದರೆ ಸಹಕಾರ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶ್ರೀ ಶಂಭುನಾಥ ಸ್ವಾಮೀಜಿ, ಶಾಶ್ವತವಾಗುವಂತಹ ಕಾಮಗಾರಿಗಳನ್ನು ಮಾಡಲಾಗುವುದು. ಇದರೊಂದಿಗೆ ಮಠವನ್ನೂ ನಿರ್ಮಿಸಿ, ದಾಸೋಹ, ಯಾತ್ರಿ ನಿವಾಸ, ಧಾರ್ಮಿಕ ಕಾರ್ಯಗಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಮುಂದಿನ ವರ್ಷದ ಶಿವರಾತ್ರಿ ಸಂದರ್ಭ ಕ್ಷೇತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡು, ಶಿವರಾತ್ರಿ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.
ವೇದಿಕೆಯಲ್ಲಿ ತಾಲೂಕು ಒಕ್ಕಲಿಗರ ಸಂಘ ಅಧ್ಯಕ್ಷ ಎ.ಆರ್. ಮುತ್ತಣ್ಣ, ಇಲಾಖೆಯ ಕಾರ್ಯಪಾಲಕ ಅಭಿಯಂತರ ದೇವೇಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ಮಿಥುನ್ ಹಾನಗಲ್ಲು, ಗ್ರಾಮಾಧ್ಯಕ್ಷ ವಿಕ್ರಾಂತ್, ಸಮಿತಿಯ ಪದಾಧಿಕಾರಿಗಳಾದ ರಾಮಕೃಷ್ಣ, ಬಸಪ್ಪ, ರಾಜು, ಹಾನಗಲ್ಲು ಗ್ರಾ.ಪಂ. ಅಧ್ಯಕ್ಷ ಯಶಾಂತ್ ಕುಮಾರ್, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಇಲಾಖೆಯ ಸಹಾಯಕ ಅಭಿಯಂತರ ಸಿದ್ದರಾಜು, ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಗುತ್ತಿಗೆದಾರ ಜಯರಾಂ ಸೇರಿದಂತೆ ಇತರರು ಉಪಸ್ಥಿತರಿದ್ದರು.