ದೇಶದ ಬೆನ್ನೆಲುಬಾದ ರೈತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗ
ಕನ್ನಡಪ್ರಭ ವಾರ್ತೆ ಸರಗೂರುರೈತರು ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸುವತ್ತ ಮುಂದಾಗಬೇಕು ಎಂದು ತಹಸೀಲ್ದಾರ್ ಮೋಹನಕುಮಾರಿ ಹೇಳಿದರು.ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಕೃಷಿ ಇಲಾಖೆ, ಕೃಷಿಕ ಸಮಾಜ, ಕೃಷಿ ಪರಿಕರ ಮಾರಾಟಗಾರರ ಸಂಘ, ತೋಟಗಾರಿಕೆ, ರೇಷ್ಮೆ ಹಾಗೂ ಪಶು ಸಂಗೋಪನೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ದೇಶದ ಬೆನ್ನೆಲುಬಾದ ರೈತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಅವುಗಳ ಬಗ್ಗೆ ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ರೈತರ ಏಳಿಗೆಗಾಗಿ ಕೆಲಸ ಮಾಡುತ್ತಿರುವ ಸಂಘ-ಸಂಸ್ಥೆಗಳೊಂದಿಗೆ ಉತ್ತಮ ಒಡನಾಟ ಬೆಳೆಸಿಕೊಳ್ಳಬೇಕೆಂದೂ ಸಲಹೆ ನೀಡಿದರು.ಸಾಂಬಾರ ಪದಾರ್ಥಗಳ ಮಂಡಳಿಯ ವಿಜ್ಞಾನಿ ಹರ್ಷ ಮಾತನಾಡಿ, ಸಾಂಬಾರ ಪದಾರ್ಥಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಕಾಳು ಮೆಣಸು, ಏಲಕ್ಕಿ, ಚಕ್ಕೆ ಸೇರಿದಂತೆ ಅಡಿಕೆ ಬೆಳೆಗಳಂಥ ತೋಟಗಾರಿಕೆ ಬೆಳೆಗಳಿಗೆ ರೈತರು ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಉತ್ತಮ ಬೆಲೆ ಸಿಕ್ಕಿ ರೈತರ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೈ. ಪ್ರಸಾದ್ ಮಾತನಾಡಿ, ರೈತರ ಅನುಕೂಲಕ್ಕಾಗಿ ಇಲಾಖೆಯಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಅವುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತರಿಗಾಗಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದ್ದು, ರೈತರು ಸಮಗ್ರ ಕೃಷಿ ಹಾಗೂ ಬದಲಿ ಕೃಷಿಗೆ ಆದ್ಯತೆ ನೀಡಬೇಕು. ಒಂದೇ ಬೆಳೆಗೆ ಸೀಮಿತವಾಗದೆ ವಿವಿಧ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾತನಾಡಿದರು. ಕೃಷಿ ಇಲಾಖೆಯ ಅಧಿಕಾರಿ ಸಿದ್ದಪ್ಪಸ್ವಾಮಿ, ಸರಗೂರಿನ ಕೃಷಿ ಅಧಿಕಾರಿ ಶಿವಕುಮಾರ್, ಎಸ್ಬಿಐ ಬ್ಯಾಂಕ್ ವ್ಯವಸ್ಥಾಪಕ ರಾಕೇಶ್, ಕೃಷಿಕ ಸಮಾಜದ ಸರಗೂರು ಅಧ್ಯಕ್ಷ ಶಾಂತ ವೀರಮೂರ್ತಿ, ಉಪಾಧ್ಯಕ್ಷ ಮಾದೇಗೌಡ, ಸದಸ್ಯರಾದ ಎಂ.ಕೆ. ಹರಿದಾಸ್, ನಾಮಧಾರಿಗೌಡ ಸಂಘದ ಅಧ್ಯಕ್ಷ ಎಚ್.ಡಿ. ರತ್ನಯ್ಯ, ಗ್ರಾಪಂ ಅಧ್ಯಕ್ಷೆ ರುಕ್ಮಿಣಿಪುಟ್ಟಯ್ಯ, ಸಿದ್ದಪ್ಪ, ಹಂಚೀಪುರ ಪುಟ್ಟಣ್ಣ ಇದ್ದರು.ನಲ್ಲೂರುಕೆರೆಯ ವೆಂಕಟೇಶ್ವರರಾವ್, ಚಂಗೌಡನಹಳ್ಳಿ ಈಶ್ವರ್, ಸಾಗರೆ ಮಲ್ಲಿಗಮ್ಮ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.ವೆಂಕಟೇಶ್ವರರಾವ್ ಅವರು ಕೃಷಿಕ ಸಮಾಜ ಸರಗೂರು ಶಾಖೆಯ ಕಟ್ಟಡ ನಿರ್ಮಾಣಕ್ಕಾಗಿ ಪಟ್ಟಣದಲ್ಲಿ ಒಂದು ಗುಂಟೆ ನಿವೇಶನವನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು.----------------