ಸಾರಾಂಶ
ಅಂಕೋಲಾ: ಶಿರೂರು ಗುಡ್ಡ ಕುಸಿತದ ಶೋಧ ಕಾರ್ಯಾಚರಣೆ 11ನೇ ದಿನಕ್ಕೆ ಮುಂದುವರಿದಿದ್ದು, ಶೋಧ ಕಾರ್ಯದಲ್ಲಿ ಗೋವಾದ ಸ್ಕೂಬಾ ಡೈವರ್ ತಂಡವು ಗಂಗಾವಳಿ ನದಿಯ ಅಂಚಿನ ಲಕ್ಷ್ಮಣ ನಾಯ್ಕ ಅವರ ಅಂಗಡಿ ಬಳಿ ವ್ಯಕ್ತಿಯೋರ್ವರ ಮೂಳೆ ಪತ್ತೆ ಮಾಡಿ ಮೇಲಕ್ಕೆ ತಂದಿದ್ದಾರೆ.
ಶೋಧ ಕಾರ್ಯದಲ್ಲಿ ಕೈ ಮೂಳೆ ಹಾಗೂ ಎದೆಭಾಗದ ಎಲುಬು ದೊರೆತಿದೆ. ಪತ್ತೆಯಾಗಿರುವ ಮೂಳೆಯು ಮನುಷ್ಯನದ್ದೇ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ದೃಢಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಜಗನ್ನಾಥ ನಾಯ್ಕ ಅಥವಾ ಲೋಕೇಶ ನಾಯ್ಕ ಅವರ ಪತ್ತೆ ಕಾರ್ಯ ನಡೆದಿತ್ತು. ಆದರೆ ಈ ಮೂಳೆ ಯಾರಿಗೆ ಸೇರಿದೆ ಎನ್ನುವುದರ ಬಗ್ಗೆ ನಿಖರಪಡಿಸಲು ಹುಬ್ಬಳ್ಳಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.
ಶೋಧ ಕಾರ್ಯಾಚರಣೆ ವೇಳೆ ಶಾಸಕ ಸತೀಶ್ ಸೈಲ್, ಸ್ವತಃ ತಾವೇ ಡ್ರೆಜ್ಜಿಂಗ್ ಟೀಮ್‌ನೊಂದಿಗೆ ನಿಂತು ಮಾರ್ಗದರ್ಶನ ನೀಡಿದರು.
ಶೋಧ ಕಾರ್ಯಾಚರಣೆ ವೇಳೆ ತನ್ನ ತಂದೆ ಜಗನ್ನಾಥ ನಾಯ್ಕ ಅಸ್ಥಿ ಆದರೂ ಸಿಗಲಿ ಎಂದು ಕಾರ್ಯಾಚರಣೆ ಸ್ಥಳದಲ್ಲಿರುವ ನೊಂದ ಕುಟುಂಬದ ಮಗಳು ಕೃತಿಕಾ ಪ್ರಾರ್ಥಿಸುತ್ತಿದ್ದು, ಇದೇ ವೇಳೆ ಗಂಗೆ ಕೊಳ್ಳದ ಲೋಕೇಶ ನಾಯ್ಕ ಮೃತದೇಹ ಪತ್ತೆಯಾಗಬೇಕಿದೆ. ಈ ಮೂಳೆ ಯಾರದ್ದಾಗಿರಬಹುದು ಎನ್ನುವ ಕುತೂಹಲ ಕೆರಳಿಸಿದೆ.
ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದ ಮೇಲಷ್ಟೇ ಮೂಳೆ ಯಾರದೆಂದು ಗೊತ್ತಾಗಲಿದೆ. ಬುಧವಾರ ವರದಿ ಕೈಸೇರಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಈ ವೇಳೆ ಮಾತನಾಡಿದ ಶಾಸಕ ಸತೀಶ ಸೈಲ್, ಅರ್ಜುನ್ ಶೋಧದ ಬಳಿಕ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತದೆ ಎನ್ನುವ ಊಹಾಪೋಹದ ಮಾತು ಕೇಳಿ ಬರುತ್ತಿದೆ. ಆದರೆ ನಾನು ಜಗನ್ನಾಥ ನಾಯ್ಕ ಮತ್ತು ಲೊಕೇಶ ನಾಯ್ಕ ಕುಟುಂಬಕ್ಕೆ ನೀಡಿದ್ದ ಭರವಸೆಯಂತೆ ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ವ್ಯಕ್ತಿ ಕೊಲೆ: ದೂರು ದಾಖಲು
ಯಲ್ಲಾಪುರ: ಮದನೂರು ತಾವರೆಕಟ್ಟಾದ ಪಾವ್ಲು ಫ್ರಾನ್ಸಿಸ್ ಸಿದ್ದಿ(48) ಕೊಲೆಯಾಗಿದ್ದು, ಆತನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದ ಸುರೇಶ್ ಪವಾರ್ ಮೇಲೆ ಅನುಮಾನ ವ್ಯಕ್ತವಾಗಿದೆ.ಮದನೂರು ಬಳಿಯ ಬಸಳೆಬೈಲ್‌ನ ಸುರೇಶ ಲಕ್ಷ್ಮಣ ಪವಾರ್ ಅಂಗವಿಕಲರಾಗಿದ್ದು, ತನ್ನ ಮೂರು ಚಕ್ರದ ವಾಹನದಲ್ಲಿ ಸೆ. 28ರಂದು ಪಾವ್ಲು ಅವರನ್ನು ಕೂರಿಸಿಕೊಂಡು ಹೋಗಿದ್ದರು.
ಆದರೆ, ಮರಳಿ ಮನೆಗೆ ಬಿಟ್ಟಿರಲಿಲ್ಲ. ಈ ಬಗ್ಗೆ ಪಾವ್ಲು ಪತ್ನಿ ಮಂಗಲಾ ಸಿದ್ದಿ ವಿಚಾರಿಸಿದಾಗ, ಅದೇ ದಿನ ಸಂಜೆ ಕಳಸೂರು ಕ್ರಾಸಿನಲ್ಲಿ ಪಾವ್ಲುವನ್ನು ಬಿಟ್ಟಿದ್ದೇನೆ ಎಂದು ಹೇಳಿದ್ದರು. ಮರುದಿನ ಬೆಳಗ್ಗೆ ಸಹ ಪಾವ್ಲು ಮನೆಗೆ ಬಾರದ ಕಾರಣ ಮಂಗಲಾ ಸಿದ್ದಿ ಮತ್ತೆ ಸುರೇಶರ ಮನೆಗೆ ಹೋಗಿ ವಿಚಾರಿಸಿದ್ದರು.ಆ ವೇಳೆ ಸಿಟ್ಟಾದ ಸುರೇಶ್ ಇನ್ನೊಮ್ಮೆ ನಿನ್ನ ಪತಿಯ ಬಗ್ಗೆ ನನಗೆ ಕೇಳಬೇಡ ಎಂದು ಬೈದಿದ್ದು, ಜತೆಗೆ ಕೆಟ್ಟದಾಗಿ ನಿಂದಿಸಿದ್ದರು. ಸೆ. 30ರಂದು ಮದನೂರಿನ ಯಳ್ಳಂಬಿ ಹಳ್ಳದಲ್ಲಿ ಪಾವ್ಲು ಸಿದ್ದಿಯ ಶವ ಪತ್ತೆಯಾಗಿದೆ. ಸುರೇಶ್ ಪಾವರ್ ಬಗ್ಗೆ ದೂರಿರುವ ಮಂಗಲಾ ಸಿದ್ಧಿ, ಆತನೇ ತನ್ನ ಪತಿಯನ್ನು ಕೊಂದು ಹಳ್ಳಕ್ಕೆ ಎಸೆದಿದ್ದಾನೆ ಎಂದು ಪೊಲೀಸ್ ದೂರು ನೀಡಿದ್ದಾರೆ.