ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಕಾರ್ಕಳದಲ್ಲಿ ಬೋವಿ ಸಮುದಾಯದ ಯುವತಿಯ ಮೇಲೆ ಅತ್ಯಾಚಾರದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕರ್ನಾಟಕ ಬೋವಿ ವಡ್ಡರ ಕ್ಷೇಮಾವೃದ್ಧಿ ಸಂಘ ಜಿಲ್ಲಾಧ್ಯಕ್ಷ ಆನಂದ್ ಸಾಯ್ಬ್ರಕಟ್ಟೆ ಆಗ್ರಹಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಸಮಾಜದ ಹಿಂದೂ ಹೆಣ್ಣನ್ನು ಅಪಹರಿಸಿ ದೌರ್ಜನ್ಯ ಮಾಡಿರುವ ಅನ್ಯಕೋಮಿನ ಯುವಕರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಆರೋಪಿ ಆಲ್ತಾಫ್ ಬಿಯರ್‌ನಲ್ಲಿ ಮಾದಕ ವಸ್ತು ಬೆರೆಸಿ ಬಲವಂತವಾಗಿ ಕುಡಿಸಿ ಅತ್ಯಾಚಾರ ಮಾಡಿದ್ದಲ್ಲದೆ, ತನ್ನ ಸ್ನೇಹಿತರನ್ನು ಕರೆಸಿ ಗ್ಯಾಂಗ್ ರೇಪ್ ಮಾಡಿಸಿದ್ದಾನೆ. ಆದರೆ ಪೊಲೀಸರು ಇಬ್ಬರನ್ನು ಮಾತ್ರ ಬಂಧಿಸಿದ್ದಾರೆ. ಉಳಿದ ಆರೋಪಿಗಳು ಪತ್ತೆಯಾಗಿಲ್ಲ. ಪ್ರಕರಣದ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದರು.ದಲಿತ ಸಂರ್ಷ ಸಮಿತಿ ಮುಖಂಡ ಜಯನ್ ಮಲ್ಪೆ ಮಾತನಾಡಿ, ಕಾರ್ಕಳದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿ ಈ ಹಿಂದೆಯೂ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಪೊಲೀಸರು ಈತನ ವಿರುದ್ಧ ಯಾವುದೇ ಕಠಿಣ ಕ್ರಮಕೈಗೊಂಡಿರಲಿಲ್ಲ. ಪೊಲೀಸರು ಈಗ ಉಳಿದ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಜಿಲ್ಲೆಯಲ್ಲಿ ಕೊಲೆ, ಅತ್ಯಾಚಾರ, ಕಳ್ಳತನ ಪ್ರಕರಣ ರಾಜಾರೋಷವಾಗಿ ನಡೆಯುತ್ತಿದ್ದರೂ ಪೊಲೀಸರು ಠಾಣೆ ಬಿಟ್ಟು ಹೊರ ಬರುತ್ತಿಲ್ಲ. ಸರ್ಕಾರವೂ ತನ್ನ ಕೆಚ್ಚನ್ನು ಕಳೆದುಕೊಂಡಿದ್ದು, ಗೃಹಸಚಿವರಿಗೆ ಪೊಲೀಸರ ಮೇಲೆ ಹಿಡಿತವಿಲ್ಲ ಎಂದವರು ಕಿಡಿಕಾರಿದರು.ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ವಾಸುದೇವ ಮುದೂರು, ಪರಮೇಶ್ವರ ಉಪ್ಪೂರು, ವಿಶ್ವನಾಥ ಬೆಳ್ಳಂಪಳ್ಳಿ, ಗಣೇಶ್ ನೇರ್ಗಿ, ಶಿವಣ್ಣ, ಶ್ರೀನಿವಾಸ್ ಉಪಸ್ಥಿತರಿದ್ದರು.