ಸಾರಾಂಶ
ಖಾಸಗಿ ಕಾಲೇಜಿನ ಬಿ ಫಾರ್ಮ್ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಶ್ರೀರಾಮಪುರ ಪೊಲೀಸ್ ಠಾಣೆ ಮುಂದೆ ಸ್ಥಳೀಯರು ಶನಿವಾರ ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಖಾಸಗಿ ಕಾಲೇಜಿನ ಬಿ ಫಾರ್ಮ್ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಶ್ರೀರಾಮಪುರ ಪೊಲೀಸ್ ಠಾಣೆ ಮುಂದೆ ಸ್ಥಳೀಯರು ಶನಿವಾರ ಪ್ರತಿಭಟಿಸಿದರು.ಈ ಹತ್ಯೆ ನಡೆದ ಕೆಲವೇ ತಾಸುಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಅನಂತರ ಜಾಮೀನು ಪಡೆದು ವಿಘ್ನೇಶ್ ಹಾಗೂ ಆತನ ಸ್ನೇಹಿತ ಹೊರಬಾರದಂತೆ ಸಹ ಜಾಗ್ರತೆ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನೀವು ಕಠಿಣ ಶಿಕ್ಷೆ ಕೊಡದೆ ಹೋದರೆ ನಮಗೆ ಆರೋಪಿಗಳನ್ನು ಒಪ್ಪಿಸಿ. ನಾವೇ ಅವರಿಗೆ ಶಿಕ್ಷೆ ಕೊಡುತ್ತೇವೆ. ಅಮಾಯಕ ಹುಡುಗಿಯನ್ನು ನಿರ್ದಯವಾಗಿ ವಿಘ್ನೇಶ್ ಹತ್ಯೆ ಮಾಡಿದ್ದಾನೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ತ್ವರಿತಗತಿಯಲ್ಲಿ ತನಿಖೆ ಮುಗಿಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುತ್ತೇವೆ. ಅಲ್ಲದೆ ಆರೋಪಿಗಳಿಗೆ ಸುಲಭವಾಗಿ ಜಾಮೀನು ಪಡೆಯಲು ಸಾಧ್ಯವಾಗದಂತೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ ಬಳಿಕ ತಮ್ಮ ಪ್ರತಿಭಟನೆಯನ್ನು ಸ್ಥಳೀಯರು ಹಿಂಪಡೆದಿದ್ದಾರೆ.ಎರಡು ದಿನಗಳ ಹಿಂದೆ ಮಂತ್ರಿ ಮಾಲ್ ಸಮೀಪದ ರೈಲ್ವೆ ಹಳಿಗಳ ಬಳಿ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯಾಮಿನಿ ಪ್ರಿಯಾಳನ್ನು ಚಾಕುವಿನಿಂದ ಇರಿದು ವಿಘ್ನೇಶ್ ಹತ್ಯೆ ಮಾಡಿದ್ದ. ಈ ಕೃತ್ಯ ಎಸಗಿದ ಬಳಿಕ ಪರಾರಿಯಾಗಲು ಆತನಿಗೆ ಸಹಕರಿಸಿದ್ದ ಸ್ನೇಹಿತ ಹರೀಶ್ ನೆರವಾಗಿದ್ದ. ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.