ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಧರ್ಮಸ್ಥಳ ಬುರುಡೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ವಹಿಸುವಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.ಶ್ರೀಕ್ಷೇತ್ರದ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳು, ಅಪಮಾನಗಳನ್ನು ಇದುವರೆಗೂ ಸಹಿಸಿಕೊಂಡು ಬರುತ್ತಿದ್ದೇವೆ. ಇದೊಂದು ಸಂಘಟಿತ ಪಿತೂರಿಯಾಗಿದ್ದು, ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ಪ್ರಯತ್ನ, ಸಂಚು, ಷಡ್ಯಂತ್ರದಂತೆ ಕಂಡುಬರುತ್ತಿದೆ. ಪಿತೂರಿಗಾರರಿಗೆ ವಿದೇಶದಿಂದ ಹಣ ಹರಿದುಬರುತ್ತಿರುವ ಬಗ್ಗೆ ಮಾಹಿತಿ ಇದ್ದು ಇದರ ಹಿಂದೆ ಯಾರಿದ್ದಾರೆ, ಇಡೀ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾದರೆ ಎನ್‌ಐಎ ತನಿಖೆಗೆ ವಹಿಸುವುದು ಸೂಕ್ತ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಐಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಯಾವನೋ ಒಬ್ಬ ತಲೆಬುರುಡೆಯನ್ನು ತಂದಾಗ ಅದರ ಎಫ್‌ಎಸ್‌ಎಲ್ ವರದಿಯನ್ನೇ ಪಡೆಯದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಆಧಾರ, ಸಾಕ್ಷ್ಯ, ದಾಖಲೆಗಳಿಲ್ಲದಿದ್ದರೂ ತಮ್ಮ ಆಪ್ತ ಬಳಗದಲ್ಲಿದ್ದವರ ಮಾತು ಕೇಳಿಕೊಂಡು ದಿಢೀರ್ ಎಸ್‌ಐಟಿ ರಚನೆ ಮಾಡಿದರು. ಕುಮಾರಸ್ವಾಮಿ ಅವರು ಹೇಳುವಂತೆ ಇದು ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ ಆಗಿ ಧರ್ಮಸ್ಥಳ ಪ್ರಕರಣದ ತನಿಖೆಗಿಳಿದರು. ಬಳಿಕ ಇಡೀ ಕಾರ್ಯಾಚರಣೆಯಲ್ಲಿ ಸಿಕ್ಕಿದ್ದು ಬರೀ ಮಣ್ಣು ಎಂದು ವ್ಯಂಗ್ಯವಾಡಿದರು.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವಿದು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆ ಷಡ್ಯಂತ್ರ ನಡೆಸಿದವರು ಯಾರು ಎನ್ನುವುದು ಹೊರಬರಬೇಕಿದೆ. ಅದು ಎಸ್‌ಐಟಿ ತನಿಖೆಯಿಂದ ಸಾಧ್ಯವಿಲ್ಲ. ಸ್ಥಳೀಯ ಪೊಲೀಸರಿಂದಲೂ ಸತ್ಯ ಹೊರಬರುವುದಿಲ್ಲ. ಅದಕ್ಕಾಗಿ ಬುರುಡೆ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು. ಪಿತೂರಿಗಾರರು ಯಾರು, ಅವರಿಗೆ ಹಣ ಪೂರೈಸುತ್ತಿರುವವರು ಯಾರು, ವಿದೇಶಿ ಹಣದ ಮೂಲ ಯಾವುದು ಎನ್ನುವುದು ಬೆಳಕಿಗೆ ತರುವ ಅಗತ್ಯವಿದೆ. ಹಾಗಾಗಿ ರಾಜ್ಯ ಸರ್ಕಾರ ಪ್ರಕರಣವನ್ನು ಕೂಡಲೇ ಎನ್‌ಐಎಗೆ ವಹಿಸುವಂತೆ ಒತ್ತಾಯಿಸಿದರು.
ಧರ್ಮಸ್ಥಳ ಸತ್ಯಯಾತ್ರೆ:ಧರ್ಮಸ್ಥಳ ಬುರುಡೆ ಪ್ರಕರಣದಿಂದ ಸಾಕಷ್ಟು ಅಪಮಾನ, ನೋವುಂಟಾಗಿದ್ದರೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿದಂತೆ ಅವರ ಕುಟುಂಬ ನಡೆದುಕೊಂಡ ರೀತಿ, ವಹಿಸಿದ ತಾಳ್ಮೆ, ಸಹನೆ, ಕೈಗೊಂಡ ತೀರ್ಮಾನಗಳು ಮೆಚ್ಚುವಂತಿವೆ. ಅವರಿಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಆ.೩೧ರಂದು ಜೆಡಿಎಸ್ ಪಕ್ಷದಿಂದ ಧರ್ಮಸ್ಥಳ ಸತ್ಯ ಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.
ಹಾಸನದಿಂದ ಜೆಡಿಎಸ್ ಪಕ್ಷದ ನಾಯಕರು, ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಬಸ್‌ಗಳ ಮೂಲಕ ಧರ್ಮಸ್ಥಳಕ್ಕೆ ತೆರಳಿ ನೇತ್ರಾವತಿ ನದಿ ದಡದಿಂದ ಶ್ರೀ ಮಂಜುನಾಥನ ದೇವಾಲಯದವರೆಗೆ ಪಾದಯಾತ್ರೆ ನಡೆಸಲಾಗುವುದು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ನೈತಿಕ ಸ್ಥೈರ್ಯ ತುಂಬುವುದಾಗಿ ತಿಳಿಸಿದರು.ಜೆಡಿಎಸ್ ನಡೆಸುತ್ತಿರುವ ಯಾತ್ರೆ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಇದರೊಳಗೆ ರಾಜಕಾರಣವನ್ನು ಬೆರೆಸುವುದೂ ಇಲ್ಲ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕೋಟ್ಯಂತರ ಭಕ್ತರ ನಂಬಿಕೆಗೆ ಪಾತ್ರವಾಗಿರುವ ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆ ಕಾಪಾಡುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಮಾಜಿ ಶಾಸಕರ ನಡುವೆ ಗೊಂದಲವಿಲ್ಲ:ಜಿಲ್ಲೆಯ ಮಾಜಿ ಶಾಸಕರೆಲ್ಲರೂ ಒಗ್ಗಟ್ಟಾಗಿದ್ದಾರೆ. ಯಾರಲ್ಲೂ ಗೊಂದಲವಿಲ್ಲ. ನಾಗಮಂಗಲದ ಸುರೇಶ್‌ಗೌಡರು ಹೈದರಾಬಾದ್‌ನಲ್ಲಿದ್ದಾರೆ. ತಾಯಿ ಆರೋಗ್ಯ ಸರಿಯಿಲ್ಲದ ಕಾರಣ ರವೀಂದ್ರ ಶ್ರೀಕಂಠಯ್ಯನವರು ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಿಖಿಲ್, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಬಿಜೆಪಿ ಪ್ರತ್ಯೇಕ ಯಾತ್ರೆ ನಡೆಸುತ್ತಿದ್ದರೂ ಮುಖಂಡರು-ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ. ಕೆಲವೊಂದು ಹೋರಾಟಗಳನ್ನು ಪ್ರತ್ಯೇಕವಾಗಿಯೇ ನಡೆಸಬೇಕಾಗುತ್ತದೆ. ಆದರೆ, ಉದ್ದೇಶ ಒಂದೇ ಆಗಿರುತ್ತದೆ ಎಂದು ನುಡಿದರು.
ಗೋಷ್ಠಿಯಲ್ಲಿ ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಜಿಪಂ ಮಾಜಿ ಸದಸ್ಯ ಕಂಸಾಗರ ರವಿ ಇತರರಿದ್ದರು.