ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಪುತ್ತಿಗೆ ಗ್ರಾಮದ ಹಂಡೇಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆಂಗ್ಲ ಮಾಧ್ಯಮ ತರಗತಿಗೆ ಚಾಲನೆ ನೀಡಲಾಯಿತು.ತಾ.ಪಂ. ಮಾಜಿ ಸದಸ್ಯ, ವಕೀಲ ಪ್ರಕಾಶ್ ತರಗತಿಗೆ ಕಾರ್ಯಕ್ರಮ ಉದ್ಘಾಟಿಸಿ, ಆರು ಮತ್ತು ಏಳನೇ ತರಗತಿ ಕಳೆದ ಹಲವಾರು ವರ್ಷಗಳಿಂದ ಆಂಗ್ಲ ಮಾಧ್ಯಮದಲ್ಲಿ ನಡೆಯುತ್ತಿದ್ದು ಪ್ರಸ್ತುತ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಅನುವು ಮಾಡಿಕೊಟ್ಟ ಸರ್ಕಾರಕ್ಕೆ ಕೃತಜ್ಞತೆಗಳು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ತರಗತಿಯ ಉದ್ಘಾಟಿಸಿ, ಮಕ್ಕಳನ್ನು ಕರೆದುಕೊಂಡು ಬರುವ ಪ್ರಯತ್ನ ಊರಿನವರ ಮುತುವರ್ಜಿಯಿಂದ ಆಗಬೇಕಾಗಿದೆ. ಸ್ಥಳೀಯ ಮಕ್ಕಳನ್ನೇ ಸೇರಿಸಿ ಇನ್ನಷ್ಟು ಉತ್ತಮವಾಗಿ ಶಾಲೆಯ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.ಪುತ್ತಿಗೆ ಗ್ರಾ.ಪಂ. ಸದಸ್ಯ ಮುರುಳಿಧರ ಮಾತನಾಡಿ, ಪಂಚಾಯಿತಿ ಹಾಗೂ ಇತರ ದಾನಿಗಳ ಅನುದಾನದಿಂದ ಶಾಲೆ ಅಭಿವೃದ್ಧಿ ಮಾಡಲು ಪ್ರಯತ್ನಿಸಲಾಗುತ್ತಿದೆ. ದಾನಿಗಳಿಂದ ಶಾಲಾ ಸಮವಸ್ತ್ರ, ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಮಗ್ರಿಗಳನ್ನು ವಿತರಿಸಲಾಗಿದೆ. ಗೌರವ ಶಿಕ್ಷಕರಿಗೆ ಸಂಬಳವನ್ನು ಕೂಡ ಹಳೆ ವಿದ್ಯಾರ್ಥಿಗಳು ಸಂಗ್ರಹಿಸಿ ನೀಡಿ ಶಾಲೆಯ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಸಭೆಗೆ ತಿಳಿಸಿದರು.ಆಂಗ್ಲ ಮಾಧ್ಯಮದ ಗೌರವ ಶಿಕ್ಷಕಿ ಮೋಕ್ಷ ಅವರನ್ನು ಸ್ವಾಗತಿಸಲಾಯಿತು. ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ವಿತರಿಸಲಾಯಿತು.ಮಾಜಿ ಉಪಾಧ್ಯಕ್ಷ ಫಿರೋಜ್ ಖಾನ್, ಥೈರಾ ಬಾನು, ಪ್ರತಿಭಾ, ಖಜಾಂಚಿ ಜಯಂತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಹೇಶ್ವರಿ, ಶಿಕ್ಷಣ ಸಂಯೋಜಕ ರಾಜೇಶ್ ಭಟ್ ಹಾಜರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಚಂದ್ರಕಾಂತಿ ಸ್ವಾಗತಿಸಿದರು, ಶಿಕ್ಷಕ ದೊರೆಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು, ಶಿಕ್ಷಕಿ ಚಿತ್ರಾವತಿ ವಂದಿಸಿದರು.