ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಕರಕುಶಲ ಕಲೆಗಳಿಗೆ ವಿಶಿಷ್ಟ ಸ್ಥಾನ: ಉಪ ಜೀವನಕ್ಕೆ ಆಧಾರ

| N/A | Published : Feb 27 2025, 02:03 AM IST / Updated: Feb 27 2025, 01:02 PM IST

ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಕರಕುಶಲ ಕಲೆಗಳಿಗೆ ವಿಶಿಷ್ಟ ಸ್ಥಾನ: ಉಪ ಜೀವನಕ್ಕೆ ಆಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಕರಕುಶಲ ಕಲೆಗಳಿಗೆ ವಿಶಿಷ್ಟ ಸ್ಥಾನವಿದೆ. ಕರಕುಶಲ ಎಂದರೆ ಮನುಷ್ಯನ ಹೃದಯ, ಬುದ್ಧಿ ಮತ್ತು ಕೈಗಳು ಏಕೀಭವಿಸಿ ತನ್ಮಯತೆಯಿಂದ ಕಾರ್ಯ ನಿರ್ವಹಿಸುವ ಅಪೂರ್ವ ಶ್ರಮದ ಪ್ರತಿಫಲವಾಗಿದೆ.

ಗದಗ: ಕರಕುಶಲ ಕಲೆಗಳು ಮಾನವನ ಮೂಲ ಕಲೆಗಳಾಗಿದ್ದು, ಇವು ಉಪ ಜೀವನಕ್ಕೆ ಆಧಾರವಾಗಿವೆ ಎಂದು ಆದರ್ಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪಿ.ಆರ್. ಅಡವಿ ಹೇಳಿದರು.

ಅವರು ಆದರ್ಶ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಭವನದಲ್ಲಿ ಭಾರತ ಸರ್ಕಾರ ಹ್ಯಾಂಡಿಕ್ರಾಫ್ಟ್ ಕಮಿಷನ್, ಹ್ಯಾಂಡಿಕ್ರಾಫ್ಟ್ ಸರ್ವಿಸ್ ಸೆಂಟರ್ ಮಂಗಳೂರು ಹಾಗೂ ಆದರ್ಶ ಶಿಕ್ಷಣ ಸಂಸ್ಥೆಯ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ ಮೂರು ದಿನಗಳ ಕರಕುಶಲ ಕಲೆಗಳ ಕುರಿತ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಕರಕುಶಲ ಕಲೆಗಳಿಗೆ ವಿಶಿಷ್ಟ ಸ್ಥಾನವಿದೆ. ಕರಕುಶಲ ಎಂದರೆ ಮನುಷ್ಯನ ಹೃದಯ, ಬುದ್ಧಿ ಮತ್ತು ಕೈಗಳು ಏಕೀಭವಿಸಿ ತನ್ಮಯತೆಯಿಂದ ಕಾರ್ಯ ನಿರ್ವಹಿಸುವ ಅಪೂರ್ವ ಶ್ರಮದ ಪ್ರತಿಫಲವಾಗಿದೆ. ಕರಕುಶಲ ಕಲೆಯೆಂದರೆ ಮಕ್ಕಳ ಆಟಿಕೆ ಅಥವಾ ಮನರಂಜನೆ ವಸ್ತುಗಳ ತಯಾರಿಕೆ ಮಾತ್ರವಲ್ಲ ಮನುಷ್ಯನ ಅಗತ್ಯಗಳಿಗೆ ತಕ್ಕಂತೆ ರೂಪುಗೊಂಡ ಹಲವು ಬಗೆಯ ವಸ್ತುಗಳಿಗೆ ಕಲಾತ್ಮಕ ಮೆರುಗು ನೀಡುವ ಒಂದು ರೀತಿಯ ಧ್ಯಾನ ಅಂತಹ ಪರಿಪೂರ್ಣ ಜ್ಞಾನವಿರುವ ಸಂಪನ್ಮೂಲ ವ್ಯಕ್ತಿಗಳು ಇಂದು ಕಾರ್ಯಾಗಾರದಲ್ಲಿ ತರಬೇತಿ ನೀಡಲು ಆಗಮಿಸಿದ್ದಾರೆ. ಯುವಕರು ಇಂತಹ ಕಲೆಗಳನ್ನು ಹೆಚ್ಚು ತಮ್ಮ ಜೀವನದಲ್ಲಿ ಕಲಿಕೆಯೊಂದಿಗೆ ಅಳವಡಿಸಿಕೊಂಡು ಕಲಿಕೆಯೊಂದಿಗೆ ಗಳಿಕೆ ಕೂಡ ರೂಢಿಸಿಕೊಳ್ಳಬೇಕು ಎಂದರು.

ವಿಶೇಷ ಅತಿಥಿಗಳಾಗಿ ಆಗಮಿಸಿದ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಮಾತನಾಡಿ, ಕರಕುಶಲ ಕಲೆಗಳಲ್ಲಿ ಚಿತ್ರಕಲೆ, ಕುಂಭಕಲೆ, ಮರದ ಕೆತ್ತನೆ, ಕಲ್ಲು ಕೆತ್ತನೆ, ಲೋಹ ಶಿಲ್ಪ, ಆಭರಣಗಳ ತಯಾರಿಕೆ, ಮಣ್ಣಿನ ಮೂರ್ತಿ, ಮಡಕೆ-ಕುಡಿಕೆಗಳ ತಯಾರಿಕೆ, ದಂತ ಕೆತ್ತನೆ, ಹುದುಗು ಕಲೆ, ಜಾನಪದ ಗೊಂಬೆ, ಕೈಮಗ್ಗ, ಜವಳಿ, ಕಸೂತಿ ಕೆಲಸ, ಆಟಿಕೆ, ಕಂಬಳಿ ಮತ್ತು ಗುಡಾರಗಳ ನೇಯ್ಕೆ, ಬುಟ್ಟಿ, ಚಾಪೆಗಳ ಹೆಣಿಗೆ ಮೊದಲಾದ ನೂರಾರು ಕಲೆಗಳ ಬರುತ್ತವೆ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಅನೇಕ ಕರಕುಶಲ ಕಲೆಗಳು ಇದ್ದು ಈ ತರಬೇತಿಯ ಮೂಲಕ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ವಿಶೇಷ ಅತಿಥಿಗಳಾಗಿ ಧಾರವಾಡದ ಹ್ಯಾಂಡಿಕ್ರಾಫ್ಟ್ ಸರ್ವಿಸ್ ಸೆಂಟರ್ ಇನ್ ಮುಖ್ಯಸ್ಥ ಸುಶಾಂತ್ ಭೋನಿ ಮಾತನಾಡಿ, ಮೂರು ದಿನಗಳ ಕಾಲ ತರಬೇತಿ ಕಾರ್ಯಾಗಾರ ನಡೆಯುತ್ತಿದ್ದು,ರಾಜ್ಯದ ವಿವಿಧ ಮೂಲೆಗಳಿಂದ ಸಂಪನ್ಮೂಲ ವ್ಯಕ್ತಿಗಳು ಈ ಒಂದು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಇದರ ಉಪಯೋಗ ಪಡೆದುಕೊಳ್ಳಿ ಎಂದರು.

ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಡಾ.ವಿ.ಟಿ ನಾಯ್ಕರ ವಹಿಸಿಕೊಂಡಿದ್ದರು. ಬಿಬಿಎ ಹಾಗೂ ಬಿಸಿಎ ಮಹಾವಿದ್ಯಾಲಯದ ಪ್ರಾಚಾರ್ಯ ಲಿಂಗರಾಜ್ ರಶ್ಮಿ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಬಾಹುಬಲಿ ಜೈನರ್, ವಿದ್ಯಾರ್ಥಿ ಮುಖಂಡ ಜನಕ ರೆಡ್ಡಿ ಎಚ್.ಕು. ಮನೋಜ್ ದಲಬಂಜನ್, ಆದರ್ಶ್ ಅಕ್ಕಿ, ಅಭಿಷೇಕ್ ಮಾಗಡಿ, ಎನ್ಎಸ್ಎಸ್ ವಿಭಾಗದ ಸ್ವಯಂ ಸೇವಕ ಸೇವಕರು ಮಹಾವಿದ್ಯಾಲಯದ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.