ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಸಾಂಪ್ರದಾಯಿಕ ಕರಕುಶಲ ಕಲೆಗಳ ತನ್ನದೇ ಆದ ವಿಶೇಷತೆ ಹೊಂದಿದ್ದು, ನಾವೆಲ್ಲರೂ ಸಾಂಪ್ರದಾಯಿಕ ಕರಕುಶಲ ಉಳಿಸಿಕೊಳ್ಳೋಣ ಎಂದು ಸಹಾಯಕ ನಿರ್ದೇಶಕ ಕಿರಣ.ವಿ.ಎನ್ ಹೇಳಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಸಾಂಪ್ರದಾಯಿಕ ಕರಕುಶಲ ಕಲೆಗಳ ತನ್ನದೇ ಆದ ವಿಶೇಷತೆ ಹೊಂದಿದ್ದು, ನಾವೆಲ್ಲರೂ ಸಾಂಪ್ರದಾಯಿಕ ಕರಕುಶಲ ಉಳಿಸಿಕೊಳ್ಳೋಣ ಎಂದು ಸಹಾಯಕ ನಿರ್ದೇಶಕ ಕಿರಣ.ವಿ.ಎನ್ ಹೇಳಿದರು.ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದ ಬಸವಪ್ರಭು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸರ್ಕಾರದ ಜವಳಿ ಸಚಿವಾಲಯದ ಕರಕುಶಲ ಇಲಾಖೆ ಧಾರವಾಡದಿಂದ ಆಯೋಜಿಸಲಾಗಿದ್ದ ಕರ ಕುಶಲ ಕಲೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರಕುಶಲ ಕಲೆಗಳ ಮಹತ್ವ ಪರಿಚಯಿಸುವ ಜತೆಯಲ್ಲಿ ಮುಂದಿನ ಪೀಳಿಗೆಯಲ್ಲಿ ಕರಕುಶಲ ಪರಂಪರೆಯ ಬಗ್ಗೆ ಆಸಕ್ತಿ ಬೆಳೆಸುವುದು ಎಲ್ಲರ ಜವಾಬ್ದಾರಿ ಎಂದರು.

ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯ ಬಳಸಿಕೊಂಡು ಕಲಿಕೆಗೆ ಅಗತ್ಯವಾಗಿರುವ ವಸ್ತುಗಳನ್ನು ತಯಾರಿಸುತ್ತಾರೆ. ಅವರಿಗೆ ಕರಕುಶಲ ಕಲೆಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಿದಲ್ಲಿ ಇನ್ನೂ ಹೆಚ್ಚು ಸಕ್ರೀಯವಾಗಿ ಚಟುವಟಿಕೆಗಳಲ್ಲಿ ತೊಡಿಕೊಳ್ಳುತ್ತಾರೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮುಖ್ಯಸ್ಥ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ನಮ್ಮ ಭಾಗದಲ್ಲಿ ನಮ್ಮ ಹಿರಿಯರು ಅಪ್ರತಿಮ ಸಾಧಕರಾಗಿದ್ದಾರೆ. ಈ ಕುರಿತು ವಿದ್ಯಾರ್ಥಿಗಳು ತಿಳಿದುಕೊಂಡು ನಮ್ಮ ಭಾಗದಲ್ಲಿರುವ ಕಲೆ ಮತ್ತು ಸಂಸ್ಕೃತಿ ಉಳಿಸಿಕೊಳ್ಳುವ ಮೂಲಕ ನಮ್ಮ ತನವನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಆರು ವಿವಿಧ ಕರಕುಶಲ ಕಲೆಗಳ ನೇರ ಪ್ರಾತ್ಯಕ್ಷಿಕೆ ನೀಡಲಾಯಿತು. ಕರಕುಶಲ ಕಲಾವಿದರು ತಮ್ಮ ತಮ್ಮ ಕಲೆಯ ವಿಶೇಷತೆ, ತಯಾರಿಕಾ ವಿಧಾನ ಹಾಗೂ ಕಲೆಗಳ ಪರಂಪರೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.

ವಿವಿಧ ಕಲೆಗಳ ಪ್ರಾತ್ಯಕ್ಷಿಕೆ: ಗಾಯತ್ರಿ.ಸಿ. ಅವರು ಕಲ್ಲು ಕೆತ್ತನೆ ಕಲೆಯ ಕುರಿತು, ಶ್ರೀವಿದ್ಯಾ ಗ್ಲಾಸ್ ಪೇಂಟಿಂಗ್ ಕಲೆಯ ಪ್ರಾತ್ಯಕ್ಷಿಕೆ ನೀಡಿದರು. ಪ್ರಶಾಂತ ಶಹಾಪುರ ಅವರು ಮಣ್ಣಿನ ಅಚ್ಚು, ಮಣ್ಣಿನ ಮಾದರಿ ತಯಾರಿಕೆ ಕಲೆಗಳ ಕುರಿತು ತಿಳಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಲಾವಿದರೊಂದಿಗೆ ಸಂವಾದ ನಡೆಸಿ, ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಬಳಸುವ ವಿವಿಧ ಸಾಮಗ್ರಿಗಳು, ಉಪಕರಣಗಳು ಮತ್ತು ತಂತ್ರಗಳ ಕುರಿತು ಮಾಹಿತಿ ಪಡೆದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳ ವಿತರಿಸಲಾಯಿತು. ಶಿಕ್ಷಕರಾದ ಚೆನ್ನಮ್ಮ ಪ್ರಕಾಶ, ವಿದ್ಯಾವತಿ ಅಂಗಡಿ, ಶ್ರೀದೇವಿ ಅಮ್ಮಾಪುರ ಹಾಗೂ ಶ್ರೀದೇವಿ ಮಂಗಳೂರು ಇದ್ದರು. ಸಮನ್ವಿ ಸಂಗಡಿಗರು ಪ್ರಾರ್ಥಿಸಿದರು. ಸೃಜನ ಜಗಶೆಟ್ಟಿ ವಂದಿಸಿದರು. ಸಿದ್ದಪ್ರಸಾದ ನಿರೂಪಿಸಿದರು.