ಸಾರಾಂಶ
ಮನೆಯ ಯಜಮಾನ ಸುಂದರ ಮಾತನಾಡಿ ಸಂಘಟನೆಯ ಯುವಕರು ಕಷ್ಟಪಟ್ಟು ದೂರದಿಂದ ಕಲ್ಲುಮಣ್ಣುಗಳನ್ನು ತಂದು ನಮಗೆ ಸೂರನ್ನು ನಿರ್ಮಿಸಿ ಕೊಟ್ಟು ನಮ್ಮ ಕುಟುಂಬದ ಕಷ್ಟಕ್ಕೆ ನೆರವಾಗಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಸಾಮಾಜಿಕ ಸೇವೆಯಲ್ಲಿ ನಿರತವಾಗಿರುವ ಸಂಘಟನೆ ತ್ರಿಶೂಲ್ ಫ್ರೆಂಡ್ಸ್ ಬೆದ್ರ ಇವರ ಯೋಜನೆಯ ಅಡಿಯಲ್ಲಿ ಮೂಡುಮಾರ್ನಾಡು ತಂಡ್ರಕೆರೆ ಎಂಬಲ್ಲಿ ಸಂಘಟನೆಯ ಯುವಕರೇ ಒಟ್ಟು ಸೇರಿ ನೂತನವಾಗಿ ನಿರ್ಮಿಸಲಾದ ಮನೆಯನ್ನು ಭಾನುವಾರ ಮನೆಯ ಯಜಮಾನ ಸುಂದರ ಅವರಿಗೆ ರಜಿನಿ ಶೆಟ್ಟಿ ಹಾಗೂ ಸಂಘಟನೆಯ ಯುವಕರು ಜತೆಗೂಡಿ ನಾಮಫಲಕವನ್ನು ಬಿಡುಗಡೆಗೊಳಿಸಿ ಮನೆಯ ಕೀ ಯನ್ನು ಹಸ್ತಾಂತರಿಸಿದರು.ಕೀ ಹಸ್ತಾಂತರಿಸಿ ಮಾತನಾಡಿದ ರಜಿನಿ ಶೆಟ್ಟಿ ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯಿಂದ ಇನ್ನಷ್ಟು ಸಮಾಜ ಸೇವೆಯನ್ನು ಮಾಡುವಂತಾಗಲಿ, ಇವರ ಉತ್ತಮ ಸೇವಾ ಯೋಜನೆಗಳಿಗೆ ಭಗವಂತನ ಅನುಗ್ರಹವಿರಲೆಂದು ಹಾರೈಸಿದರು.
ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯ ಗೌರವಾಧ್ಯಕ್ಷ ಅಶ್ವಥ್ ಪಣಪಿಲ ಮಾತನಾಡಿ, ಈ ತಂಡದ ಸದಸ್ಯರು ನಿರಂತರವಾಗಿ ದೂರದಿಂದ ಕಲ್ಲು ಮಣ್ಣುಗಳನ್ನು ಹೊತ್ತುಕೊಂಡು ಕಷ್ಟಪಟ್ಟು ಕೆಲಸ ಮಾಡಿ ಈ ಬಡ ಕುಟುಂಬಕ್ಕೆ ಮನೆಯನ್ನು ಕಟ್ಟಿಕೊಟ್ಟಿದ್ದಾರೆ. ಇವರ ಈ ಕೆಲಸ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಸಂಘಟನೆಯ ಯುವಕರೆಲ್ಲಾರನ್ನು ಅಭಿನಂದಿಸಿ, ಈ ಮನೆಯಿಂದ ಈ ಕುಟುಂಬವೂ ಸುಖಕರವಾಗಿರಲಿ ಎಂದರು.ತ್ರಿಶೂಲ್ ಫ್ರೆಂಡ್ ಸಂಘಟನೆಯ ಅಧ್ಯಕ್ಷ ರಕ್ಷಿತ್ ಮಾತನಾಡಿ ಇದುವರೆಗೂ ವೈದ್ಯಕೀಯ ಸೇವೆ ಹಾಗೂ ಇನ್ನಿತರ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದು ಇದೀಗ ಮೊದಲ ಬಾರಿಗೆ ಒಂದು ಬಡ ಕುಟುಂಬಕ್ಕೆ ಸೂರನ್ನು ಕಟ್ಟಿಕೊಡುವ ಕೆಲಸವನ್ನು ಸಂಘಟನೆಯ ಎಲ್ಲ ಯುವಕರ ಸಹಕಾರದೊಂದಿಗೆ ಮಾಡಲಾಗಿದೆ ಎಂದರು.
ಮನೆಯ ಯಜಮಾನ ಸುಂದರ ಮಾತನಾಡಿ ಸಂಘಟನೆಯ ಯುವಕರು ಕಷ್ಟಪಟ್ಟು ದೂರದಿಂದ ಕಲ್ಲುಮಣ್ಣುಗಳನ್ನು ತಂದು ನಮಗೆ ಸೂರನ್ನು ನಿರ್ಮಿಸಿ ಕೊಟ್ಟು ನಮ್ಮ ಕುಟುಂಬದ ಕಷ್ಟಕ್ಕೆ ನೆರವಾಗಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.ಸಂಘಟನೆಯ ಸಲಹೆಗಾರರಾದ ಸೋಮಶೇಖರ್, ಹಾಗೂ ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.