ಕೊಪ್ಪಳ: ಭಾರತದ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಸ್ವದೇಶಿ ಕಲೆ ತಲೆತಲಾಂತರಗಳಿಂದ ಜೀವಂತವಾಗಿರಿಸಿರುವ ಕೈಮಗ್ಗ ವಲಯವು ದೇಶದ ಲಕ್ಷಾಂತರ ಕುಟುಂಬಗಳಿಗೆ ಬದುಕಿನ ಆಸರೆಯಾಗಿದೆ. ನೇಕಾರರ ಪರಿಶ್ರಮ, ಕೌಶಲ್ಯ ಮತ್ತು ಸಮರ್ಪಣೆ ಗೌರವಿಸುವ ಜತೆಗೆ ಕೈಮಗ್ಗದಲ್ಲಿ ನೇಯ್ದ ವಸ್ತ್ರ ಬಳಸುವ ಮೂಲಕ ಸ್ಥಳೀಯ ನೇಕಾರರು ಹಾಗೂ ಕರಕುಶಲಗಾರರನ್ನು ಪ್ರೋತ್ಸಾಹಿಸಬೇಕು ಎಂದು ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ ಕರೆ ನೀಡಿದರು.

ಭಾಗ್ಯನಗರ ಪಪಂನಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಕೈಮಗ್ಗ ದಿನವು ದೇಶದ ನೇಕಾರರ ಪರಿಶ್ರಮ ಸ್ಮರಿಸುವ ಹಾಗೂ ಅವರ ಕೊಡುಗೆ ಗೌರವಿಸುವ ಮಹತ್ವದ ದಿನವಾಗಿದೆ. ಕೈಮಗ್ಗ ಕ್ಷೇತ್ರವು ಕೇವಲ ಬಟ್ಟೆ ಉತ್ಪಾದನೆಯ ಉದ್ಯಮವಾಗಿರದೆ, ಭಾರತದ ಸಾಂಸ್ಕೃತಿಕ ಪರಂಪರೆ, ಸ್ಥಳೀಯ ಕಲೆ ಹಾಗೂ ಗ್ರಾಮೀಣ ಆರ್ಥಿಕತೆಯೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದರು.

ದೇಶದ ವಿವಿಧ ಭಾಗಗಳಲ್ಲಿ ನೇಕಾರರು ತಮ್ಮ ಕೌಶಲ್ಯ ಮತ್ತು ಸೃಜನಶೀಲತೆಯಿಂದ ವಿಶಿಷ್ಟ ವಿನ್ಯಾಸ ಹಾಗೂ ಬಣ್ಣಗಳ ಕೈಮಗ್ಗ ವಸ್ತ್ರ ಸಿದ್ಧಪಡಿಸುತ್ತಿದ್ದಾರೆ. ತಲೆಮಾರುಗಳಿಂದ ಬಂದಿರುವ ಈ ಕಲೆ ಹಾಗೂ ಪರಂಪರೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕೈಮಗ್ಗ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತರೆ ನೇಕಾರ ಕುಟುಂಬಗಳ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ ಎಂದು ಹೇಳಿದರು.

ಕೈಮಗ್ಗ ವಸ್ತ್ರಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ಥಳೀಯ ನೇಕಾರರ ಶ್ರಮಕ್ಕೆ ಬೆಂಬಲ ನೀಡಬೇಕು. ನೇಕಾರರು ತಮ್ಮ ಕೌಶಲ್ಯ ಮುಂದಿನ ಪೀಳಿಗೆಗೆ ವರ್ಗಾಯಿಸುವ ಜತೆಗೆ ಆಧುನಿಕ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ಉತ್ಪನ್ನ ರೂಪಿಸುವ ಪ್ರಯತ್ನ ಮಾಡಬೇಕು. ಸಾರ್ವಜನಿಕರು ಹಾಗೂ ವಿವಿಧ ಸಂಸ್ಥೆಗಳು ಕೈಮಗ್ಗ ಉತ್ಪನ್ನ ಖರೀದಿಸುವ ಮೂಲಕ ನೇಕಾರ ಸಮುದಾಯಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ನೇಕಾರ ಸಮುದಾಯದ ಪರಿಶ್ರಮವು ದೇಶದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಕೈಮಗ್ಗ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆ ಹಾಗೂ ಸೌಲಭ್ಯ ನೇಕಾರರು ಸದುಪಯೋಗಪಡಿಸಿಕೊಂಡು ತಮ್ಮ ಜೀವನಮಟ್ಟ ಸುಧಾರಿಸಿಕೊಳ್ಳಬೇಕು. ನೇಕಾರರ ಸಮಸ್ಯೆ ಪರಿಹರಿಸಲು ಸಂಬಂಧಿಸಿದ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಹೊನ್ನೂರಸಾಬ್‌ ಬೈರಾಪುರ, ಭಾಗ್ಯನಗರದ ನೇಕಾರ ಸಮುದಾಯದ ಯಮನಪ್ಪ ಕಬ್ಬೇರ, ಶ್ರೀನಿವಾಸ ಗುಪ್ತಾ, ಜವಾಹರಲಾಲಸಾ ಅಂಟಾಳಮರದ, ಚಂದ್ರು ಬಟಗೆರಿ, ದಾನಪ್ಪ ಕವಲೂರು, ನೀಲಕಂಠಪ್ಪ ಮೈಲಿ, ಸುರೇಶ ಪೆದ್ದಿ, ಕೊಟ್ರೇಶ ಸೇಡ್ಮಿ, ಲಕ್ಷ್ಮಣ ಚಳಮರದ, ಕೊಟ್ರೇಶ್ ಕವಲೂರು ಹಾಗೂ ಧರ್ಮಣ್ಣ ಹೊಟ್ಟಿ, ಮೋಹನ ಅರಕಲ, ಸರಸ್ವತಿ ಕೃಷ್ಣ ಇಟ್ಟಂಗಿ, ವಾಸುದೇವ ಮೇಘರಾಜ, ಶಿವರಾಮ ಮ್ಯಾಗಳಮನಿ, ಗವಿಸಿದ್ದಪ್ಪ ಮಗಿಮಾವಿನಹಳ್ಳಿ ಹಾಗೂ ಗವಿಸಿದ್ದಯ್ಯ ಕೆಂಭಾವಿಮಠ ಸೇರಿದಂತೆ ಅನೇಕರು ಇದ್ದರು.