ಅಲ್ಪಸಂಖ್ಯಾತರಿಗೆ ಕೈ ಮಣೆ, ಭರತ್‌ ವಿರುದ್ಧ ಪಠಾಣ್‌ ಸ್ಪರ್ಧೆ

| Published : Oct 25 2024, 01:52 AM IST

ಸಾರಾಂಶ

ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆಗೆ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕೋ ಅಥವಾ ಲಿಂಗಾಯತರಿಗೋ ಎಂಬ ಗೊಂದಲಕ್ಕೆ ಸಿಲುಕಿದ್ದ ಕಾಂಗ್ರೆಸ್‌ ನಾಯಕರು, ಅಳೆದು ತೂಗಿ 2023ರಲ್ಲಿ ಸ್ಪರ್ಧಿಸಿದ್ದ ಯಾಸೀರ್ ಅಹ್ಮದ್‌ಖಾನ್‌ ಪಠಾಣ್‌ ಹೆಸರನ್ನು ಘೋಷಿಸಿದೆ. ಬಿಜೆಪಿಯ ಭರತ್‌ ಬೊಮ್ಮಾಯಿ ಮತ್ತು ಪಠಾಣ್ ನಡುವೆ ನೇರ ಹಣಾಹಣಿಗೆ ಶಿಗ್ಗಾಂವಿ ಕ್ಷೇತ್ರ ಸಜ್ಜುಗೊಂಡಂತಾಗಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆಗೆ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕೋ ಅಥವಾ ಲಿಂಗಾಯತರಿಗೋ ಎಂಬ ಗೊಂದಲಕ್ಕೆ ಸಿಲುಕಿದ್ದ ಕಾಂಗ್ರೆಸ್‌ ನಾಯಕರು, ಅಳೆದು ತೂಗಿ 2023ರಲ್ಲಿ ಸ್ಪರ್ಧಿಸಿದ್ದ ಯಾಸೀರ್ ಅಹ್ಮದ್‌ಖಾನ್‌ ಪಠಾಣ್‌ ಹೆಸರನ್ನು ಘೋಷಿಸಿದೆ. ಬಿಜೆಪಿಯ ಭರತ್‌ ಬೊಮ್ಮಾಯಿ ಮತ್ತು ಪಠಾಣ್ ನಡುವೆ ನೇರ ಹಣಾಹಣಿಗೆ ಶಿಗ್ಗಾಂವಿ ಕ್ಷೇತ್ರ ಸಜ್ಜುಗೊಂಡಂತಾಗಿದೆ.

ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾಂವಿ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಯಾರನ್ನು ಕಣಕ್ಕಿಳಿಸಬೇಕು ಎಂಬ ಕುರಿತು ಕಾಂಗ್ರೆಸ್‌ ನಾಯಕರು ಸಭೆ ಮೇಲೆ ಸಭೆ ನಡೆಸಿ ಅಂತೂ ಯಾಸೀರ್‌ ಅಹ್ಮದ್ ಖಾನ್ ಪಠಾಣೆ ಹೆಸರನ್ನು ಅಂತಿಮಗೊಳಿಸಿದ್ದಾರೆ. ಟಿಕೆಟ್‌ಗಾಗಿ ಆಕಾಂಕ್ಷಿಗಳ ನಡುವೆ ನಡೆದ ಭಾರಿ ಪೈಪೋಟಿಯಲ್ಲಿ 2023ರ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಪರಾಭವಗೊಂಡಿದ್ದ ಪಠಾಣ್‌ ಮತ್ತೊಂದು ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಐದು ಸಲ ಪರಾಭವಗೊಂಡರೂ ಕಾಂಗ್ರೆಸ್‌ ಅಲ್ಪಸಂಖ್ಯಾತರಿಗೆ ಮತ್ತೊಮ್ಮೆ ಮಣೆ ಹಾಕಿದೆ.

ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್‌ ಯಾರಿಗೆ ಟಿಕೆಟ್‌ ನೀಡಲಿದೆ ಎಂಬ ಬಗ್ಗೆ ಭಾರೀ ಕುತೂಹಲ ಕೆರಳಿಸಿತ್ತು. 2004ರಿಂದ 2023ರವರೆಗೆ ನಡೆದ 5 ಚುನಾವಣೆಗಳಲ್ಲಿ ಮುಸ್ಲಿ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿತ್ತು. ಆದ್ದರಿಂದ ಅಲ್ಪಸಂಖ್ಯಾತರಿಗೇ ಟಿಕೆಟ್‌ ನೀಡಬೇಕು ಎಂದು ಕೆಲವರು ಪಟ್ಟು ಹಿಡಿದಿದ್ದರು. ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಮತ್ತು ಯಾಸೀರ್‌ ಖಾನ್‌ ಪಠಾಣ ಇವರಿಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಕುರಿತು ಚರ್ಚೆಯಾಗಿತ್ತು. ಇದೇ ವೇಳೆ ಈ ಸಲ ಲಿಂಗಾಯತರಿಗೆ ಟಿಕೆಟ್‌ ನೀಡಿದರೆ ಬಿಜೆಪಿಗೆ ಠಕ್ಕರ್‌ ಕೊಡಬಹುದು ಎಂಬ ಲೆಕ್ಕಾಚಾರವೂ ನಡೆದಿತ್ತು. ರಾಜು ಕುನ್ನೂರ, ಸಂಜೀವಕುಮಾರ ನೀರಲಗಿ, ಸೋಮಣ್ಣ ಬೇವಿನಮರದ ಜತೆಗೆ ವಿನಯ ಕುಲಕರ್ಣಿ ಪುತ್ರಿ ವೈಶಾಲಿ ಹೆಸರು ಮುನ್ನೆಲೆಗೆ ಬಂದಿತ್ತು. ಇವರಲ್ಲಿ ಯಾರಿಗೆ ಟಿಕೆಟ್‌ ನೀಡಿದರೆ ಸೂಕ್ತ ಎಂಬ ಕುರಿತು ಬುಧವಾರ ರಾತ್ರಿವರೆಗೂ ಭಾರೀ ಸರ್ಕಸ್‌ ನಡೆದಿತ್ತು. ಆದರೆ, ಜಿಲ್ಲೆಯ ಕೈ ಶಾಸಕರು, ಕೆಲ ಸಚಿವರು ಪಠಾಣ್ ಪರ ನಿಂತಿದ್ದರು. ಅಂತೂ ಗುರುವಾರ ಸಂಜೆ ವೇಳೆಗೆ ಪಠಾಣ್‌ ಹೆಸರನ್ನು ಘೋಷಣೆ ಮಾಡಲಾಯಿತು. ಒಂದುವರೆ ವರ್ಷದಲ್ಲಿ ಎರಡನೇ ಸಲ ಯಾಸೀರ್ ಖಾನ್ ಪಠಾಣ್‌ ಚುನಾವಣೆ ಎದುರಿಸುತ್ತಿದ್ದಾರೆ.

ಪಠಾಣ್ ಕಿರು ಚರಿಚಯ: ಯಾಸೀರ್‌ ಅಹ್ಮದ್‌ಖಾನ್ ಪಠಾಣ್‌ 2023ರ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿ 35 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಮೂಲತಃ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯವರಾದ ಇವರು 1981, ಆ. 20ರಂದು ಜನಿಸಿದ್ದು, ಇವರ ತಂದೆ

ಮಹಮ್ಮದ್ ಖಾನ್ ಪಠಾಣ್ ಧಾರವಾಡ ಜಿಲ್ಲಾ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದರು. ಬಿಎ ಪದವೀಧರರಾಗಿರುವ ಇವರು ಸದ್ಯ ಉದ್ಯಮಿಯಾಗಿದ್ದಾರೆ. 2013ರಿಂದ ರಾಜಕೀಯಕ್ಕೆ ಧುಮುಕಿದ ಇವರು, ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಇದರ ಫಲವಾಗಿ 2023ರಲ್ಲಿ ಶಿಗ್ಗಾಂವಿ ಕ್ಷೇತ್ರದ ಕೈ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹಿಂದಿನ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಪರಾಭವಗೊಂಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ವಿನೋದ ಅಸೂಟಿ ಪರ ಪ್ರಚಾರ ನಡೆಸಿ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 8300 ಮತಗಳ ಲೀಡ್‌ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ನಡೆಯುತ್ತಿರುವ ಉಪಚುನಾವಣೆಯಲ್ಲಿ ಮತ್ತೊಮ್ಮೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಖಾದ್ರಿ ನಡೆ ಬಗ್ಗೆ ಕುತೂಹಲ: ಒಂದೇ ಪಕ್ಷದಲ್ಲಿದ್ದರೂ ಪಠಾಣ್‌ ಮತ್ತು ಅಜ್ಜಂಫೀರ್ ಖಾದ್ರಿ ಇಬ್ಬರ ಬೆಂಬಲಿಗರ ನಡುವೆ ಭಿನ್ನಾಭಿಪ್ರಾಯವಿದೆ. ಇಬ್ಬರ ಬೆಂಬಲಿಗರ ನಡುವೆ ಗುಂಪುಗಾರಿಕೆಯಿದೆ. ಟಿಕೆಟ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಅಜ್ಜಂಫೀರ್ ಖಾದ್ರಿ ಟಿಕೆಟ್‌ ಕೈತಪ್ಪಿರುವುದರಿಂದ ನಿರಾಸೆಗೊಂಡಿದ್ದಾರೆ. ಅವರ ಬೆಂಬಲಿಗರು ಶಿಗ್ಗಾಂವಿಯಲ್ಲಿ ಪ್ರತಿಭಟನೆ ನಡೆಸಿ ಪಕ್ಷದ ನಾಯಕರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇವರ ಮುಂದಿನ ನಡೆಯೇನು ಎಂಬುದರ ಬಗ್ಗೆ ಕುತೂಹಲವಿದೆ. ಪಕ್ಷೇತರರಾಗಿ ಸ್ಪರ್ಧಿಸುತ್ತಾರೋ, ಪಠಾಣ್‌ ಅವರನ್ನು ಬೆಂಬಲಿಸಲಿದ್ದಾರೆಯೋ ಅಥವಾ ತಟಸ್ಥರಾಗಿ ಉಳಿಯುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.

ಟಿಕೆಟ್‌ ಕೈತಪ್ಪಿದ್ದಕ್ಕೆ ಬೇಸರವಾಗಿದೆ. ಇದರಿಂದ ನಮ್ಮ ಬೆಂಬಲಿಗರಿಗೂ ನಿರಾಸೆಯಾಗಿದೆ. ಅವರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಅಜ್ಜಂಫೀರ್ ಖಾದ್ರಿ ಹೇಳಿದರು.