ಕನ್ನಡಪ್ರಭವಾರ್ತೆ, ಸಕಲೇಶಪುರ
ತಾಲೂಕಿನ ಹಾನುಬಾಳು ಗ್ರಾಮ ಪಂಚಾಯಿತಿಯು ಅಭಿವೃದ್ಧಿ ಪಥದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಈ ಬಾರಿಯೂ ಹಾನುಬಾಳು ಪಂಚಾಯಿತಿ ಆಯ್ಕೆಯಾಗಿದೆ. ಪಂಚಾಯಿತಿಗೆ ಏಳನೇ ಬಾರಿ ಲಭಿಸುತ್ತಿರುವ ಗಾಂಧಿ ಗ್ರಾಮ ಪ್ರಶಸ್ತಿ ಇದಾಗಿದೆ. ಗ್ರಾಮೀಣ ಭಾಗದಲ್ಲಿ ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ಉತ್ತಮ ಆಡಳಿತ, ಸ್ವಚ್ಛತೆ, ಕುಡಿಯುವ ನೀರು, ರಸ್ತೆ ಸಂಪರ್ಕ ಹಾಗೂ ತೆರಿಗೆ ವಸೂಲಾತಿಯಲ್ಲಿ ಅತ್ಯುತ್ತಮ ಸಾಧನೆ ತೋರುವ ಪಂಚಾಯಿತಿಗಳಿಗೆ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಹಾನುಬಾಳು ಪಂಚಾಯಿತಿಯು ಈ ಎಲ್ಲ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಮೂಲಕ ರಾಜ್ಯದ ಗಮನ ಸೆಳೆದಿದೆ.5 ಲ.ರೂ. ನಗದು-ಅಭಿನಂದನಾ ಪತ್ರ:
ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನೀಡುವ ಪ್ರಶಸ್ತಿಯು 5 ಲಕ್ಷ ರು. ಪ್ರೋತ್ಸಾಹ ಧನ, ಅಭಿನಂದನಾ ಪತ್ರ ಒಳಗೊಂಡಿದೆ. ಈ ಅನುದಾನವನ್ನು ಗ್ರಾಮದ ಮತ್ತಷ್ಟು ಅಭಿವೃದ್ಧಿ, ವಿಶೇಷವಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ದಂತಹ ಯೋಜನೆಗಳಿಗೆ ಬಳಸಲು ಅವಕಾಶವಿರುತ್ತದೆ. ಕುಡಿಯುವ ನೀರಿನ ಸಮರ್ಪಕ ಪೂರೈಕೆ, ರಸ್ತೆ ಸಂಪರ್ಕ ಮತ್ತು ಬೀದಿ ದೀಪಗಳ ನಿರ್ವಹಣೆ, ಸರ್ಕಾರಿ ಯೋಜನೆಗಳ ಅನುಷ್ಠಾನ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳ ಸೃಜನೆ ಮತ್ತು ವಸತಿ ಯೋಜನೆಗಳ ಪಾರದರ್ಶಕ ಜಾರಿ, ನಿಗದಿತ ಸಮಯಕ್ಕೆ ಗ್ರಾಮ ಸಭೆ ನಡೆಸುವುದು ಮತ್ತು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಪಂಚಾಯಿತಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಆಯ್ಕೆ ಆಗಿರುವ ಮಾನದಂಡ:
ಗಾಂಧಿ ಗ್ರಾಮ ಪ್ರಶಸ್ತಿಯು ಪಂಚಾಯಿತಿ ದಕ್ಷತೆಯ ಅಳತೆ ಗೋಲಾಗಿದೆ. 100ಕ್ಕೂ ಹೆಚ್ಚು ಅಂಶಗಳನ್ನು ಆಧರಿಸಿ ಪಂಚತಂತ್ರ ತಂತ್ರಾಂಶದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ತೆರಿಗೆ ವಸೂಲಿ, ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆ, ಗ್ರಾಮ ಪಂಚಾ ಯಿತಿಗಳಲ್ಲಿ ಪಾರದರ್ಶಕ ಆಡಳಿತವನ್ನು ಉತ್ತೇಜಿಸುವುದು ಮತ್ತು ಗ್ರಾಮಸ್ಥರಿಗೆ ಮೂಲಸೌಕರ್ಯಗಳನ್ನು ಸಮರ್ಪಕ ವಾಗಿ ತಲುಪಿಸುವುದು ಪ್ರಶಸ್ತಿ ಉದ್ದೇಶವಾಗಿದೆ. ಪ್ರತಿ ವರ್ಷ ಗಾಂಧಿ ಜಯಂತಿಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ರಾಜ್ಯದ ಆಯ್ದ ಅತ್ಯುತ್ತಮ ಪಂಚಾಯಿತಿಗಳಿಗೆ ಈ ಗೌರವವನ್ನು ಪ್ರದಾನ ಮಾಡುತ್ತದೆ. ಈ ಪಂಚಾಯಿತಿ 7 ಬಾರಿ ಪ್ರಶಸ್ತಿ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಈ ಯಶಸ್ಸು ಕೇವಲ ಒಬ್ಬ ವ್ಯಕ್ತಿಯದ್ದಲ್ಲ. ಸಮೂಹ ಶ್ರಮದ ಫಲ. ಮೇಲಾಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಕಚೇರಿ ಪ್ರತಿ ಸಿಬ್ಬಂದಿ ಶ್ರಮದಿಂದ ಪ್ರಶಸ್ತಿ ಲಭಿಸಿದೆ. ಪಂಚಾಯಿತಿ ಅಭಿವೃದ್ಧಿ ಕೆಲಸಗಳಲ್ಲಿ ಗ್ರಾಮಸ್ಥರ ಸಹಕಾರ ಹೆಚ್ಚಿದೆ.
ಹರೀಶ್, ಪಿಡಿಓ