ಹನುಮ ಜಯಂತಿ: ಎಂಟು ಮಂಟಪಗಳ ಶೋಭಾಯಾತ್ರೆ

| Published : Dec 26 2023, 01:31 AM IST / Updated: Dec 26 2023, 01:32 AM IST

ಸಾರಾಂಶ

ಹನುಮ ಜಯಂತಿ ಅಂಗವಾಗಿ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಜೊತೆಗೆ ಒಟ್ಟು ಎಂಟು ಮಂಟಪಗಳ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಹನುಮ ಜಯಂತಿ ಅಂಗವಾಗಿ ಶ್ರೀ ರಾಮಾಂಜನೇಯ ಉತ್ಸವ ಸಮಿತಿ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಶ್ರೀ ಆಂಜನೇಯ ಸೇವಾ ಸಮಿತಿ ವತಿಯಿಂದ ಸಂಜೆ ಅಲಂಕೃತ ಮಂಟಪದಲ್ಲಿ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಜೊತೆಗೆ ಒಟ್ಟು ಎಂಟು ಮಂಟಪಗಳ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.ಕುಶಾಲನಗರ ರಥಬೀದಿಯ ಮೂಲಕ ಆಗಮಿಸಿದ ಆಂಜನೇಯ ಉತ್ಸವ ಮೂರ್ತಿಯ ಭವ್ಯ ಮಂಟಪ, ಗಣಪತಿ ದೇವಾಲಯ ಬಳಿ ಬಂದು ಮುಖ್ಯ ರಸ್ತೆಯಲ್ಲಿ ಬೈಚನಹಳ್ಳಿ ತನಕ ಸಾಗಿ ಮಾರಿಯಮ್ಮ ದೇವಾಲಯ ಬಳಿ ಪೂಜೆ ಸಲ್ಲಿಸಿ ನಂತರ ಹಿಂತಿರುಗಿತು. ಈ ಸಂದರ್ಭ ನೂರಾರು ಸಂಖ್ಯೆಯ ಯುವತಿಯರು, ಮಹಿಳೆಯರು, ಯುವಕರು ಮೆರವಣಿಗೆಯಲ್ಲಿ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು.

ಸಂಜೆ 7 ಗಂಟೆಗೆ ಕುಶಾಲನಗರ ಎಚ್‌ಆರ್‌ಪಿ ಕಾಲೋನಿಯಿಂದ ಅಂಜನಿಪುತ್ರ ಸೇವಾ ಸಮಿತಿಯ ಮಂಟಪ ಸಮಿತಿಯ ಅಧ್ಯಕ್ಷ ಡಿ.ಸಿ. ಮಂಜುನಾಥ್ ನೇತೃತ್ವದಲ್ಲಿ ಅದ್ದೂರಿ ಅಲಂಕಾರದೊಂದಿಗೆ ಮಂಟಪದಲ್ಲಿ ಆಂಜನೇಯನ ವಿವಿಧ ಕಲಾಕೃತಿಗಳು, ಟ್ಯಾಬ್ಲೋಗಳು ಮನಸೂರೆಗೊಂಡವು.ಬೈಚನಹಳ್ಳಿ ಮಾರಿಯಮ್ಮ ದೇವಾಲಯ ಬಳಿಯಿಂದ ಸಮಿತಿಯ ಅಧ್ಯಕ್ಷ ಜಗದೀಶ್ ಅವರ ನೇತೃತ್ವದಲ್ಲಿ ಮಂಟಪ ಮೆರವಣಿಗೆಯಲ್ಲಿ ಸಾಗಿ ಗಣಪತಿ ದೇವಾಲಯ ಬಳಿ ಬಂದು ನಂತರ ಹಿಂತಿರುಗಿತು.

ಗೋಪಾಲ್ ಸರ್ಕಲ್, ಬಳಿಯ ಗಜಾನನ ಯುವಕ ಸಂಘದ ವತಿಯಿಂದ ಸುನಿಲ್ ಅವರ ನೇತೃತ್ವದಲ್ಲಿ ಮಂಟಪ ಮೆರವಣಿಗೆಯಲ್ಲಿ ಸಾಗಿ ಬಂತು. ಜನತಾ ಕಾಲೋನಿ ಬಳಿಯಿಂದ ದ್ವಾರಕಾ ಉತ್ಸವ ಸಮಿತಿ ಆಶ್ರಯದಲ್ಲಿ ಶೈಲೇಶ್ ಅವರ ಅಧ್ಯಕ್ಷತೆಯ ಸಮಿತಿ ಪ್ರಮುಖರು ಮಂಟಪ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿತ್ತು.

ಗುಡ್ಡೆ ಹೊಸೂರು ಬಳಿಯ ವೀರಾಂಜನೇಯ ಸೇವಾ ಸಮಿತಿ ಕೂಡಿಗೆಯ ಹನುಮಸೇನಾ ಸೇವಾ ಸಮಿತಿ ಮಂಟಪಗಳು ಸೇರಿದಂತೆ ಒಟ್ಟು ಎಂಟು ಮಂಟಪಗಳು ಕುಶಾಲನಗರದ ಗಣಪತಿ ದೇವಾಲಯ ಬಳಿ ಬಂದು ನೆರೆದವರ ಮನ ಸೂರೆಗೊಂಡಿತ್ತು.

ಅಂದಾಜು 20 ಸಾವಿರಕ್ಕೂ ಅಧಿಕ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆಯ ಎಲ್ಲೆಡೆಗಳಿಂದ ಹಾಗೂ ನೆರೆಯ ಪಿರಿಯಾಪಟ್ಟಣ ಹುಣಸೂರು ಅರಕಲಗೂಡು ಮತ್ತಿತರ ಕಡೆಗಳಿಂದ ತಂಡೋಪ ತಂಡವಾಗಿ ಹನುಮ ಭಕ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ದೃಶ್ಯ ಗೋಚರಿಸಿತು.

ದಶಮಂಟಪಗಳ ಸಮಿತಿ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಕಾರ್ಯದರ್ಶಿ ಕೆ.ಎನ್. ದೇವರಾಜ್, ಖಜಾಂಚಿ ಡಿ.ಪಿ. ಗಿರೀಶ್ ಮತ್ತು ತಂಡದ ಸದಸ್ಯರು ಮಂಟಪಗಳ ಸಂಪೂರ್ಣ ಉಸ್ತುವಾರಿ ವಹಿಸಿದ್ದರು. ವಿವಿಧ ಮಂಟಪಗಳ ಜೊತೆ ನೂರಾರು ಸಂಖ್ಯೆಯ ಹನುಮ ಭಕ್ತರು ಡಿಜೆ ಅಬ್ಬರದ ಸಂಗೀತಕ್ಕೆ ಕುಣಿದಾಡುತ್ತಿದ್ದರು.

ಈ ನಡುವೆ ಕುಶಾಲನಗರ ಕಾರು ನಿಲ್ದಾಣದಲ್ಲಿ ಜೇಂಕಾರ್ ಆರ್ಕೆಸ್ಟ್ರಾ ವತಿಯಿಂದ ಸಂಗೀತ ಸಂಜೆ ನಡೆಯಿತು. ಡಿವೈಎಸ್‌ಪಿ ಆರ್‌.ವಿ. ಗಂಗಾಧರಪ್ಪ, ಸಂಗೀತ ಸಂಜೆಗೆ ಚಾಲನೆ ನೀಡಿದರು.

ಶೋಭಾಯಾತ್ರೆ ಸಂದರ್ಭ ಹೆದ್ದಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರ ಇದ್ದ ಕಾರಣ ಪೊಲೀಸರು ಮತ್ತು ಸ್ವಯಂಸೇವಕರು ಯಾವುದೇ ತೊಡಕು ಉಂಟಾಗದಂತೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ಕಂಡು ಬಂತು.* 400 ಪೊಲೀಸರಿಂದ ಬಂದೋಬಸ್ತ್‌ಶೋಭಾಯಾತ್ರೆ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಕುಶಾಲನಗರದಲ್ಲಿ ಮೊಕ್ಕಾಂ ಹೂಡಿದ್ದು, ಅಪರ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಉಪಸ್ಥಿತಿಯಲ್ಲಿ ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಮತ್ತು ವಿರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಕೊಡಗು ಜಿಲ್ಲೆಯ ಎಂಟು ಪೊಲೀಸ್ ವೃತ್ತ ನಿರೀಕ್ಷಕರು, 35ಕ್ಕೂ ಅಧಿಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳು, ವಿವಿಧ ಠಾಣೆಗಳ ಎಎಸ್ಐ ಸೇರಿದಂತೆ ಸುಮಾರು 400ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.