ಡಿ.13ರಂದು ಹನುಮ ಜಯಂತಿ: ದಶಮಂಟಪ ಸಮಿತಿ ಸಭೆ

| Published : Nov 01 2024, 12:16 AM IST

ಸಾರಾಂಶ

ಕುಶಾಲನಗರದಲ್ಲಿ ಡಿ. 13ರಂದು ನಡೆಯುವ ಅದ್ಧೂರಿ ಹನುಮ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಡಿಕೇರಿ ಶಾಸಕ ಡಾ. ಮಂತರ್‌ಗೌಡಸಮ್ಮುಖದಲ್ಲಿ ದಶಮಂಟಪ ಸಮಿತಿಗಳ ಪ್ರಮುಖರ ಸಭೆ ನಡೆಯಿತು. ಈ ಬಾರಿ ಕಾರ್ಯಕ್ರಮದಲ್ಲಿ ಎಂಟು ಮಂಟಪಗಳು ಪಾಲ್ಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರದಲ್ಲಿ ಡಿ.13ರಂದು ನಡೆಯುವ ಅದ್ಧೂರಿ ಹನುಮ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರ ಶಾಸಕ . ಮಂತರ್ ಗೌಡ ಸಮ್ಮುಖದಲ್ಲಿ ದಶಮಂಟಪ ಸಮಿತಿಗಳ ಪ್ರಮುಖರ ಸಭೆ ನಡೆಯಿತು.

ಈ ಬಾರಿ ನಡೆಯುವ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಎಂಟು ಮಂಟಪಗಳು ಪಾಲ್ಗೊಳ್ಳಲಿದ್ದು ಈ ಸಂಬಂಧ ಎಲ್ಲ ರೀತಿಯ ಪೂರ್ವ ಸಿದ್ಧತೆಗಳನ್ನು ನಡೆಸಲು ಸದ್ಯದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಮಂತರ್ ಗೌಡ ಹೇಳಿದರು.

ಕಾನೂನು ಚೌಕಟ್ಟಿನಲ್ಲಿ ಹಬ್ಬ ಆಚರಣೆ ನಡೆಯುವ ಮೂಲಕ ಹನುಮ ಜಯಂತಿಯನ್ನು ನಾಡಹಬ್ಬವಾಗಿ ಆಚರಣೆ ಮಾಡುವ ಬಗ್ಗೆ ತಿಳಿಸಿದ ಶಾಸಕರು, ಮಡಿಕೇರಿ ದಸರಾ ರೀತಿಯಲ್ಲಿ ಹನುಮ ಜಯಂತಿ ಆಚರಣೆ ನಡೆಸಲು ಸಲಹೆ ನೀಡಿದರು.

ಕುಶಾಲನಗರ ಪಟ್ಟಣದ ವ್ಯಾಪ್ತಿಯಲ್ಲಿ ದೀಪ ಅಲಂಕಾರ ಹಾಗೂ ಪಾಲ್ಗೊಳ್ಳುವ ಸಾವಿರಾರು ಸಂಖ್ಯೆಯ ಭಕ್ತಾದಿಗಳಿಗೆ ಅಗತ್ಯವಿರುವ ಊಟ ಉಪಚಾರ ವ್ಯವಸ್ಥೆ ಕಲ್ಪಿಸುವಂತೆ ಶಾಸಕರು ಸಮಿತಿ ಪ್ರಮುಖರಿಗೆ ತಿಳಿಸಿದರು.

ಮಂಟಪಗಳ ಮೆರವಣಿಗೆ ಮತ್ತು ಪ್ರದರ್ಶನ ಅವಧಿಯನ್ನು ವಿಸ್ತರಣೆ ಮಾಡುವಂತೆ ಮಂಟಪದ ಪ್ರಮುಖರು ಶಾಸಕರನ್ನು ಕೋರಿದರು. ಆಚರಣೆ ಸಂದರ್ಭ ಯಾರಿಗೂ ಸಮಸ್ಯೆಗಳು ಉಂಟಾಗದಂತೆ ಕಾನೂನು ಚೌಕಟ್ಟಿನ ಅಡಿಯಲ್ಲಿ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಶಮಂಟಪಗಳ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಕಳೆದ ಐದು ವರ್ಷಗಳಿಂದ ಶೋಭಾಯಾತ್ರೆ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಸಮಯ ನಿಗದಿ ಮಾಡುವ ಕಾರಣ ಕೆಲವೊಂದು ಅನನುಕೂಲ ಉಂಟಾಗುತ್ತಿದೆ. ಬೆಳಗ್ಗೆ ತನಕ ಅವಕಾಶ ಕಲ್ಪಿಸಬೇಕು ಮತ್ತು ಸರ್ಕಾರದಿಂದ ಅನುದಾನಕ್ಕೆ ಶಾಸಕರ ಮೂಲಕ ಮನವಿ ಮಾಡಿದರು.

ದೇವಾಲಯ ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್, ವಿಎಸ್‌ಎನ್ ಬ್ಯಾಂಕ್ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ,ಪಿ, ಶಶಿಧರ್, ಗಣಪತಿ ದೇವಾಲಯ ಪ್ರಧಾನ ಅರ್ಚಕ ಆರ್‌.ಕೆ. ನಾಗೇಂದ್ರಬಾಬು, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಆಂಜನೇಯ ದೇವಾಲಯ ಸಮಿತಿ ಅಧ್ಯಕ್ಷ ವಿ.ಡಿ. ಪಂಡರಿಕಾಕ್ಷ ಮತ್ತು ಮಂಟಪಗಳ ಅಧ್ಯಕ್ಷರು, ಪ್ರಮುಖರು ಇದ್ದರು

.