ಹನುಮ ಜಯಂತಿ: ಆಂಜನೇಯನ ದೇಗುಲಗಳಲ್ಲಿ ವಿಶೇಷ ಪೂಜೆ

| Published : Dec 14 2024, 12:45 AM IST

ಹನುಮ ಜಯಂತಿ: ಆಂಜನೇಯನ ದೇಗುಲಗಳಲ್ಲಿ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 40 ವರ್ಷಗಳಿಂದ ನಿರಂತರವಾಗಿ ಹನುಮ ಜಯಂತಿ ಆಚರಿಸುತ್ತಿರುವ ರೈಲು ನಿಲ್ದಾಣ ಬಳಿಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ಭಕ್ತಮಂಡಳಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಅಶೋಕ್, ಅರ್ಚಕ ಶಿವರುದ್ರಸ್ವಾಮಿ, ಕಾರ್ಯದರ್ಶಿ ಶ್ರೀನಿವಾಸ್‌ ಮೂರ್ತಿ, ಗೋಪಿ, ಮೂರ್ತಿ, ಕುಮಾರ್, ಹೊಸಹಳ್ಳಿ ಶಿವು ಮತ್ತಿತರು ಅನ್ನಸಂತರ್ಪಣೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಹನುಮ ಜಯಂತಿ ಅಂಗವಾಗಿ ಜಿಲ್ಲೆಯ ಎಲ್ಲಾ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ, ಹವನಗಳು, ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆದವು.

ನಗರದ ನಾಡಪ್ರಭು ಕೆಂಪೇಗೌಡ ಉದ್ಯಾನದಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ, ಗಾಂಧಿ ಉದ್ಯಾನ, ಕಲ್ಲಹಳ್ಳಿ ಬಡಾವಣೆಯ ಆಂಜನೇಯಸ್ವಾಮಿ, ಚಾಮುಂಡೇಶ್ವರಿ ನಗರದ ಶ್ರೀ ಅಭಯ ಆಂಜನೇಯಸ್ವಾಮಿ, ಸ್ವರ್ಣಸಂದ್ರ ಬಡಾವಣೆಯ ಶ್ರೀ ಆಂಜನೇಯಸ್ವಾಮಿ, ಅಶೋಕನಗರ ಜಿಲ್ಲಾ ಆಸ್ಪತ್ರೆ ರಸ್ತೆ, ನೆಹರು ನಗರದ ಶ್ರೀರಾಮ ಮಂದಿರ, ಗಾಂಧಿನಗರದ ಶ್ರೀ ರಾಮ ಮಂದಿರ, ಮದ್ದೂರು ಶ್ರೀ ಹೊಳೆ ಆಂಜನೇಯಸ್ವಾಮಿ, ಹೊಳಲು ಗ್ರಾಮದ ಶ್ರೀ ಆಂಜನೇಯಸ್ವಾಮಿ, ಯಲಿಯೂರು ಶ್ರೀ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯ ಎಲ್ಲಾ ಹನುಮ ದೇವಾಲಯಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್‍ಯಗಳು ನಡೆದವು.

ಕಳೆದ 40 ವರ್ಷಗಳಿಂದ ನಿರಂತರವಾಗಿ ಹನುಮ ಜಯಂತಿ ಆಚರಿಸುತ್ತಿರುವ ರೈಲು ನಿಲ್ದಾಣ ಬಳಿಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ಭಕ್ತಮಂಡಳಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಅಶೋಕ್, ಅರ್ಚಕ ಶಿವರುದ್ರಸ್ವಾಮಿ, ಕಾರ್ಯದರ್ಶಿ ಶ್ರೀನಿವಾಸ್‌ ಮೂರ್ತಿ, ಗೋಪಿ, ಮೂರ್ತಿ, ಕುಮಾರ್, ಹೊಸಹಳ್ಳಿ ಶಿವು ಮತ್ತಿತರು ಅನ್ನಸಂತರ್ಪಣೆ ನೆರವೇರಿಸಿದರು.

ಮದ್ದೂರಿನ ಪಟ್ಟಾಭಿರಾಮ ದೇವಸ್ಥಾನ, ಮಳವಳ್ಳಿಯ ಶ್ರೀ ರಾಮಮಂದಿರ, ಶ್ರೀರಂಗಪಟ್ಟಣದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಾಲಯ, ಪಾಂಡವಪುರದ ಶ್ರೀ ರಾಮಮಂದಿರ, ಕೆ.ಆರ್. ಪೇಟೆಯ ಶ್ರೀ ಬೃಂದಾವನ ಆಂಜನೇಯಸ್ವಾಮಿ ದೇವಸ್ಥಾನ, ನಾಗಮಂಗಲದ ಶ್ರೀ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ಹಾಗೂ ಪ್ರಸಾದ ವಿನಿಯೋಗ ಕಾರ್‍ಯಕ್ರಮ ಏರ್ಪಡಿಸಲಾಗಿತ್ತು.

ಬೆಳಗ್ಗೆ 5 ಗಂಟೆಗೆ ಗಣ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು. ಶ್ರೀ ಸೀತಾ ರಾಮಚಂದ್ರ ಸಹಿತ ಪವಮಾನ ಹೋಮ, ಅಷ್ಟಾವಧಾನ ಸೇವೆ, ಪಂಚಾಮೃತ ಸೇವೆ ನಡೆಯಿತು. ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು. ಬೆಳಗ್ಗೆ 12 ಗಂಟೆಯಿಂದಲೇ ದೇವಸ್ಥಾನದ ಆವರಣದಲ್ಲಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು.

ಮದ್ದೂರು ಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲೂ ವಿಶೇಷ ಪೂಜಾ ಕಾರ್‍ಯಕ್ರಮ ನಡೆಯಿತು. ಸಹಸ್ರಾರು ಮಂದಿ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು.

ಎಲ್ಲ ಹನುಮ ದೇವಾಲಯಗಳಲ್ಲೂ ಬೆಳಗ್ಗಿನಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಭಕ್ತಿಭಾವ ಪ್ರದರ್ಶಿಸಿದರು. ಬಳಿಕ ಪ್ರಸಾದ ಸ್ವೀಕರಿಸಿದರು.

ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್. ಪೇಟೆ ಹಾಗೂ ನಾಗಮಂಗಲ ತಾಲೂಕುಗಳಲ್ಲಿರುವ ಶ್ರೀ ಆಂಜನೇಯಸ್ವಾಮಿ ಹಾಗೂ ಶ್ರೀರಾಮ ದೇವಾಲಯಗಳಲ್ಲಿ ಪೂಜಾ ಕಾರ್‍ಯ ನಡೆಸಿ ಪ್ರಸಾದ ವಿತರಣೆ ಮಾಡಲಾಯಿತು. ಹನುಮ ಭಕ್ತರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದದ್ದು ಕಂಡುಬಂತು.

ಕೆಲವೆಡೆ ದೇವರ ವಿಗ್ರಹಗಳಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಹನುಮ ಜಯಂತಿ ಅಂಗವಾಗಿ ಕಳೆದ ಮೂರ್‍ನಾಲ್ಕು ದಿನಗಳಿಂದಲೂ ದೇವಾಲಯ, ಆವರಣ, ಸುತ್ತಮುತ್ತಲ ಪರಿಸರ ಮತ್ತು ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ನಗರದ ಚಾಮುಂಡೇಶ್ವರಿ ದೇವಾಲಯದ ಮುಂಭಾಗದಲ್ಲಿ ನಿನ್ನೆಯಿಂದಲೇ ವಿವಿಧ ಧಾರ್ಮಿಕ ಪೂಜಾ ಕೈಂಕರ್‍ಯಗಳು ನಡೆದವು. ಭಕ್ತರು ದೇವಳಕ್ಕೆ ಭೇಟಿ ನೀಡಿ ಪೂಜಾ ಕಾರ್‍ಯಗಳನ್ನು ಕಣ್ತುಂಬಿಕೊಂಡರು.