ಹನುಮಮಾಲಾ ವಿಸರ್ಜನೆ ನಿಮಿತ್ತ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳು ಹರಿದು ಬಂದಿತು.  ಅಂಜನಾದ್ರಿ ಬೆಟ್ಟ ಕೇಸರಿಮಯವಾಗುವಂತೆ ಮಾಡಿತು.  ಬೆಳ್ಳಂಬೆಳಗ್ಗೆ ಸೂರ್ಯನ ಹೊಂಗಿರಣ   ಅಂಜನಾದ್ರಿಯ ಮೇಲೆ ಬಿದ್ದಾಗ ಈ ಕೇಸರಿಮಯ ಸೊಬಗು ಮತ್ತಷ್ಟು ರಂಗು ಪಡೆದುಕೊಂಡಿತು.

 ಗಂಗಾವತಿ (ಕೊಪ್ಪಳ) : ಹನುಮಮಾಲಾ ವಿಸರ್ಜನೆ ನಿಮಿತ್ತ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳು ಹರಿದು ಬಂದಿತು. ಇಡೀ ಅಂಜನಾದ್ರಿ ಬೆಟ್ಟವೇ ಕೇಸರಿಮಯವಾಗುವಂತೆ ಮಾಡಿತು. ಅದರಲ್ಲೂ ಬೆಳ್ಳಂಬೆಳಗ್ಗೆ ಸೂರ್ಯನ ಹೊಂಗಿರಣ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯ ಮೇಲೆ ಬಿದ್ದಾಗ ಈ ಕೇಸರಿಮಯ ಸೊಬಗು ಮತ್ತಷ್ಟು ರಂಗು ಪಡೆದುಕೊಂಡಿರುವುದು ಕಂಡು ಬಂದಿತು.

ಮಧ್ಯರಾತ್ರಿಯಿಂದಲೇ ಆಂಜನೇಯನ ದರ್ಶನ ಬೆಟ್ಟ ಏರಿದ ಭಕ್ತಾದಿಗಳು

ಮಂಗಳವಾರ ಮಧ್ಯರಾತ್ರಿಯಿಂದಲೇ ಆಂಜನೇಯನ ದರ್ಶನ ಪಡೆಯಲು ಬೆಟ್ಟ ಏರಿದ ಹನುಮ ಮಾಲಾಧಾರಿಗಳು, ಮೆಟ್ಟಿಲು ಹತ್ತುವಾಗ ಜೈರಾಮ, ಜೈ ಆಂಜನೇಯನ ಘೋಷಣೆ ಕಿಷ್ಕಿಂಧಾ ಪ್ರದೇಶದಲ್ಲಿ ಮಾರ್ದನಿಸಿತು.

ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಹನುಮಾಲಾಧಾರಿಗಳು ಗೊತ್ತು ಮಾಡಿದ್ದ ಜಾಗದಲ್ಲಿ ಹನುಮ ಮಾಲೆ ವಿಸರ್ಜನೆ ಮಾಡಿ ತುಂಗಭದ್ರಾ ಅಥವಾ ಸ್ನಾನ ಘಟ್ಟಗಳಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿ ಅಂಜನಾದ್ರಿ ಬೆಟ್ಟ ಏರುತ್ತಿದರು.

ವಿಶೇಷ ಪೂಜೆ:

ಕಳೆದ ಎರಡು ದಿನಗಳಿಂದ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಪ್ರಮುಖವಾಗಿ ಪವಮಾನ ಹೋಮ ಸೇರಿದಂತೆ ವಿವಿಧ ಹೋಮ ಹವನ, ವಿಶೇಷ ಪೂಜೆ ಜರುಗಿದವು. ಆಂಜನೇಯ ಸ್ವಾಮಿಗೆ ವಿವಿಧ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಯಿತು. ಅಲ್ಲದೇ ದೇವಾಲಯದ ಒಳಗೆ ಮತ್ತು ಹೊರಗೆ ಹೂಗಳಿಂದ ಅಲಂಕಾರ ಮಾಡಿದ್ದು ಗಮನ ಸೆಳೆಯಿತು.

ಒಂದೂವರೆ ಲಕ್ಷ ಭಕ್ತರು:

ವಿವಿಧ ಜಿಲ್ಲೆ, ನಾನಾ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರು ಸೇರಿ ಸಾಗರೋಪಾದಿಯಲ್ಲಿ ಆಗಮಿಸಿದ ಭಕ್ತರು ಆಂಜನೇಯಸ್ವಾಮಿ ದರ್ಶನ ಪಡೆದರು. ಒಂದುವರೆ ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು ಎಂದು ಆಡಳಿತ ಮಂಡಳಿ ತಿಳಿಸಿದೆ.

ಸರ್ಪಗಾವಲಲ್ಲಿ ಶ್ರೀರಂಗಪಟ್ಟಣ ಸಂಕೀರ್ತನಾ ಯಾತ್ರೆ:

ಹನುಮ ಜಯಂತಿ ಅಂಗವಾಗಿ ಹಿಂದೂ ಪರ ಸಂಘಟನೆಗಳಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಕೀರ್ತನ ಯಾತ್ರೆ, ಜಾಮೀಯ ಮಸೀದಿ ಬಳಿ ಪೊಲೀಸರೊಂದಿಗೆ ಹನುಮ ಮಾಲಾಧಾರಿಗಳ ಮಾತಿನ ಚಕಮಕಿ ಹೊರತು ಪಡಿಸಿ ಅದ್ಧೂರಿಯಾಗಿ ನೆರವೇರಿತು. ಯಾತ್ರೆಗೆ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು.

ಪಟ್ಟಣದ ಹೊರವಲಯದ ಗಂಜಾಂನ ನಿಮಿಷಾಂಬ ದೇಗುಲದ ಕಾವೇರಿ ನದಿ ದಂಡೆಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಹಿಂದೂ ಮುಖಂಡ ಲೋಹಿತ್ ರಾಜ್ ಅರಸ್ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಆಂಜನೇಯಮೂರ್ತಿ ಜೊತೆಗೆ ವಿವಿಧ ಸ್ತಬ್ಧ ಚಿತ್ರಗಳು ಹಾಗೂ ಹನುಮ ಮಾಲಾಧಾರಿಗಳ ಮೆರವಣಿಗೆ ನಡೆಯಿತು. ಮಧ್ಯಾಹ್ನ ವೇಳೆಗೆ ಐತಿಹಾಸಿಕ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯ ತಲುಪಿತು. ಧಾರ್ಮಿಕ ವಿಧಿ ವಿಧಾನಗಳಂತೆ ಮಾಲಾಧಾರಿಗಳು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ತಮ್ಮ ಮಾಲೆಗಳನ್ನು ವಿಸರ್ಜಿಸಿದರು.

ಪೊಲೀಸರೊಂದಿಗೆ ಮಾತಿನ ಚಕಮಕಿ:ಇದಕ್ಕೂ ಮುನ್ನ ಪಟ್ಟಣದ ಜಾಮೀಯ ಮಸೀದಿ ಪಕ್ಕದ ಪುರಸಭೆ ವೃತ್ತದಲ್ಲಿ ಮಾಲಾಧಾರಿಗಳು ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ಕರ್ಪೂರ ಹಚ್ಚಿ ಕೆಲ ಕಾಲ ರಸ್ತೆಯಲ್ಲೇ ಕುಳಿತು ರಾಮ ಹಾಗೂ ಆಂಜನೇಯಸ್ವಾಮಿ ಭಜನೆ ನಡೆಸಿದರು. ನಂತರ ‘ರಕ್ತದ ಕಣ ಕಣ ಕುದಿಯುತ್ತಿದೆ ಹಿಂದೂ, ಹಿಂದೂ’ ಎನ್ನುತ್ತಿದೆ. ‘ಹನುಮನ ಪಾದದ ಮೇಲಾಣೆ ಮಂದಿರವಿಲ್ಲೇ ಕಟ್ಟುವೆವು, ಕಟ್ಟುವೆವು ಮಂದಿರವಿಲ್ಲೆ ಕಟ್ಟುವೆವು’ ಎಂದು ಘೋಷಣೆ ಕೂಗಿದರು. ಇದೇ ವೇಳೆ ಜಾಮಿಯಾ ಮಸೀದಿ ಬಳಿ ವೃತ್ತದಲ್ಲಿ 4 ನಿಂಬೆಹಣ್ಣು ಇಟ್ಟು, ಬೂದುಕುಂಬಳ ಕಾಯಿ ಮೇಲೆ ಕರ್ಪೂರ ಹಚ್ಚಿದ ಮಾಲಾಧಾರಿಗಳು ಇಳೆ ತೆಗೆದು ಕುಂಬಳಕಾಯಿ ಹೊಡೆದು ಮಸೀದಿ ಕಡೆ ಕೈ ಮಾಡಿ ‘ಆ ಜಾಗ ನಮ್ಮದು’ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಈ ವೇಳೆ ಪೊಲೀಸರು ಅವರನ್ನು ತಡೆದು ಮುಖ್ಯ ರಸ್ತೆಯಲ್ಲಿ ತೆರಳಲು ಸೂಚಿಸುತ್ತಿದ್ದ ವೇಳೆ ಪೊಲೀಸರು ಹಾಗೂ ಮಾಲಾಧಾರಿಗಳ ನಡುವೆ ಮಾತಿನ ಚಕಮಕಿ ನಡೆದು ಸ್ವಲ್ಪ ಹೊತ್ತು ನೂಕುನುಗ್ಗಲು, ತಳ್ಳಾಟ, ನೂಕಾಟ ಉಂಟಾಯಿತು. ಸಾವಿರಾರು ಸಂಖ್ಯೆಯಲ್ಲಿ ವಿವಾದಿತ ಸ್ಥಳವಾದ ಜಾಮಿಯಾ ಮಸೀದಿ ಬಳಿ ಪೊಲೀಸರನ್ನು ನಿಯೋಜಿಸಿದ್ದರೂ ಹನುಮ ಭಕ್ತರು ಮಸೀದಿ ಬಳಿ ನುಗ್ಗಲು ಯತ್ನಿಸಿದರು. ಈ ವೇಳೆ ಪರಿಸ್ಥಿತಿಯನ್ನು ಪೊಲೀಸರು ಹತೋಟಿಗೆ ತಂದರು.

ಎಲ್ಲೆಡೆ ಪೊಲೀಸರ ಸರ್ಪಗಾವಲು:

ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಗಂಜಾಂನಿಂದ ಪಟ್ಟಣದ ಸುಮಾರು 4 ಕಿ.ಮೀ ವರೆಗೆ ಪೊಲೀಸರು ಭದ್ರತೆ ಕೈಗೊಂಡಿದ್ದರು. ಮೆರವಣಿಗೆ ಮಾರ್ಗ ಸೇರಿ ವಿವಿಧ ಸ್ಥಳಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ 1 ಐಜಿ, 2 ಎಸ್ಪಿ, 6 ಎಎಸ್‌ಪಿ, 10 ಡಿವೈಎಸ್ಪಿ ಸೇರಿದಂತೆ 1800 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಜೊತೆಗೆ 4 ಡಿಎಆರ್, 2 ಕ್ಯೂಆರ್‌ಟಿ, 8 ಕೆಎಸ್‌ಆರ್‌ಪಿ ತುಕಡಿ ಮತ್ತು 300 ಗೃಹ ರಕ್ಷಕ ದಳ ಸಿಬ್ಬಂದಿ ಭದ್ರತೆಗಾಗಿ ಎಲ್ಲೆಡೆ ಸರ್ಪಗಾವಲು ಹಾಕಲಾಗಿತ್ತು. ಮಸೀದಿ ಬಳಿ ಹೆಚ್ಚಿನ ಪೊಲೀಸರನ್ನು ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಡ್ರೋನ್ ಕ್ಯಾಮೆರಾ ಸೇರಿದಂತೆ ಹತ್ತಾರು ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. 

ದತ್ತಪೀಠಕ್ಕಾಗಿ ಶೀಘ್ರದಲ್ಲಿ ಅಯೋಧ್ಯೆ ಮಾದರಿಯ ಕರಸೇವೆ; ಮುತಾಲಿಕ್

ಬಾಳೆಹೊನ್ನೂರು: ದತ್ತಪೀಠವನ್ನು ಸಂಪೂರ್ಣ ಹಿಂದೂಗಳ ಪೀಠವಾಗಿ ವಶಕ್ಕೆ ತೆಗೆದುಕೊಳ್ಳಲು ಅಯೋಧ್ಯೆಯಲ್ಲಿ ಈ ಹಿಂದೆ ನಡೆದ ಡಿ.6ರ ಕರಸೇವೆಯನ್ನು ಮತ್ತೆ ಹಿಂದೂಗಳಿಗೆ ನೆನಪಿಸಬೇಕಿದ್ದು, ಶೀಘ್ರದಲ್ಲಿ ದತ್ತಪೀಠಕ್ಕಾಗಿ ಕರಸೇವೆ ನಡೆಸಬೇಕಾಗುತ್ತದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಶೋಭಾಯಾತ್ರೆ, ಧಾರ್ಮಿಕ ಸಭೆಯಲ್ಲಿ ಮಾತನಾಡಿ, ದತ್ತಪೀಠಕ್ಕೆ ಪೌರಾಣಿಕ ಇತಿಹಾಸ ಹಾಗೂ ದಾಖಲೆಗಳ ಆಧಾರವಿದೆ. ಇಷ್ಟಿದ್ದರೂ ಹೋರಾಟ ಮಾಡಿ ತೆಗೆದುಕೊಳ್ಳುವ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ. ದತ್ತಪೀಠವನ್ನು ಬಾಬಾ ಬುಡನ್‌ಗಿರಿ ಎಂದು ಬುಡಬುಡಿಕೆ ಬಾರಿಸಲಾಗುತ್ತಿದೆ. ಆದರೆ, ದತ್ತಪೀಠದ ಬಗ್ಗೆ ಹಲವಾರು ದಾಖಲೆಗಳಿದ್ದು, ನೂರಾರು ವರ್ಷಗಳ ಹಿಂದೆ ದತ್ತ ಜಯಂತಿಗೆ ಬಾಳೆಹೊನ್ನೂರು ರಂಭಾಪುರಿ ಪೀಠದಿಂದ ಕಪ್ಪ ಕಾಣಿಕೆ, ದವಸ ಧಾನ್ಯಗಳನ್ನು ಕಳುಹಿಸಲಾಗುತ್ತಿತ್ತು. ಮೈಸೂರು ರಾಜಮನೆತದ ಜಯಚಾಮರಾಜ ಒಡೆಯರ್ ದತ್ತ ಜಯಂತಿಗೆ 3 ದಿನಗಳ ಕಾಲ ಇಲ್ಲಿಗೆ ಬಂದು ವಾಸ್ತವ್ಯ ಮಾಡುತ್ತಿದ್ದರು ಎಂದು ವಿವರಿಸಿದರು 

ದತ್ತಪೀಠದಲ್ಲಿ ಆಧ್ಯಾತ್ಮಿಕ ಶಕ್ತಿಯಿದ್ದು, ಇದೊಂದು ಪುಣ್ಯಕ್ಷೇತ್ರ. ಆದರೆ, ಇದನ್ನು ಇಸ್ಲಾಮೀಕರಣ ಮಾಡಲಾಗುತ್ತಿದೆ. ಗುಹೆ ಒಳಗೆ ಹೆಣವಿಲ್ಲದ ಗೋರಿಗಳನ್ನು ನಿರ್ಮಾಣ ಮಾಡಲಾಗಿದೆ. ತಂತ್ರಗಳಿಗೆ ದತ್ತಪೀಠ ಬಲಿಯಾಗಿದೆ. ಇಸ್ಲಾಮಿನಲ್ಲಿ ಮೂರ್ತಿ ಪೂಜೆ, ಆರತಿ, ಅಭಿಷೇಕ ಇವುಗಳಿಗೆಲ್ಲ ನಿಷೇಧವಿದ್ದರೂ, ಶಾಖಾದ್ರಿ ವಂಶಸ್ಥರು ಇಸ್ಲಾಂ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ದತ್ತಪೀಠದ ಹೋರಾಟಕ್ಕೆ ಶಾಖಾದ್ರಿ ಕುಟುಂಬ ಕಳೆದ 30 ವರ್ಷಗಳಿಂದ ಪ್ರಚೋದನೆ ಮಾಡುತ್ತಾ ಶಾಂತಿ ಕದಡುತ್ತಿದ್ದಾರೆ ಎಂದು ಆರೋಪಿಸಿದರು.

ಸುಪ್ರೀಂ ಕೋರ್ಟ್ ದತ್ತಪೀಠ ಧಾರ್ಮಿಕ ದತ್ತಿ ಇಲಾಖೆ ಎಂದು ಹೇಳಿದ್ದು, ಇದು ಹಿಂದೂಗಳಿಗೆ ಸೇರಿದ್ದಾಗಿದೆ. ಮುಸ್ಲಿಮರಿಗಾಗಿ, ಮಸೀದಿ, ಗೋರಿಗಳಾಗಿ ವಕ್ಫ್ ಬೋರ್ಡ್ ಇದೆ. ಶಾಖಾದ್ರಿ ಕುಟುಂಬದ ಗೋರಿಗಳು ಇರುವುದು ನಾಗೇನಹಳ್ಳಿಯಲ್ಲಿ. ಆದರೆ ದತ್ತಪೀಠಕ್ಕೆ ಬಂದು ಇಲ್ಲಿನ ಪಾವಿತ್ರ್ಯತೆ ಹಾಳು ಮಾಡಿದ್ದಾರೆ. ಶಾಖಾದ್ರಿ ಕುಟುಂಬ, ಮುಸ್ಲಿಂ ಸಮಾಜ ಗೌರವಯುತವಾಗಿ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಿದರೆ ಹಿಂದೂ-ಮುಸಲ್ಮಾನರು ಅಣ್ಣ ತಮ್ಮಂದಿರಂತೆ ಇರಬಹುದು. ಇಲ್ಲದಿದ್ದರೆ ಡಿ.6ರ ಅಯೋಧ್ಯೆ ಕರಸೇವೆ ನೆನಪಿಸಬೇಕಾಗುತ್ತದೆ. ಜೈ ದತ್ತಾತ್ರೇಯ ಎಂದು ಕರಸೇವೆಗಾಗಿ ದತ್ತಪೀಠಕ್ಕೆ ಹೊರಡಬೇಕಾಗುತ್ತದೆ ಎಂದು ಎಚ್ಚರಿಸಿದರು.