ಕೆರಗೋಡಲ್ಲಿ ಹನುಮ ಧ್ವಜ ದಂಗಲ್‌: ಪೊಲೀಸರಿಂದ ಲಾಠಿ ಪ್ರಹಾರ

| Published : Jan 29 2024, 01:34 AM IST

ಸಾರಾಂಶ

ಹನುಮ ಧ್ವಜ ತೆರವು ಮಾಡದಂತೆ ಆಗ್ರಹಿಸಿದ ಪ್ರತಿಭಟನಾಕಾರರು ಜೈ ಶ್ರೀರಾಮ್, ಜೈ ಹನುಮ ಎಂದು ಘೋಷಣೆ‌ ಕೂಗಿ ಪ್ರತಿಭಟನೆ‌. ಪೊಲೀಸರ ಜೊತೆ ಗ್ರಾಮಸ್ಥರು, ಮಹಿಳೆಯರು, ಯುವಕರು ಮಾತಿನ ಚಕಮಕಿ. ಪೊಲೀಸರಿಂದ ಲಾಠಿ ಪ್ರಹಾರ. ರಾಷ್ಟ್ರಧ್ವಜ ಹಾರಿಸಿದ ಪೊಲೀಸರು. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗೃತ ಕ್ರಮವಾಗಿ ನಿಷೇಧಾಜ್ಞೆ ಜಾರಿ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಇಳಿಸಲು ಮುಂದಾದ ಅಧಿಕಾರಿಗಳ ಕ್ರಮ ಖಂಡಿಸಿ ಗ್ರಾಮಸ್ಥರು, ಮಹಿಳೆಯರು ಹಾಗೂ ಯುವಕರು ಭಾನುವಾರ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಜರುಗಿತು.

ಮುಂಜಾನೆ 3 ಗಂಟೆ ಸಮಯಕ್ಕೆ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ಧ್ವಜ‌ ಇಳಿಸಲು ಯತ್ನಿಸಿದ್ದಾರೆ. ಅಧಿಕಾರಿಗಳು ಪೊಲೀಸರ ಆಗಮನ ಆಗುತ್ತಿದ್ದಂತೆ ಆತಂಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಹನುಮ ಧ್ವಜವಿರುವ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹನುಮ ಧ್ವಜ ತೆರವು ಮಾಡದಂತೆ ಆಗ್ರಹಿಸಿದ ಪ್ರತಿಭಟನಾಕಾರರು ಜೈ ಶ್ರೀರಾಮ್, ಜೈ ಹನುಮ ಎಂದು ಘೋಷಣೆ‌ ಕೂಗಿ ಪ್ರತಿಭಟನೆ‌ ಆರಂಭಿಸಿದರು. ಧ್ವಜಸ್ತಂಭದ ಸುತ್ತ ಮಹಿಳೆಯರು ಹಾಗೂ ಯುವಕರು, ಪ್ರತಿಭಟನಾಕಾರರು ಕುಳಿತರು. ಇದಕ್ಕೆ ಗ್ರಾಮಸ್ಥರು, ಹಿಂದೂ ಕಾರ್ಯಕರ್ತರು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಈ ವೇಳೆ ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರ ಭದ್ರತೆಯಲ್ಲಿ ಅಧಿಕಾರಿಗಳು ಮಾತುಕತೆಗೆ ಮುಂದಾದರು. ಅಧಿಕಾರಿಗಳ ಜೊತೆ ಗ್ರಾಮಸ್ಥರ ವಾಗ್ವಾದ ನಡೆಸಿದರು. ಧ್ವಜ ಇಳಿಸಲು ಪ್ರತಿಭಟನಾಕಾರರು ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಧ್ವಜಸ್ತಂಭದಿಂದ ದೂರ ಓಡಿಸಿದರು. ಪ್ರತಿಭಟನಾಕಾರರನ್ನು ಸ್ಥಳದಿಂದ ಬೇರೆಡೆ ಎಳೆದು ಹಾಕಿದರು.

ಈ ವೇಳೆ ಪೊಲೀಸರ ಜೊತೆ ಗ್ರಾಮಸ್ಥರು, ಮಹಿಳೆಯರು, ಯುವಕರು ಮಾತಿನ ಚಕಮಕಿ ನಡೆಸಿದರು. ಹನುಮ ಧ್ವಜ ತೆರವು ಮಾಡಿದರು. ಈ ವೇಳೆ ಪ್ರಲಾಠಿ ಪ್ರಹಾರ ನಡೆಸಿದ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರಧ್ವಜ ಹಾರಿಸಿದ ಪೊಲೀಸರು:

ಲಾಠಿ ಪ್ರಹಾರದ ಮೂಲಕ ಉದ್ರಿಕ್ತರನ್ನ ಚದುರಿಸಿ ಪೊಲೀಸರು ವಿವಾದಿತ ಧ್ವಜಸ್ತಂಭದಲ್ಲಿ ರಾಷ್ಟ್ರ ಧ್ವಜ ಹಾರಿಸಿದರು. ಈ ವೇಳೆ ಉಪ ವಿಭಾಗಾಧಿಕಾರಿ ಶಿವಾನಂದ, ತಹಸೀಲ್ದಾರ್ ಶಿವಕುಮಾರ, ಐಜಿಪಿ ಬೋರಲಿಂಗಯ್ಯ, ಎಸ್ಪಿ ಯತೀಶ್ ಸ್ಥಳದಲ್ಲಿದ್ದು ಉದ್ರಿಕ್ತರನ್ನ ಸಮಾಧಾನ ಮಾಡಲು ಯತ್ನಿಸಿದರು ಇದು ಕೈಗೂಡಲಿಲ್ಲ.

ಕೆರಗೋಡಿನಲ್ಲಿ ನಿಷೇಧಾಜ್ಞೆ ಜಾರಿಹನುಮ ಧ್ವಜ ತೆರವು ಪ್ರಕರಣದ ಹಿನ್ನೆಲೆಯಲ್ಲಿ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗೃತ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಹನುಮಧ್ವಜ ವಿವಾದ ರಾಜಕೀಯ ಪಡೆದುಕೊಳ್ಳುತ್ತಿದ್ದಂತೆ ಬಿಜೆಪಿ, ಜೆಡಿಎಸ್ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರ ದಂಡು ಗ್ರಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಕ್ಕೆ ಆಗಮಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ. ಪ್ರಕರಣ ವಿವಾದದ ಸ್ವರೂಪ ಪಡೆದುಕೊಂಡಿರುವುದರಿಂದ ಗ್ರಾಮದಲ್ಲಿ ಸ್ವಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದರಿಂದ ಬೆಳಗ್ಗೆಯಿಂದ ಯಾವುದೇ ಅಂಗಡಿ ಮುಂಗಟ್ಟು ತೆರೆಯದ ವರ್ತಕರು ಬಂದ್ ಮಾಡಿದ್ದಾರೆ.ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಎಸ್ಪಿ ಎನ್.ಯತೀಶ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಗ್ರಾಮಕ್ಕೆ ಭೇಟಿ ಪರಿಸ್ಥಿತಿ ಅವಲೋಕಿಸಿದರು. ಘಟನೆ ಕುರಿತು ಮಾಹಿತಿ ಪಡೆದು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಎಸ್ಪಿ ಎನ್ .ಯತೀಶ್‌ಗೆ ಸೂಚನೆ ನೀಡಿದರು.