ಕೇಸರೀಮಯವಾದ ಹನುಮನ ಅಂಜನಾದ್ರಿ ಬೆಟ್ಟ!

| Published : Dec 25 2023, 01:30 AM IST

ಸಾರಾಂಶ

ಅಂಜನಾದ್ರಿಗೆ ಕೇವಲ 24 ಗಂಟೆಯಲ್ಲಿ ಸುಮಾರು ಒಂದೂವರೆ ಲಕ್ಷ ಹನುಮಮಾಲಾಧಾರಿಗಳು ಆಗಮಿಸಿದ್ದಾರೆ ಎಂದು ಜಿಲ್ಲಾಡಳಿತವೇ ನೀಡಿರುವ ಅಧಿಕೃತ ಅಂಕಿಸಂಖ್ಯೆಯಾಗಿದೆ. ವಾಸ್ತವದಲ್ಲಿ ಇದು ಇನ್ನು ಅಧಿಕವಾಗಿದ್ದು, ಕಳೆದೆರಡು ಮೂರು ದಿನಗಳ ಲೆಕ್ಕಾಚಾರ ಹಾಕಿದರೆ 2 ಲಕ್ಷಕ್ಕೂ ಅಧಿಕ ಹನುಮಮಾಲಾಧಿಕಾರಿಗಳು ಆಗಮಿಸಿದ್ದಾರೆ. ಇನ್ನು ಆಗಮಿಸುತ್ತಲೇ ಇದ್ದಾರೆ.

ಕೊಪ್ಪಳಸೋಮರಡ್ಡಿ ಅಳವಂಡಿ

ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ಕಳೆದೆರಡು-ಮೂರು ದಿನಗಳಿಂದ ಕೇಸರಿಮಯವಾಗಿತ್ತು. ಎಲ್ಲಿ ನೋಡಿದರೂ ಹನುಮಲಾಧಾರಿಗಳು ಅಂಜನಾದ್ರಿಯ ಬೆಟ್ಟ ಏರುವುದನ್ನು ನೋಡುವುದೇ ಸೊಬಗು. ಮೆಟ್ಟಿಲುಗಳಲ್ಲಿ ಏರಲು ನಾಲ್ಕಾರು ಗಂಟೆ ತೆಗೆದುಕೊಳ್ಳುತ್ತಿದ್ದರಿಂದ ಥೇಟ್ ಆಂಜನೇಯನಂತೆ ಎಲ್ಲೆಂದರಲ್ಲಿ ಜೀವದ ಹಂಗು ತೊರೆದು ಬೆಟ್ಟ ಏರುತ್ತಿರುವ ದೃಶ್ಯವೂ ಸಾಮಾನ್ಯವಾಗಿತ್ತು.

ಇದು, ಹನುಮಮಾಲಾಧಾರಿಗಳ ಮಾಲಾ ವಿಸರ್ಜನಾ ಕಾರ್ಯಕ್ರಮ ನಿಮಿತ್ತ ಅಂಜನಾದ್ರಿಯಲ್ಲಿ ಕಂಡು ಬಂದ ದೃಶ್ಯ.

ನಾನಾ ಜಿಲ್ಲೆ ಅಷ್ಟೇ ಅಲ್ಲ, ರಾಜ್ಯದ ವಿವಿಧ ಜಿಲ್ಲೆಗಳಿಂದ ಹನುಮಮಾಲಾಧಾರಿಗಳು ಆಗಮಿಸಿದ್ದರು. ಅಯ್ಯಪ್ಪ ಭಕ್ತರಂತೆಯೇ ಆಂಜನೇಯನ ಭಕ್ತರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ಕಂಡು ಬಂದಿತು.

ಒಂದೂವರೆ ಲಕ್ಷ:ಅಂಜನಾದ್ರಿಗೆ ಕೇವಲ 24 ಗಂಟೆಯಲ್ಲಿ ಸುಮಾರು ಒಂದೂವರೆ ಲಕ್ಷ ಹನುಮಮಾಲಾಧಾರಿಗಳು ಆಗಮಿಸಿದ್ದಾರೆ ಎಂದು ಜಿಲ್ಲಾಡಳಿತವೇ ನೀಡಿರುವ ಅಧಿಕೃತ ಅಂಕಿಸಂಖ್ಯೆಯಾಗಿದೆ. ವಾಸ್ತವದಲ್ಲಿ ಇದು ಇನ್ನು ಅಧಿಕವಾಗಿದ್ದು, ಕಳೆದೆರಡು ಮೂರು ದಿನಗಳ ಲೆಕ್ಕಾಚಾರ ಹಾಕಿದರೆ 2 ಲಕ್ಷಕ್ಕೂ ಅಧಿಕ ಹನುಮಮಾಲಾಧಿಕಾರಿಗಳು ಆಗಮಿಸಿದ್ದಾರೆ. ಇನ್ನು ಆಗಮಿಸುತ್ತಲೇ ಇದ್ದಾರೆ.

ನಾಲ್ಕಾರು ಗಂಟೆ: ಭಾನುವಾರ ಹನುಮ ಮಾಲಾಧಾರಿಗಳು ಮಾಲಾ ವಿಸರ್ಜನಾ ಕಾರ್ಯಕ್ರಮ ಇದ್ದರೂ ಶನಿವಾರದಿಂದಲೇ ಬೆಟ್ಟ ಏರಿದರು. ಶನಿವಾರ ರಾತ್ರಿಪೂರ್ತಿ ಬೆಟ್ಟ ಏರಿ, ದೇವರ ದರ್ಶನ ಪಡೆಯುವ ಸಾಹಸ ಮಾಡಿದರು.

ಹನುಮ ಮಾಲಾಧಾರಿಗಳ ಸಂಖ್ಯೆ ನಿರೀಕ್ಷೆ ಮೀರಿ ಬಂದಿದ್ದರಿಂದ ಜಿಲ್ಲಾಡಳಿತ ರಾತ್ರಿಯೂ ಬೆಟ್ಟ ಏರುವುದಕ್ಕೆ ವಿದ್ಯುತ್ ದೀಪದ ವ್ಯವಸ್ಥೆ ಮಾಡಿದ್ದರಿಂದ ರಾತ್ರಿ, ಹಗಲು ಎನ್ನದೇ ಹನುಮಮಾಲಾಧಾರಿಗಳು ಅಂಜನಾದ್ರಿ ಬೆಟ್ಟ ಏರಿದ್ದಾರೆ ಮತ್ತು ಈಗಲೂ ಏರುತ್ತಲೇ ಇದ್ದಾರೆ.

ಆಂಜನೇಯನಂತೆ ಏರಿದರು: ಹನುಮ ಮಾಲಾಧಾರಿಗಳು ಅಂಜನಾದ್ರಿಯನ್ನು ಆಂಜನೇಯನಂತೆಯೇ ಏರಿದರು. ಮೆಟ್ಟಿಲುಗಳ ಮೇಲೆ ಏರುವುದಕ್ಕೆ ವಿಪರೀತ ದಟ್ಟಣೆ ಇದ್ದಿದ್ದರಿಂದ ಬೆಟ್ಟದ ಸುತ್ತಲು ಕಾವಲು ಭೇದಿಸಿ ಬೆಟ್ಟ ಏರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಗಿಡ, ಪೊದೆಗಳನ್ನು ಲೆಕ್ಕಿಸದೆ ಮತ್ತು ಜೀವ ಭಯ ಇಲ್ಲದೆ ಏರುತ್ತಿರುವ ದೃಶ್ಯ ಕಂಡು ಬಂದಿತು.

ಮೋದಿ ಪರ ಘೋಷಣೆ: ಅಂಜನಾದ್ರಿ ಏರಿದ ಹನುಮಮಾಲಾಧಾರಿಗಳು ಮತ್ತೆ ನರೇಂದ್ರ ಮೋದಿ ಎನ್ನುವ ಘೋಷಣೆಗಳನ್ನು ಕೂಗುತ್ತ ಏರುತ್ತಿರುವುದು ಸಾಮಾನ್ಯವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ವೀರ ಸಾರ್ವಕರ್ ಫೋಟೋಗಳನ್ನು ಹಿಡಿದು ಅಂಜನಾದ್ರಿ ಬೆಟ್ಟ ಏರುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಘೋಷಣೆಗಳು ಮುಗಿಲು ಮುಟ್ಟಿದ್ದವು.

ಪ್ರಿಯಾಂಕಾ, ರಾಹುಲ್ ಶೀಘ್ರ ಭೇಟಿ: ಅಂಜನಾದ್ರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಪರವಾಗಿ ಘೋಷಣೆಗಳು ಮೊಳಗುತ್ತಿರುವುದರ ಮಧ್ಯೆ ಶೀಘ್ರದಲ್ಲಿಯೇ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅಂಜನಾದ್ರಿಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನವೇ ಭೇಟಿ ನೀಡಿ, ಅಂಜನಾದ್ರಿ ಬೆಟ್ಟ ಏರಲಿದ್ದಾರೆ ಎಂದು ತಿಳಿಸಿದ್ದಾರೆ.

ಸಚಿವ ಶಿವರಾಜ ತಂಗಡಗಿ ಹೀಗೆ ಹೇಳುತ್ತಿದ್ದರಂತೆ ಬಿಜೆಪಿ ಪಾಳೆಯದಲ್ಲಿಯೂ ರಾಜಕೀಯ ಗರಿಗೆದರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಕೂಗು ಕೇಳಿ ಬರಲಾರಂಭಿಸಿದೆ.

ಹನುಮಲಾಧಾರಿಗಳಿಗೆ ಹಗಲು, ರಾತ್ರಿ ಎನ್ನದೇ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಶನಿವಾರ ತಡರಾತ್ರಿ ವರೆಗೂ ನಡೆದ ಪ್ರಸಾದ, ಭಾನುವಾರ ಬೆಳ್ಳಂಬೆಳಗ್ಗೆ 3.45ರಿಂದಲೂ ಪ್ರಸಾದ ವ್ಯವಸ್ಥೆ ಪ್ರಾರಂಭಿಸಲಾಯಿತು. ಮಧ್ಯರಾತ್ರಿಯಲ್ಲಿಯೂ ಭಕ್ತರು ಪ್ರಸಾದ ಸ್ವೀಕಾರ ಮಾಡಿದರು.

ಅಂಜನಾದ್ರಿ ಬೆಟ್ಟಕ್ಕೆ ನಮ್ಮ ನಿರೀಕ್ಷೆ ಮೀರಿ ಹನುಮಮಾಲಾಧಾರಿಗಳು ಹರಿದು ಬಂದಿದ್ದಾರೆ. ರಾತ್ರಿಪೂರ್ತಿ ಮತ್ತು ಭಾನುವಾರದ ಲೆಕ್ಕಾಚಾರದಲ್ಲಿಯೇ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಹನುಮ ಮಾಲಾಧಾರಿಗಳು ಆಗಮಿಸಿದ್ದಾರೆ. ಕಳೆದೆರಡು ಮೂರು ದಿನಗಳಿಂದಲೂ ಆಗಮಿಸುತ್ತಲೇ ಇದ್ದಾರೆ. ಬಂದವರಿಗೆಲ್ಲ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.

ಅಂಜನಾದ್ರಿಯಲ್ಲಿ ಈ ಬಾರಿ ಅಚ್ಚುಕಟ್ಟಾದ ವ್ಯವಸ್ಥೆಯಾಗಿದೆ. ಕುಡಿಯುವ ನೀರು, ಪ್ರಸಾದ ಸೇರಿದಂತೆ ಎಲ್ಲವೂ ಭಕ್ತರಿಗೆ ಸುಲಭವಾಗಿ ದೊರೆಯುವಂತೆ ಮಾಡಿದ್ದಾರೆ. ಮಧ್ಯರಾತ್ರಿಯಲ್ಲಿಯೂ ಪ್ರಸಾದ ಸ್ವೀಕಾರ ಮಾಡಿದ್ದೇವೆ ಎಂದು ಹನುಮಮಾಲಾಧಾರಿ ಮಹಾಂತೇಶ ಹೇಳಿದರು.