ತಾಲೂಕಿನ ಹುಲಿಕುಂಟೆ ಹೋಬಳಿಯ ಬಂದಕುಂಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹನುಮನಹಳ್ಳಿ ತಿಮ್ಮಣ್ಣ ಹಾಗೂ ಉಪಾಧ್ಯಕ್ಷರಾಗಿ ಬಂದಕುಂಟೆ ಗೊಲ್ಲರಹಟ್ಟಿ ಬಿ.ಕೆ. ಮಂಜುನಾಥ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಬಂದಕುಂಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹನುಮನಹಳ್ಳಿ ತಿಮ್ಮಣ್ಣ ಹಾಗೂ ಉಪಾಧ್ಯಕ್ಷರಾಗಿ ಬಂದಕುಂಟೆ ಗೊಲ್ಲರಹಟ್ಟಿ ಬಿ.ಕೆ. ಮಂಜುನಾಥ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಹನುಮನಹಳ್ಳಿ ತಿಮ್ಮಣ್ಣ , ರೈತರ ಏಳಿಗೆಗಾಗಿ ನನಗೆ ನೀಡಲಾದ ಈ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ರೈತರ ಅನುಕೂಲಕ್ಕಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಬಂದಕುಂಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲೇ ಸುಲಭವಾಗಿ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ರೈತರ ಮನೆಬಾಗಿಲಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ತಲುಪಿಸುವುದಾಗಿ ತಿಳಿಸಿದರು. ನೂತನ ಉಪಾಧ್ಯಕ್ಷ ಬಂದಕುಂಟೆ ಗೊಲ್ಲರಹಟ್ಟಿ ಬಿ.ಕೆ.ಮಂಜುನಾಥ್ ಮಾತನಾಡಿ ಯುವಕರ ಮೇಲೆ ನಂಬಿಕೆ, ವಿಶ್ವಾಸವಿಟ್ಟು ನನ್ನನು ಅವಿರೋಧವಾಗಿ ಆಯ್ಕೆ ಮಾಡಿರುವುದು ಮತ್ತಷ್ಟು ಉತ್ಸಾಹ ಹಾಗೂ ಜವಾಬ್ದಾರಿ ಹೆಚ್ಚಿಸಿದೆ. ರೈತರ ಪರವಾಗಿ ಧ್ವನಿಯಾಗಿ ನಿಂತು ಅವರ ಏಳಿಗೆಗೆ ಶ್ರಮಿಸುವೆ, ಯುವಕರನ್ನು ಹೆಚ್ಚು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಹಾಗೂ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕೃಷಿಯಲ್ಲಿ ಯಶಸ್ಸು ಸಾಧಿಸಿ ಆರ್ಥಿಕವಾಗಿ ಸದೃಢರಾಗಲು ಎಲ್ಲಾ ವಿಧವಾದ ನೆರವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನೀಡಲು ಪ್ರಯತ್ನಿಸುತ್ತೇನೆ. ನನಗೆ ಸಹಕಾರ ನೀಡಿ ಬೆಂಬಲಿಸಿದ ನಿರ್ದೇಶಕರುಗಳಿಗೂ ಹಾಗೂ ಗ್ರಾಮದ ಸರ್ವರಿಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.ಬಂದಕುಂಟೆ ವಿ. ಎಸ್. ಎಸ್. ಎನ್.ಸಂಘದ ಮಾಜಿ ಅಧ್ಯಕ್ಷ ಬಿ.ಎಂ. ಈರಪ್ಪ, ಉಪಾಧ್ಯಕ್ಷರು, ನಿರ್ದೇಶಕರುಗಳು ಸೇರಿದಂತೆ ಮುಖಂಡರಾದ ಕುಂಟೇಗೌಡ, ಪ್ರಕಾಶ್, ಚಂದ್ರಶೇಖರ್, ಗಿರಿತಿಮ್ಮಯ್ಯ, ಪ್ರಭಣ್ಣ, ಹೆಚ್.ಎನ್. ರಾಜಣ್ಣ, ಹೆಚ್.ಬಿ. ಸುರೇಶ್, ಎಲ್.ಐ.ಸಿ. ನಾಗರಾಜ್, ಶಿರಾ ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಚುನಾವಣೆ ನಡೆಸಿಕೊಟ್ಟರು, ಶಿರಾ ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕ ಎಚ್. ಎಂ. ಜನಾರ್ಧನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ. ಸಿ. ಗುರುಲಿಂಗಪ್ಪ, ಸಂಘದ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.