ಒಕ್ಕಲಿಗ ಸಮುದಾಯ ಕಾಂಗ್ರೆಸ್‌ ಪಕ್ಷ ಬೆಂಬಲಿಸಿ: ಅಧ್ಯಕ್ಷ ಹನುಮಂತಯ್ಯ ಕರೆ

| Published : Apr 25 2024, 02:05 AM IST / Updated: Apr 25 2024, 06:54 AM IST

ಒಕ್ಕಲಿಗ ಸಮುದಾಯ ಕಾಂಗ್ರೆಸ್‌ ಪಕ್ಷ ಬೆಂಬಲಿಸಿ: ಅಧ್ಯಕ್ಷ ಹನುಮಂತಯ್ಯ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜುಗಳು, ಸಂಘಕ್ಕೆ ಜಮೀನು ಕೊಟ್ಟಿದ್ದು ಕಾಂಗ್ರೆಸ್‌ ಎಂದು ಪ್ರತಿಪಾದಿಸಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವಂತೆ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ ಕರೆ ನೀಡಿದ್ದಾರೆ.

 ಬೆಂಗಳೂರು :  ಒಕ್ಕಲಿಗ ಸಮುದಾಯದ ಹಿತಕ್ಕಾಗಿ ಕಾಂಗ್ರೆಸ್‌ ಶ್ರಮಿಸಿರುವುದರಿಂದ ಲೋಕಸಭಾ ಚುನವಾಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಮುದಾಯದವರು ಬೆಂಬಲಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ ಕರೆ ನೀಡಿದರು.

ರಾಜ್ಯ ಒಕ್ಕಲಿಗರ ಸಮುದಾಯಗಳ ಒಕ್ಕೂಟದಿಂದ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಮುದಾಯದ ಮಠ, ಶಿಕ್ಷಣ ಸಂಸ್ಥೆಗಳಿಗೆ ಹಲವು ಕೊಡುಗೆ ನೀಡಲಾಗಿದೆ. ಆದಿಚುಂಚನಗಿರಿಗೆ ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜು ಮಂಜೂರು ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ಒಕ್ಕಲಿಗರ ಸಂಘಕ್ಕೆ ಜಮೀನು ನೀಡಿದೆ. ಈಗಲೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು 10 ಎಕರೆ ಜಮೀನು ಮಂಜೂರು ಮಾಡಿಸಿಕೊಟ್ಟಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಎಚ್‌.ಡಿ.ದೇವೇಗೌಡರನ್ನು ಪ್ರಧಾನಿ ಮಾಡಿದ್ದು, ಅವರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್‌. ದೇವೇಗೌಡರಿಂದ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ. ಅಪ್ಪ-ಮಕ್ಕಳು ಮೋಸ ಮಾಡುತ್ತಲೇ ಇದ್ದಾರೆ. ಸಮುದಾಯಕ್ಕೆ ಮತ್ತೊಂದು ಮಠ ಸ್ಥಾಪಿಸಿದರು. ಎಚ್‌.ಎನ್‌.ನಂಜೇಗೌಡ, ಬೈರೇಗೌಡ, ಅಂಬರೀಶ್‌ ಸೇರಿದಂತೆ ಹಲವು ಒಕ್ಕಲಿಗ ನಾಯಕರನ್ನು ಜೆಡಿಎಸ್‌ನಿಂದ ಹೊರಹಾಕಿದರು ಎಂದು ಟೀಕಿಸಿದರು.

ಒಕ್ಕೂಟದ ಪ್ರೊ.ಕೃಷ್ಣೇಗೌಡ ಮಾತನಾಡಿ, ಚುನಾವಣೆಯಲ್ಲಿ ದೇವೇಗೌಡರ ಕುಟುಂಬದ ಮೂವರು ಸ್ಪರ್ಧಿಸಿದ್ದಾರೆ. ಏಕೆ ಬೇರೆಯವರು ಇರಲಿಲ್ಲವೇ. ದೇವೇಗೌಡರಿಗೆ ಮೊದಲು 3 ಎಕರೆ ಮಾತ್ರ ಜಮೀನಿತ್ತು. ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕರಾದ ಮಂಜುನಾಥ್‌ ಅವರು 150 ಕೋಟಿ ರು. ಆಸ್ತಿ ಹೊಂದಿದ್ದಾರೆ. ಇದು ಹೇಗೆ ಬಂತು ಎಂದು ಪ್ರಶ್ನಿಸಿದರು.

ಡಿಕೆಶಿ ಸಿಎಂ ಆಗುತ್ತಾರೆ

ಕಾಂಗ್ರೆಸ್‌ನ ಆಂತರಿಕ ವಿಚಾರಗಳಲ್ಲಿ ನಾವು ತಲೆ ಹಾಕುವುದಿಲ್ಲ. ಆದರೆ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗುತ್ತಾರೆ. ಇದರಲ್ಲಿ ಅನುಮಾನವೇ ಬೇಡ ಎಂದು ಹನುಮಂತಯ್ಯ ಸ್ಪಷ್ಟಪಡಿಸಿದರು. ಸಮುದಾಯವು ಶಿವಕುಮಾರ್‌ ಬೆನ್ನಿಗೆ ನಿಲ್ಲಲಿದೆ. ಹೊಸ ನಾಯಕತ್ವ ಸೃಷ್ಟಿಯಾಗಬೇಕು. ಆದ್ದರಿಂದ ಸಮುದಾಯದವರು ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಮನವಿ ಮಾಡಿದರು.