ಹನುಮಸಾಗರ ಪಟ್ಟಣಕ್ಕೆ ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡಿಸುವಂತೆ ಜನಪ್ರತಿನಿಧಿ, ವಿವಿಧ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ
ಏಕನಾಥ ಜಿ ಮೆದಿಕೇರಿ ಹನುಮಸಾಗರ
ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊಪ್ಪಳ ಜಿಲ್ಲೆಯ ಬಸವರಾಜ ರಾಯರೆಡ್ಡಿ ಅವರಿಗೆ ಉನ್ನತ ಶಿಕ್ಷಣ ಇಲಾಖೆ ಖಾತೆ ನೀಡಿರುವುದು ಹನುಮಸಾಗರ ಪಟ್ಟಣದ ಬಹುದಿನಗಳ ಪದವಿ ಕಾಲೇಜು ಬೇಡಿಕೆಗೆ ಮತ್ತೆ ಜೀವ ಬಂದಂತಾಗಿದೆ. ಹಲವಾರು ವರ್ಷಗಳಿಂದ ಸರ್ಕಾರಿ ಪದವಿ ಕಾಲೇಜಿಗಾಗಿ ಕಾಯುತ್ತಿದ್ದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಕನಸಿನ ನಿರೀಕ್ಷೆ ಮೂಡಿದೆ.ಹನುಮಸಾಗರ ಪಟ್ಟಣಕ್ಕೆ ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡಿಸುವಂತೆ ಜನಪ್ರತಿನಿಧಿ, ವಿವಿಧ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಪದವಿ ಕಾಲೇಜು ಆರಂಭಕ್ಕೆ ಅಗತ್ಯ ವಿದ್ಯಾರ್ಥಿಗಳ ಸಂಖ್ಯೆ, ಕಟ್ಟಡ, ನಿವೇಶನ ಹಾಗೂ ಮೂಲಸೌಕರ್ಯಗಳ ಬಗ್ಗೆ ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ. ಆದರೂ ಈ ವರೆಗೆ ಕಾಲೇಜು ಆರಂಭವಾಗದೇ ಕಡತಗಳಲ್ಲೇ ಉಳಿದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸುಮಾರು 25 ಸಾವಿರ ಜನಸಂಖ್ಯೆ ಹೊಂದಿರುವ ಹನುಮಸಾಗರ ಪಟ್ಟಣದ ಸುತ್ತಮುತ್ತಲಿನ 70ಕ್ಕೂ ಅಧಿಕ ಗ್ರಾಮಗಳ ಪ್ರಮುಖ ವ್ಯಾಪಾರ ಹಾಗೂ ಶೈಕ್ಷಣಿಕ ಕೇಂದ್ರವಾಗಿದೆ. ಹನುಮಸಾಗರ ಮಾತ್ರವಲ್ಲದೇ ಹನುಮನಾಳ, ಚಳಗೇರಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪದವಿಪೂರ್ವ ಶಿಕ್ಷಣ ವ್ಯವಸ್ಥೆ ಇದೆ. ಪಿಯುಸಿ ನಂತರ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಇಲಕಲ್, ಗಜೇಂದ್ರಗಡ, ಕುಷ್ಟಗಿ, ಬಾಗಲಕೋಟೆ ಸೇರಿದಂತೆ ದೂರದ ಪಟ್ಟಣಗಳಿಗೆ ತೆರಳಬೇಕಾಗಿದೆ. ಪ್ರತಿದಿನ ನೂರಾರು ವಿದ್ಯಾರ್ಥಿಗಳು ಬಸ್ ಅವಲಂಬಿಸಿ ಕಾಲೇಜಿಗೆ ತೆರಳುತ್ತಿದ್ದಾರೆ. ಬೆಳಗ್ಗೆ ಬಸ್‌ಗಾಗಿ ಕಾಯುವುದು, ಬಸ್‌ಗಳಲ್ಲಿ ನೂಕುನುಗ್ಗಲು, ಸಮಯಕ್ಕೆ ಸರಿಯಾಗಿ ಬಸ್ ಸಿಗದಿರುವುದು ಸೇರಿದಂತೆ ಹಲವು ಸಮಸ್ಯೆ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಹನುಮಸಾಗರದಲ್ಲೇ ಸರ್ಕಾರಿ ಪದವಿ ಕಾಲೇಜು ಆರಂಭವಾದರೆ ಈ ಭಾಗದ ನೂರಾರು ವಿದ್ಯಾರ್ಥಿಗಳಿಗೆ ಪ್ರತಿವರ್ಷ ಅನುಕೂಲವಾಗಲಿದೆ.ಯುವತಿಯರ ಶಿಕ್ಷಣ ಪಿಯುಸಿಗೆ ಮೊಟಕು: ಪಿಯುಸಿ ಶಿಕ್ಷಣ ಮುಗಿಸಿದ ನಂತರ ಪ್ರತಿದಿನ ಬೇರೆ ಪಟ್ಟಣಕ್ಕೆ ಬಸ್‌ನಲ್ಲಿ ತೆರಳಿ,ಸಂಜೆ ಮರಳಿ ಬರುವ ಪರಿಸ್ಥಿತಿ ಇರುವುದರಿಂದ ಅನೇಕ ಪಾಲಕರು ತಮ್ಮ ಹೆಣ್ಣುಮಕ್ಕಳನ್ನು ದೂರದ ಕಾಲೇಜುಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಸಾರಿಗೆ ಸಮಸ್ಯೆ, ಪ್ರಯಾಣದ ಸಮಯ ಹಾಗೂ ಸುರಕ್ಷತೆ ಸೇರಿದಂತೆ ಹಲವು ಕಾರಣಗಳಿಂದ ಕೆಲವು ಯುವತಿಯರು ಪದವಿ ಶಿಕ್ಷಣದ ಆಸೆ ಕೈಬಿಡುವಂತಾಗಿದೆ.
ಒಂದು ಕಡೆ ಸರ್ಕಾರ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ. ಮತ್ತೊಂದೆಡೆ ಗ್ರಾಮೀಣ ಭಾಗದಲ್ಲಿ ಅಗತ್ಯ ಶಿಕ್ಷಣ ಸಂಸ್ಥೆಗಳ ಕೊರತೆಯಿಂದ ವಿದ್ಯಾರ್ಥಿನಿಯರು ಪಿಯುಸಿ ನಂತರ ಶಿಕ್ಷಣದಿಂದ ದೂರವಾಗುವಂತಾಗಿರುವುದು ವಿಪರ್ಯಾಸವಾಗಿದೆ.ಎರಡು ಬಾರಿ ಸ್ಥಳ ಪರಿಶೀಲನೆ: ಪದವಿ ಕಾಲೇಜು ಪ್ರಾರಂಭಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ ಹಿನ್ನೆಲೆ ಕಲಬುರಗಿ ವಿಭಾಗದ ಉನ್ನತ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು 2008 ಆ.8ರಂದು ನೂತನ ಕಾಲೇಜು ಆರಂಭಕ್ಕೆ ಅಗತ್ಯವಿರುವ ಮೂಲಸೌಕರ್ಯಗಳ ಕುರಿತು ಸ್ಥಳ ಪರಿಶೀಲಿಸುವಂತೆ ಕುಷ್ಟಗಿ ಪದವಿ ಕಾಲೇಜಿನ ಪ್ರಾಚಾರ್ಯ ಎಚ್.ಎಂ. ಭೂತನಾಳಗೆ ಆದೇಶಿಸಿದ್ದರು. ಇದಾದ ಹಲವು ವರ್ಷಗಳ ನಂತರ 2022ರ ಫೆ.3ರಂದು ಕೊಪ್ಪಳ ಕಾಲೇಜಿನ ಪ್ರಾಚಾರ್ಯ ಮಾರುತೇಶ ಬಿ. ಹಾಗೂ ಹಿರಿಯ ಉಪನ್ಯಾಸಕ ತಿಮ್ಮಾರೆಡ್ಡಿ ಮೇಟಿ ಹನುಮಸಾಗರಕ್ಕೆ ಆಗಮಿಸಿ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯ ಮುಖಂಡರು ಹಾಗೂ ಜನಪ್ರತಿನಿಧಿಗಳು ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಲಭ್ಯವಿರುವ ಸುಮಾರು ಎರಡು ಎಕರೆ ಜಾಗದಲ್ಲಿ ಪದವಿ ಕಾಲೇಜು ಆರಂಭಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಹನುಮಸಾಗರ ಪಟ್ಟಣದಲ್ಲಿ ಪದವಿ ಕಾಲೇಜು ಆರಂಭಿಸುವ ಕುರಿತು ಈ ಹಿಂದೆ ಸಲ್ಲಿಕೆಯಾಗಿರುವ ವರದಿ ತರಿಸಿಕೊಂಡು ಪರಿಶೀಲನೆ ಮಾಡುತ್ತೇನೆ. ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಸ್ಥಳದ ಮಾನ್ಯತೆ ಸೇರಿದಂತೆ ಅಗತ್ಯ ಅಂಶ ಪರಿಶೀಲಿಸಿ ಪದವಿ ಕಾಲೇಜು ಆರಂಭಿಸಲು ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.ಹನುಮಸಾಗರ ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು ಅತ್ಯವಶ್ಯಕವಾಗಿದ್ದು, ಈ ಭಾಗದಲ್ಲಿ ಪದವಿ ಕಾಲೇಜು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಪದವಿ ಕಾಲೇಜು ಆರಂಭಿಸಲು ಸ್ಥಳ ಪರಿಶೀಲನೆ ನಡೆಸಿ ಅಲ್ಲಿನ ವಾಸ್ತವ ಸ್ಥಿತಿಯ ಕುರಿತು ಜಂಟಿ ನಿರ್ದೇಶಕರಿಗೆ ವರದಿ ಸಲ್ಲಿಸಲಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಡಾಣಿ ತಿಳಿಸಿದ್ದಾರೆ.