35 ವರ್ಷಗಳ ಹೋರಾಟಕ್ಕೆ ನ್ಯಾಯ ಧಕ್ಕಿದ ಸಂತೋಷ

| N/A | Published : Aug 27 2025, 01:01 AM IST

ಸಾರಾಂಶ

ನಮ್ಮ ನ್ಯಾಯಯೂತ ಬೇಡಿಕೆ ಇನ್ನು ಇದ್ದರೂ ಸಹ ಈ ವರೆಗೂ ಸಹ ಸಿಗದೆ ಇರುವ ಒಳಮೀಸಲಾತಿಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸುವ ಮೂಲಕ ಬಹುದೊಡ್ಡ ನ್ಯಾಯವನ್ನು ಮಾದಿಗ ಸಮಾಜ ಸೇರಿದಂತೆ ಈ ಪ್ರವರ್ಗದಲ್ಲಿ ಬರುವ ಎಲ್ಲ ಸಮುದಾಯಗಳಿಗೆ ನೀಡಿದೆ.

ಕೊಪ್ಪಳ:  ಕಳೆದ 35 ವರ್ಷಗಳಿಂದ ನಡೆಯುತ್ತಿದ್ದ ಒಳ ಮೀಸಲಾತಿ ಹೋರಾಟಕ್ಕೆ ಕೊನೆಗೂ ನ್ಯಾಯ ಧಕ್ಕಿದೆ. ಇನ್ನು ಶೇ. 1ರಷ್ಟು ಬೇಕು ಎನ್ನುವ ಬೇಡಿಕೆ ಇದ್ದರೂ ಸಹ ಸಿಕ್ಕಿದೆ ಎನ್ನುವ ಸಂತೋಷ ಇದೆ ಎಂದು ಮಾದಿಗ ಮಹಾಸಭಾ ಜಿಲ್ಲಾ ಸಂಚಾಲಕರಾದ ಗಾಳೆಪ್ಪ ಪೂಜಾರ, ಮಲ್ಲಿಕಾರ್ಜುನ ಪೂಜಾರ ಹಾಗೂ ಹನುಮೇಶ ಕಡೇಮನಿ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ನ್ಯಾಯಯೂತ ಬೇಡಿಕೆ ಇನ್ನು ಇದ್ದರೂ ಸಹ ಈ ವರೆಗೂ ಸಹ ಸಿಗದೆ ಇರುವ ಒಳಮೀಸಲಾತಿಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸುವ ಮೂಲಕ ಬಹುದೊಡ್ಡ ನ್ಯಾಯವನ್ನು ಮಾದಿಗ ಸಮಾಜ ಸೇರಿದಂತೆ ಈ ಪ್ರವರ್ಗದಲ್ಲಿ ಬರುವ ಎಲ್ಲ ಸಮುದಾಯಗಳಿಗೆ ನೀಡಿದೆ. ಅಲೇಮಾರಿಗಳಿಗೆ ಅನ್ಯಾಯವಾಗಿದೆ ಎನ್ನುವ ಆರೋಪ ಇದ್ದು, ಇದನ್ನು ನಾವು ಸಹ ತಳ್ಳಿಹಾಕಿಲ್ಲ. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಎಂದು ರಾಜ್ಯ ಸರ್ಕಾರವೇ ಹೇಳಿದ್ದು, ಅದನ್ನು ಸರಿಪಡಿಸುವ ವಿಶ್ವಾಸವಿದೆ ಎಂದರು.

ಮಾದಿಗ ಸಮುದಾಯಕ್ಕೆ ಇದುವರೆಗೂ ಇದ್ದ ಮೀಸಲಾತಿಯಿಂದ ಬಹಳ ಅನ್ಯಾಯವಾಗುತ್ತಿತ್ತು. ನಮಗೆ ಸ್ಪರ್ಧೆ ಮಾಡಲು ಆಗದೆ, ಸಿಗಬೇಕಾದ ಸೌಲಭ್ಯ ಸಿಗುತ್ತಿರಲಿಲ್ಲ. ಆದರೆ, ಈಗ ಪ್ರತ್ಯೇಕವಾಗಿ ಇರುವುದರಿಂದ ಮತ್ತು ಪ್ರ-ವರ್ಗ 1ರಲ್ಲಿ ಸೇರಿಸಿ, ಶೇ. 6ರಷ್ಟು ಮೀಸಲಾತಿ ಕಲ್ಪಿಸಿದೆ. ಇದರಲ್ಲಿ ನಮ್ಮ ಸಹೋದರ ಸಮುದಾಯದ 18 ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆ. ಇಂಥದ್ದೊಂದು ನ್ಯಾಯಕ್ಕಾಗಿ ನಮ್ಮ ಸಮಾಜದವರು ಸೇರಿದಂತೆ ಅನೇಕ ಸಮಾಜದ ಹಿರಿಯರು ಸಮಾಜಿಕ ನ್ಯಾಯದ ಅಡಿಯಲ್ಲಿ ಹೋರಾಟ ಮಾಡಿದ್ದಾರೆ. ಇದರಲ್ಲಿ ಕೆಲವರು ಹುತಾತ್ಮರಾಗಿದ್ದಾರೆ. ಅವರನ್ನು ಸಹ ಸ್ಮರಿಸುವುದು ನಮ್ಮ ಆದ್ಯಕರ್ತವ್ಯವಾಗಿದೆ ಎಂದರು.

ಅಭಿನಂದನಾ ಸಮಾವೇಶ:

ಮಾದಿಗ ಮಹಾಸಭಾದಿಂದ ರಾಜ್ಯಾದ್ಯಂತ ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ ಅಭಿನಂದನಾ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಈ ಅಭಿನಂದನಾ ಸಮಾವೇಶ ರಾಜ್ಯಪಾಲಕ ಅಂಕಿತ ಬಿದ್ದ ಬಳಿಕ ನಡೆಸಲಾಗುತ್ತದೆ. ಕೊಪ್ಪಳದಲ್ಲಿ ನಡೆಯುವ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು, ಸಮುದಾಯದ ಹೋರಾಟಗಾರರು, ಮಾದಿಗ ಮಹಾಸಭಾದ ರಾಜ್ಯ ಪದಾಧಿಕಾರಿಗಳನ್ನು ಆಹ್ವಾನಿಸಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದೆ ಎಂದು ಹೇಳಿದರು.

ನಮಗೆ ಹೋರಾಟದ ವೇಳೆಯಲ್ಲಿ ಕೇವಲ ನಮ್ಮ ಸಮಾಜ ಮಾತ್ರವಲ್ಲದೆ ಇತರೆ ಸಮುದಾಯದವರು ತನು, ಮನ, ಧನದಿಂದಲೂ ಸಹಾಯ ಮಾಡಿದ್ದಾರೆ. ಅದನ್ನು ಸಹ ಮರೆಯುವಂತೆ ಇಲ್ಲ ಎಂದ ಅವರು, ಸದ್ಯಕ್ಕೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿನ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಲಾಗಿದೆ. ಆದರೆ, ರಾಜಕೀಯ ಮೀಸಲಾತಿಗಾಗಿಯೂ ಹೋರಾಟ ನಡೆಯಬೇಕಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಮಣ್ಣ ಚೌಡ್ಕಿ, ಯಲ್ಲಪ್ಪ ಹಳೆಮನಿ ಸೇರಿದಂತೆ ಇತರರು ಇದ್ದರು.

Read more Articles on