ಸಾರಾಂಶ
ಅಂದು ಚಾಮುಂಡಿಬೆಟ್ಟ ನಿರ್ಜನವಾಗಿರುವಂತೆ ನೋಡಿಕೊಂಡ ಕಾರಣ ಸುಮಾರು 2 ಕೋಟಿ ನಷ್ಟವಾಗಿದೆ. ವ್ಯಾಪಾರಿಗಳು, ಪ್ರವಾಸಿಗಳಿಗೆ ಸಮಸ್ಯೆಯಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಈ ಬಾರಿಯ ಮಹಿಷ ಮಂಡಲೋತ್ಸವ ವೇಳೆ ಚಾಮುಂಡಿಬೆಟ್ಟದಲ್ಲಿನ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆಗೆ ಅವಕಾಶ ನೀಡಿದಿದ್ದರೆ ದಸರಾಕ್ಕೆ ಅಡ್ಡಿ ಪಡಿಸುತ್ತೇವೆ ಎಂದು ಹೇಳಿದ್ದು ನಿಜ. ನಂತರ ಮಹಿಷ ಪ್ರತಿಮಗೆ ಪುಷ್ಪಾರ್ಚನೆಗೆ ಅವಕಾಶ ನೀಡಿದ್ದು ಸಂತಸ ತಂದಿದೆ ಎಂದು ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷರಾದ ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.ಪುರಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಮರಾಜನಗರದಿಂದ ಬೀದರ್ ನಿಂದಲೂ ಆಗಮಿಸಿದ್ದವರು ಪಾಲ್ಗೊಂಡು ಯಶಸ್ವಿಗೊಳಿಸಿದರು. ಆದರೆ, ಪುಷ್ಪಾರ್ಚನೆಗೆಂದು ಚಾಮುಂಡಿಬೆಟ್ಟಕ್ಕೆ ಹೋದಾಗ ಎಲ್ಲೆಲ್ಲಿಯೂ ಪೊಲೀಸರೇ ಕಾಣುತ್ತಿದ್ದರು. ಬೆಟ್ಟ ನಿರ್ಜನವಾಗಿತ್ತು. ಈ ರೀತಿ ಮಾಡಲು ನಾವೇನು ಭಯೋತ್ಪಾದಕರೇ, ಅಂದು ಸಂಜೆ 7ರ ವೇಳೆಗೆ ನಮ್ಮದೇ ಕಾರಿನಲ್ಲಿ ಬೆಟ್ಟಕ್ಕೆ ಹೋಗಿ ಕತ್ತಲೆ ನಡುವೆ ಪುಷ್ಪಾರ್ಚನೆ ಮಾಡಬೇಕಾದ ಪರಿಸ್ಥಿತಿ ಇದ್ದುದು ಬೇಸರದ ಸಂಗತಿ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂದು ಚಾಮುಂಡಿಬೆಟ್ಟ ನಿರ್ಜನವಾಗಿರುವಂತೆ ನೋಡಿಕೊಂಡ ಕಾರಣ ಸುಮಾರು 2 ಕೋಟಿ ನಷ್ಟವಾಗಿದೆ. ವ್ಯಾಪಾರಿಗಳು, ಪ್ರವಾಸಿಗಳಿಗೆ ಸಮಸ್ಯೆಯಾಗಿದೆ. ಈ ರೀತಿ ನಿರ್ಬಂಧ ವಿಧಿಸಬೇಕಾದ ಅಗತ್ಯವಿರಲಿಲ್ಲ. ಪುರಭವನದಲ್ಲಿ ನಡೆದ ಮಹಿಷ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಪ್ರೊ.ಕೆ.ಎಸ್. ಭಗವಾನ್ ಆಕ್ಷೇಪಾರ್ಹವಾಗಿ ಮಾತನಾಡಿಲ್ಲ. ಅವರು ಸತ್ಯ ಇರುವ ಧರ್ಮ ಗೌರವಿಸಿ ಎಂದು ಹೇಳಿದ್ದಾರಷ್ಟೇ ಹೊರತು, ಹಿಂದೂ ಧರ್ಮ ಬಿಟ್ಟು ಬನ್ನಿ ಎಂದಿಲ್ಲ. ಹೀಗಿದ್ದರೂ ಅವರ ತೇಜೋವಧೆ ಸರಿಯಲ್ಲ ಎಂದರು.ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆಗೊಳ್ಳುವ ದಿನದಂದೇ ಮುಖ್ಯಮಂತ್ರಿ ಚಾಮುಂಡಿಬೆಟ್ಟದಲ್ಲಿನ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಸಂಪ್ರದಾಯ ಹುಟ್ಟುಹಾಕಲಿ ಎಂದು ಅವರು ಮನವಿ ಮಾಡಿದರು. ಸಮಿತಿಯ ಲೋಕೇಶ್, ನಾರಾಯಣಸ್ವಾಮಿ ಇದ್ದರು.