ಸಕಲೇಶಪುರ ತಾಲೂಕಿನಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ

| Published : Aug 15 2025, 01:00 AM IST

ಸಕಲೇಶಪುರ ತಾಲೂಕಿನಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷದ ಸೂಚನೆಯಂತೆ ದೇಶಕ್ಕಾಗಿ ಹೋರಾಡಿ ವೀರ ಮರಣ ಹೊಂದಿದ ಯೋಧರ ಸ್ಮಾರಕಗಳ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ದೇಶ ಸೇವೆ ಮಾಡಿದ ಯೋಧರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ದೇಶದ ಬಗ್ಗೆ ಪ್ರತಿಯೊಬ್ಬ ನಾಗರಿಕನೂ ಅಭಿಮಾನ ಬೆಳೆಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ವತಿಯಿಂದ ಬೈಕ್ ರ್‍ಯಾಲಿ ಮಾಡಲಾಗುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಿಖಿಲ್ ಹಲಸುಲಿಗೆ ಹೇಳಿದರು.

೭೮ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ತಾಲೂಕು ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಗುರುವಾರ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ಬೈಕ್ ರ್‍ಯಾಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ದೇಶವನ್ನು ೭೦ ವರ್ಷಗಳ ಕಾಲ ಆಳ್ವಿಕೆ ಮಾಡಿದ್ದ ಕಾಂಗ್ರೆಸ್ಸಿಗರು ಕಾಶ್ಮೀರಕ್ಕೆ ಪ್ರತ್ಯೇಕ ಕಾನೂನು ಮಾಡಿ ಭಾರತವನ್ನು ವಿಭಜಿಸಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ತೆರವುಗೊಳಿಸಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತವನ್ನು ಒಗ್ಗೂಡಿಸಿದರು. ಈ ನಿಟ್ಟಿನಲ್ಲಿ ತಿರಂಗ ಧ್ವಜವನ್ನು ಹಿಡಿದು ಪಟ್ಟಣದ ಹೇಮಾವತಿ ಸೇತುವೆಯಿಂದ ಕೆಂಪೇಗೌಡ ಪ್ರತಿಮೆವರೆಗೆ ಬೈಕ್ ರ್‍ಯಾಲಿ ಹಾಗೂ ವೀರಯೋಧ ಎ.ಕೆ ಸಾಗರ್ ಪ್ರತಿಮೆ ಆವರಣದ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗಿದೆ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಧು ಬೊಮ್ಮನಕೆರೆ ಮಾತನಾಡಿ, ಭಾರತೀಯ ಸೇನೆ ಆಪರೇಷನ್ ಸಿಂದೂರ ಮತ್ತು ಮಹದೇವ್ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಕಾರಣ ಬಿಜೆಪಿಯಿಂದ ಬೈಕ್ ರ್‍ಯಾಲಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವಕರು ದೇಶಾಭಿಮಾನ ಬೆಳೆಸಿಕೊಳ್ಳುವ ಅಗತ್ಯವಿದೆ. ದೇಶದ ಸುರಕ್ಷತೆಗೆ ನಮ್ಮ ಇಡೀ ಸೈನ್ಯ ತಮ್ಮ ಕುಟುಂಬ ತೊರೆದು ಗಡಿಯಲ್ಲಿ ಶತ್ರುಗಳೊಂದಿಗೆ ನಿರಂತರ ಹೋರಾಡುತ್ತಾ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ, ದೇಶದೊಳಗಿನ ಕೆಲ ರಾಜಕೀಯ ವ್ಯಕ್ತಿಗಳು ಭಾರತೀಯ ಸೈನ್ಯ ಮತ್ತು ಸೈನಿಕರಿಗೆ ಅಪಮಾನಗೊಳಿಸುವ ಮಾತುಗಳನ್ನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಬಬಿತಾ ವಿಶ್ವನಾಥ್ ಮಾತನಾಡಿ, ಪಕ್ಷದ ಸೂಚನೆಯಂತೆ ದೇಶಕ್ಕಾಗಿ ಹೋರಾಡಿ ವೀರ ಮರಣ ಹೊಂದಿದ ಯೋಧರ ಸ್ಮಾರಕಗಳ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ದೇಶ ಸೇವೆ ಮಾಡಿದ ಯೋಧರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವತ್ಥ್, ಉಪಾಧ್ಯಕ್ಷ ಜಯಪ್ರಕಾಶ್ ದೊಡ್ಡದೀಣೆ, ಶಾಸಕ ಸಿಮೆಂಟ್ ಮಂಜು ಧರ್ಮಪತ್ನಿ ಪ್ರತಿಭಾ ಮಂಜುನಾಥ್. ಪ್ರಧಾನ ಕಾರ್ಯದರ್ಶಿ ಅಗ್ನಿ ಸೋಮಶೇಖರ್, ನಗರ ಘಟಕದ ಅಧ್ಯಕ್ಷ ಲೋಕೇಶ್ (ದಿಂಬು), ಬಿಜೆಪಿ ಅಲ್ಪ ಸಂಖ್ಯಾತರ ಘಟಕದ ಆನಂದ್ ಲಿಯೋ, ಪರಿಶಿಷ್ಟ ಜಾತಿ / ಪಂಗಡದ ಸ್ಟೀವನ್ ಪ್ರಕಾಶ್ ಸೇರಿ ಬಿಜೆಪಿ ಮಂಡಲ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.