ಯೂತ್ ಫಾರ್ ನೇಷನ್ ವತಿಯಿಂದ ಆ. 14ರಂದು ಹಾವೇರಿಯಲ್ಲಿ ಹರ್ ಘರ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. 4-5 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾಹಿತಿ ನೀಡಿದ್ದಾರೆ.

ಹಾವೇರಿ: ಸ್ವಾತಂತ್ರ್ಯಕ್ಕಾಗಿ ನಡೆದ ತ್ಯಾಗ, ಬಲಿದಾನದ ಬಗ್ಗೆ ಯುವ ಸಮುದಾಯಕ್ಕೆ ಅರಿವು ಮೂಡಿಸಿ, ಅವರಲ್ಲಿ ರಾಷ್ಟ್ರಾಭಿಮಾನ ಹಾಗೂ ದೇಶಪ್ರೇಮ ಹೊರಹೊಮ್ಮುವಂತೆ ಮಾಡುವ ಉದ್ದೇಶದಿಂದ ಯೂತ್ ಫಾರ್ ನೇಷನ್ ವತಿಯಿಂದ ಆ. 14ರಂದು ನಗರದಲ್ಲಿ ಹರ್ ಘರ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಮೇರೆಗೆ ಜಿಲ್ಲಾದ್ಯಂತ ಹರ್ ಘರ್ ತಿರಂಗಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

4-5 ಸಾವಿರ ಜನರ ನಿರೀಕ್ಷೆ: ದೇಶಕ್ಕೆ ಸ್ವಾತಂತ್ರ್ಯ ಸುಮ್ಮನೆ ದೊರೆತಿಲ್ಲ, ಅದರ ಹಿಂದೆ ಅನೇಕ ಹೋರಾಟಗಾರರ ತ್ಯಾಗ, ಬಲಿದಾನವಿದೆ. ಇಂದಿನ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಸ್ವಾತಂತ್ರ್ಯ ಇತಿಹಾಸ ಮತ್ತು ದೇಶಾಭಿಮಾನದ ಮಹತ್ವ ತಿಳಿಸದಿದ್ದರೆ ಮುಂದಿನ ಪೀಳಿಗೆಗೆ ಅದರ ಮೌಲ್ಯ ಅರಿವಾಗುವುದಿಲ್ಲ. ಈ ಉದ್ದೇಶದಿಂದ ಜಾಥಾ ಆಯೋಜಿಸಲಾಗಿದೆ. ಆ. 14ರಂದು ಬೆಳಗ್ಗೆ 10.30ಕ್ಕೆ ವಾಲ್ಮೀಕಿ ವೃತ್ತದಿಂದ ಜಾಥಾ ಆರಂಭವಾಗಲಿದೆ. ಹೊಸಮನಿ ಸಿದ್ದಪ್ಪ ವೃತ್ತ, ಕಾಗಿನೆಲೆ ಕ್ರಾಸ್, ಕಲ್ಲುಮಂಟಪ ರಸ್ತೆ, ಎಂ.ಜಿ. ರಸ್ತೆ, ಎಂ.ಜಿ. ವೃತ್ತದ ಮಾರ್ಗವಾಗಿ ಸಂಚರಿಸಿ ಜೆ.ಪಿ. ಸರ್ಕಲ್‌ನಲ್ಲಿ ಸಮಾರೋಪಗೊಳ್ಳಲಿದೆ. ಸುಮಾರು ಒಂದು ಕಿಮೀ ಉದ್ದದ ರಾಷ್ಟ್ರಧ್ವಜ, ಜಾಥಾದ ಪ್ರಮುಖ ಆಕರ್ಷಣೆಯಾಗಲಿದೆ. 4-5 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಅನುಭವಿಗಳು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟ, ರಾಷ್ಟ್ರಾಭಿಮಾನ ಕುರಿತು ಮಾತನಾಡಲಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಇತರ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ ಮುಷ್ಠಿ, ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಕುಮಾರ, ನಂಜುಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ನಿರಂಜನ ಹೇರೂರ ಹಾಗೂ ವಿಜಯಕುಮಾರ ಚಿನ್ನಿಕಟ್ಟಿ ಇತರರಿದ್ದರು.

ಬರ ವೀಕ್ಷಣೆ ಶೀಘ್ರ: ಜಿಲ್ಲೆಯ ಶಿಗ್ಗಾಂವಿ, ಸವಣೂರು, ಹಾವೇರಿ ಹಾಗೂ ಬ್ಯಾಡಗಿ ತಾಲೂಕುಗಳ ಪೂರ್ವ ಭಾಗದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಶೀಘ್ರ ಬರ ವೀಕ್ಷಣೆ ನಡೆಸಲಾಗುವುದು. ಮಳೆ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ರಾಜ್ಯದ ತಂಡ ಜಿಲ್ಲೆಗೆ ಆಗಮಿಸಿ ಬರ ಅಧ್ಯಯನ ನಡೆಸಲಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

18ರಿಂದ ಬಿಜೆಪಿ ಪ್ರತಿಭಟನೆ: ಸಚಿವ ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಆ. 18ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ ಆರಂಭಿಸಲಿದೆ. ನಿತ್ಯ ಒಂದೊಂದು ತಾಲೂಕಿನ ಕಾರ್ಯಕರ್ತರು ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭ್ರಷ್ಟಾಚಾರದ ಆರೋಪಗಳನ್ನು ಮುಚ್ಚಿಹಾಕಲು ಮುಖ್ಯಮಂತ್ರಿ ಅವರನ್ನು ಬೆದರಿಸಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ ಎಂದು ವಿರೂಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.