ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಬೊಮ್ಮಸಮುದ್ರ ಗ್ರಾಮದಲ್ಲಿ ಶ್ರೀಗುರು ಚನ್ನಬಸವೇಶ್ವರ ಸ್ವಾಮಿಯ ದೇವಾಲಯದ ಸ್ಥಾಪನೆಯ ಸುವರ್ಣ ಮಹೋತ್ಸವವನ್ನು ಭಕ್ತಿಭಾವ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಭಕ್ತರು ಭಾಗವಹಿಸಿದ ಈ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸಗಳು ಮತ್ತು ಆಶೀರ್ವಚನಗಳು ನಡೆದವು.

ಕಾರ್ಯಕ್ರಮದಲ್ಲಿ ಮಾತನಾಡಿದ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಗ್ಗುತ್ತಿರುವುದು ಚಿಂತಾಜನಕವಾಗಿದೆ, ಇಂದಿನ ಕಾಲದಲ್ಲಿ ಮಕ್ಕಳು ತಂದೆ- ತಾಯಿಯರನ್ನು ಗೌರವಿಸುವ ಮನೋಭಾವ ಕಡಿಮೆಯಾಗುತ್ತಿದೆ. ಅವರನ್ನು ಪ್ರೀತಿಯಿಂದ ನೋಡಿಕೊಳ್ಳುವ ಬದಲು ವೃದ್ಧಾಶ್ರಮಗಳಿಗೆ ಕಳುಹಿಸುವ ಘಟನೆಗಳು ಹೆಚ್ಚಾಗುತ್ತಿವೆ. ವಿದ್ಯಾಭ್ಯಾಸದ ಹೆಸರಿನಲ್ಲಿ ಮಕ್ಕಳನ್ನು ದೂರದ ರಾಜ್ಯಗಳಿಗೂ, ವಿದೇಶಗಳಿಗೂ ಕಳುಹಿಸುವ ಪ್ರವೃತ್ತಿ ಹೆಚ್ಚುತ್ತಿದ್ದು, ಅದರೊಂದಿಗೆ ನಮ್ಮ ಸಂಸ್ಕಾರಗಳು ಮರೆತು ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತಿಪಟೂರು ತಾಲೂಕಿನ ಕೆರೆಗೋಡಿ ರಂಗಾಪುರ ಮಠದ ಪೀಠಾಧ್ಯಕ್ಷರಾದ ಶ್ರೀಗುರು ಪರದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಬೊಮ್ಮಸಮುದ್ರ ಗ್ರಾಮಕ್ಕೂ ಕೆರೆಗೋಡಿ ಮಠಕ್ಕೂ ಇರುವ ಭಕ್ತಿಯ ನಂಟು ದೀರ್ಘಕಾಲದ್ದು ಎಂದು ಹೇಳಿದರು.

ಸುಮಾರು 50 ವರ್ಷಗಳ ಹಿಂದೆ ಈ ದೇವಾಲಯದ ಕಟ್ಟಡ ನಿರ್ಮಾಣಕ್ಕಾಗಿ ನಡೆದ ಭೂಮಿಪೂಜೆಯನ್ನು ನಮ್ಮ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ನೆರವೇರಿಸಿದ್ದರು. ಇದೀಗ ಅದೇ ಮಠದ ಏಳನೇ ಗುರುಗಳಿಗಾಗಿ ನಾನು ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ. ನನಗೂ ಪಟ್ಟಾಭಿಷೇಕಗೊಂಡು 50 ವರ್ಷ ತುಂಬಿರುವುದು ವಿಶೇಷ ಕ್ಷಣ ಎಂದು ತಿಳಿಸಿದರು.


ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮೀಜಿ ಮಾತನಾಡಿ, ಸಂಸ್ಕೃತಿ ಮತ್ತು ಸಂಸ್ಕಾರಗಳು ಸಮಾಜದ ಎರಡು ಅವಿಭಾಜ್ಯ ಮುಖಗಳಾಗಿವೆ ಎಂದು ಹೇಳಿದರು.

ಇವುಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸುಖ- ಶಾಂತಿ ನೆಲೆಸುತ್ತದೆ. ಭಾರತದ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ ಸ್ಥಾನ ಹೊಂದಿದ್ದು, ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಹೇಳಿದರು.

ಅರಸೀಕೆರೆ ಕ್ಷೇತ್ರದ ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯೇ ತಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

ಮತದಾರರ ಋಣವನ್ನು ತೀರಿಸಲು ಇನ್ನೂ ಹಲವು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕಿದೆ. ಯಾರೇ ಏನೇ ಹೇಳಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸದ ಮೂಲಕವೇ ಉತ್ತರ ನೀಡುತ್ತೇನೆ. ಅರಸೀಕೆರೆಯನ್ನು ಮಾದರಿ ತಾಲೂಕಾಗಿ ಅಭಿವೃದ್ಧಿಪಡಿಸುವುದು ನನ್ನ ಧ್ಯೇಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಆರ್.ಎನ್. ಶೇಖರ್, ಎಚ್.ಜಿ. ರೇವಣ್ಣ, ಸಾಧು ವೀರಶೈವ ಸಮಾಜದ ಅಧ್ಯಕ್ಷ ಡಾ. ಹರ ಶಿವಮೂರ್ತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗಂಗಾಧರ್, ಜೆಡಿಎಸ್ ಮುಖಂಡ ಹಾಗೂ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎನ್.ಆರ್. ಸಂತೋಷ್, ಜಿಪಂ ಮಾಜಿ ಸದಸ್ಯ ಎಂ.ಎಸ್.ವಿ. ಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಕಡಲಮಗೆ ನಂಜುಂಡಪ್ಪ,ಮೈಲಾರಪ್ಪ, ಬಿಎಂ ಚೇತನ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರಾಂಪುರದ ಭಜನಾ ತಂಡದವರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಬೊಮ್ಮಸಮುದ್ರ ಗ್ರಾಮಸ್ಥರು ಮತ್ತು ಭಕ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.