ಹರಿಹರ ಪೀಠದಲ್ಲಿ ಜ.15ರಂದು ಹರ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ವರ್ಷದಿಂದ ಕಿತ್ತೂರ ಚೆನ್ನಮ್ಮಳ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.

ರಾಣಿಬೆನ್ನೂರು: ಹರಿಹರ ಪೀಠದಲ್ಲಿ ಜ.15ರಂದು ಹರ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ವರ್ಷದಿಂದ ಕಿತ್ತೂರು ಚೆನ್ನಮ್ಮಳ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕ್ರಾಂತಿಯ ಪವಿತ್ರ ದಿನದಂದು ಸೂರ್ಯನು ಪಥ ಬದಲಾಯಿಸುವ ರೀತಿಯಲ್ಲಿ ಪಂಚಮಸಾಲಿ ಸಮಾಜವು ಹೊಸ ಪರಿವರ್ತನೆ ಮುನ್ನುಡಿ ಹಾಕುತ್ತದೆ. ದೇಶದಲ್ಲಿ ಈ ವರೆಗೂ ಝಾನ್ಸಿಬಾಯಿ ಲಕ್ಷ್ಮೀಬಾಯಿಯನ್ನು ಪ್ರಥಮ ಮಹಿಳಾ ಸ್ವಾತಂತ್ರ್ಯ

ಹೋರಾಟಗಾರ್ತಿ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ವಾಸ್ತವವಾಗಿ ಲಕ್ಷ್ಮೀಬಾಯಿಗಿಂತ 30 ವರ್ಷ ಮೊದಲು ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ್ದರು. ಈಗೀಗ ಈ ಸಂಗತಿ ದೇಶದ ಜನರಿಗೆ ಗೊತ್ತಾಗಿದೆ ಎಂದರು.

ದೆಹಲಿಯ ಹೊಸ ಸಂಸತ್ ಭವನದ ಎದುರಿನಲ್ಲಿ ವಿವಿಧ ಸ್ವಾತಂತ್ರ್ಯ ಹೋರಾಟಗಾರರು, ಮಹಾತ್ಮರ ಮಧ್ಯದ ಸಾಲಿನಲ್ಲಿ ಚೆನ್ನಮ್ಮಳ ಪ್ರತಿಮೆ ಸ್ಥಾಪಿಸಲಾಗಿದೆ. ಚೆನ್ನಮ್ಮ ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ 201 ವರ್ಷಗಳಾದ ಪ್ರಯುಕ್ತ ಅವರ ಹೆಸರಿನಲ್ಲಿ ಕೇಂದ್ರ ಸರ್ಕಾರ ₹ 200 ಮೌಲ್ಯದ ನಾಣ್ಯ ಬಿಡುಗಡೆ ಮಾಡಿದೆ. ಈ ಎಲ್ಲ ಕಾರಣಗಳಿಂದ ಚೆನ್ನಮ್ಮಳ ಹೆಸರಿನಲ್ಲಿ ಶ್ರೀಪೀಠದಿಂದ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ ಮಾತನಾಡಿ, ಜ.15ರಂದು ಹರ ಜಾತ್ರಾ ಮಹೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಬಾರಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯ ಸೇರಿದಂತೆ ಸಮಾಜದ 25 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಜಾತ್ರಾ ಮಹೋತ್ಸವದ ದಾಸೋಹಕ್ಕಾಗಿ ಹರಪನಹಳ್ಳಿ ತಾಲೂಕಿನ ಮೈದೂರು ಗ್ರಾಮದ ಸಮಾಜದ ಜನರು 10 ಸಾವಿರ ರೊಟ್ಟಿ ಹಾಗೂ 20 ಕೆಜಿ ಶೇಂಗಾ ಚಟ್ನಿ ಕಳುಹಿಸುತ್ತಿದ್ದಾರೆ. ಇದಲ್ಲದೆ ವಿವಿಧ ಜಿಲ್ಲೆಗಳಿಂದ ಸಮಾಜ ಬಾಂಧವರು ದವಸ-ಧಾನ್ಯ ನೀಡುತ್ತಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ವಧು-ವರರ ಮಾಹಿತಿ ಕೇಂದ್ರ ಕೌಂಟರ್ ತೆರೆಯಲಾಗುವುದು ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಮಠದ ಮುಖ್ಯದ್ವಾರದಲ್ಲಿ ಎಲ್ಲ ಭಕ್ತರಿಗೆ ಮಹಿಳೆಯರು ಕಂಕಣ ಕಟ್ಟಿ ಸ್ವಾಗತ ಕೋರಲಿದ್ದಾರೆ. ಮುಂದಿನ ವರ್ಷದಿಂದ ಜಾತ್ರಾ ಮಹೋತ್ಸವದ ದಿನ ತೇರು ಎಳೆಯಲು ನಿರ್ಧರಿಸಲಾಗಿದೆ ಎಂದರು.

ಜಾತ್ರಾ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಬಸವರಾಜ ವೀರಾಪುರ ಮಾತನಾಡಿ, ₹ 20 ಲಕ್ಷ ವೆಚ್ಚದಲ್ಲಿ ಕಟ್ಟಿಗೆಯಿಂದ ತೇರು ನಿರ್ಮಿಸಲಾಗುತ್ತಿದೆ. ಈ ಬಾರಿ ಸಮಾಜ ಬಾಂಧವರು ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿಸಬೇಕು ಎಂದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಗ್ರಾಮೀಣ ಘಟಕದ ಅಧ್ಯಕ್ಷ ಸಿದ್ದಣ್ಣ ಚಿಕ್ಕಬಿದರಿ, ಶಹರ ಘಟಕದ ಅಧ್ಯಕ್ಷ ವೀರೇಶ ಮೋಟಗಿ, ಎಸ್.ಎಸ್. ರಾಮಲಿಂಗಣ್ಣನವರ, ಸಂತೋಷಕುಮಾರ ಪಾಟೀಲ, ಮಂಗಳಗೌರಿ ಪೂಜಾರ, ಭಾರತಿ ಜಂಬಗಿ, ಪ್ರಮೀಳಾ ಜಂಬಗಿ ಸುದ್ದಿಗೋಷ್ಠಿಯಲ್ಲಿದ್ದರು.