ಸಾರಾಂಶ
ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರುತಾಲೂಕಿನ ವಾಣಿ ವಿಲಾಸ ಜಲಾಶಯದ ಮೇಲ್ಭಾಗದ ಇತಿಹಾಸ ಪ್ರಸಿದ್ಧ, ಬುಡಕಟ್ಟು ಕಾಡುಗೊಲ್ಲರ ಆರಾಧ್ಯ ದೈವ ಹಾರನ ಕಣಿವೆ ಶ್ರೀ ರಂಗನಾಥ ಸ್ವಾಮಿಯ ಅಂಬಿನೋತ್ಸವ ಅ.13 ರ ಭಾನುವಾರ ಜರುಗಲಿದೆ.ಹೊಸದುರ್ಗ ತಾಲೂಕಿನ ಅಂಚಿಬಾರಿಹಟ್ಟಿ ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷಪೂಜೆ ಸಲ್ಲಿಸಿದ ಬಳಿಕ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸ್ವಾಮಿಗೆ ಗಂಗಾಪೂಜೆ ಹಾಗೂ ಕುದುರೆ ಪೂಜೆ ಕಾರ್ಯ ನೆರವೇರಿಸಲಾಗುತ್ತದೆ. ಬಳಿಕ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆಯೊಂದಿಗೆ ಗುಡಿ ಗೌಡ, ಪೂಜಾರಿ, ಗ್ರಾಮದ ಅಣ್ಣ-ತಮ್ಮಂದಿರು ಹಾಗೂ ಭಕ್ತರ ನೇತೃತ್ವದಲ್ಲಿ ಅದ್ಧೂರಿಯಾಗಿ ಹಾರನ ಕಣಿವೆ ಕ್ಷೇತ್ರಕ್ಕೆ ಕರೆತಂದು ಶಿವ ಹಾಗೂ ವಿಷ್ಣುವಿಗೆ ಮೊದಲ ಪೂಜೆ ಸಲ್ಲಿಸಿದ ನಂತರ ಪೂಜಾರಿಯು ಜಂಬೂ ಮರದ ಮುಂದೆ ನೆಟ್ಟಿದ್ದ ಬಾಳೆ ಗಿಡಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಬಿಲ್ಲು ಹಿಡಿದು ಬಾಣ ಹೊಡೆದು, ಬಾಳೆಗಿಡ ಕಡಿದು, ಬನ್ನಿ ಮುಡಿಯುವ ಅಂಬಿನೋತ್ಸವ ಕಾರ್ಯ ನೇರವೇರುತ್ತದೆ.
ಜಿಲ್ಲೆಯ ಬಯಲು ಸೀಮೆಯ ಹಿರಿಯೂರಿನಿಂದ ಹೊಸ ದುರ್ಗಕ್ಕೆ ಹೋಗುವ ಮಾರ್ಗ ಮಧ್ಯೆ ಎಡಭಾಗದ ವಿವಿ ಸಾಗರ ಜಲಾಶಯದ ಪಕ್ಕದ ಕಾಡು ಮೇಡಿನಲ್ಲಿ ನೆಲೆಸಿರುವ ಹಾರನ ಕಣಿವೆ ಶ್ರೀ ರಂಗಯ್ಯನೊಬ್ಬ ಪವಾಡ ಪುರುಷನೆಂದೇ ಪ್ರತೀತಿ. ಪ್ರತಿ ವರ್ಷ ಆಶ್ವೀಜ ಶುದ್ಧ ಏಕಾದಶಿಯ ವಿಜಯದಶಮಿಯಂದು ಅಂಬಿನೋತ್ಸವ ನೆರವೇರಲಿದೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಸ್ವಾಮಿಯ ದರ್ಶನ ಪಡೆಯುತ್ತಾರೆ.ಮಧ್ಯ ಕರ್ನಾಟಕದ ಬುಡುಕಟ್ಟು ಕಾಡುಗೊಲ್ಲರ ಧಾರ್ಮಿಕ ಕೇಂದ್ರವಾದ ಈ ದೇವಾಲಯದ ಮಹಿಮೆ ಅಪಾರವಾಗಿದ್ದು, ಕರಡಿ ಬುಳ್ಳಪ್ಪ ವಂಶಸ್ಥರಾದ ಕರಡಿಗೊಲ್ಲರು ಶ್ರೀ ರಂಗನಾಥ ಸ್ವಾಮಿಯನ್ನು ಪೂಜಿಸಿಕೊಂಡು ಬರುತ್ತಿದ್ದು ನಂಬಿ ಬಂದವರನ್ನು ರಂಗಯ್ಯ ಎಂದೂ ಕೈ ಬಿಟ್ಟಿಲ್ಲ ಎನ್ನುವುದು ಭಕ್ತರ ಬಲವಾದ ನಂಬಿಕೆಯಾಗಿದೆ.
ವಿಷ ಜಂತುಗಳಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ಹೋಗಿ ಗುಣಮುಖರಾಗದೇ ಸಾವು ಬದುಕಿನ ನಡುವೆ ಹೋರಾಟ ನಡೆಸಿ ರಂಗಪ್ಪನ ಸನ್ನಿಧಿಗೆ ಬಂದವರಿಗೆ ಸ್ವಾಮಿಯ ಪವಾಡದಿಂದ ಗುಣಮುಖವಾದ ಅದೆಷ್ಟೋ ಉದಾಹರಣೆಗಳಿರುವುದರಿಂದ ರಂಗನಾಥ ಸ್ವಾಮಿಯನ್ನು ವಿಷ ಜಂತುಗಳ ಪರಿಹಾರಕ ಎಂತಲೂ ಕರೆಯುವುದುಂಟು. ಮನೆ, ಹೊಲ, ಗದ್ದೆಗಳಲ್ಲಿ ವಿಷ ಜಂತುಗಳು ಕಾಣಿಸಿಕೊಂಡಾಗ ಅಥವಾ ಕಚ್ಚಿದಾಗ ಈ ಭಾಗದ ಜನರಿಗೆ ಮೊದಲು ನೆನಪಾಗುವುದು ಹಾರನಕಣಿವೆ ರಂಗಪ್ಪ. ವಿಷ ಜಂತುಗಳು ಕಚ್ಚಿದಾಗ ಸ್ವಾಮಿಯ ಸನ್ನಿಧಿಗೆ ಬಂದು ಜಾತ್ರೆಯಲ್ಲಿ ಹುಳಗಳನ್ನು ಅರ್ಪಿಸುತ್ತೇವೆ ಎಂದು ಹರಕೆ ಕಟ್ಟಿಕೊಂಡು ಅಂಬಿನೋತ್ಸವ ದಿನದಂದು ಚಿನ್ನ, ಬೆಳ್ಳಿ, ತಾಮ್ರದ ಹಾವು, ಚೇಳು, ಜರಿಗಳನ್ನು ಭಕ್ತರು ಸರತಿ ಸಾಲಿನಲ್ಲಿ ನಿಂತು ಹುಂಡಿಯಲ್ಲಿ ಹಾಕಿ ಹರಕೆ ತೀರಿಸುವ ದೃಶ್ಯ ಗಮನ ಸೆಳೆಯುತ್ತದೆ.ಉತ್ತಮ ಮಳೆಯಾಗಿ ಸಮೃದ್ಧ ಫಸಲಿಗೆ ಹಾಗೂ ಆರೋಗ್ಯ ಸುಧಾರಣೆಗಾಗಿ ಭಕ್ತರು ಗೊನೆಗಟ್ಟಲೆ ಬಾಳೆಹಣ್ಣು ಸಕ್ಕರೆಯ ನೈವೇದ್ಯ ಮಾಡುವ ಮೂಲಕ ಮತ್ತೊಂದು ಹರಕೆಯನ್ನು ರಂಗನಾಥನಿಗೆ ಸಲ್ಲಿಸುತ್ತಾರೆ. ಭಕ್ತರು ತಂದ ಸಕ್ಕರೆ, ಬಾಳೆ ಹಣ್ಣನ್ನು ಹಸಿರು ಗಿಡಗಳ ಬುಡದಲ್ಲಿ ಬಾಳೆ ಎಲೆ ಹಾಕಿ ಅದರಲ್ಲಿ ಬಾಳೆ ಹಣ್ಣಿನ ರಸಾಯನ ಮಾಡಿ ಪೂಜೆ ಮಾಡಿದ ಬಳಿಕ ದಾಸಯ್ಯನಿಗೆ ನೀಡಿ ನಂತರ ಅಲ್ಲಿದ್ದ ಜನರಿಗೆ ಹಂಚುವುದು ಜಾತ್ರೆಯ ಮತ್ತೊಂದು ವಿಶೇಷತೆಯಾಗಿದೆ.
ತಿರುಪತಿಯ ಗೋವರ್ಧನ ಗಿರಿ ಮಾದರಿಯಲ್ಲಿ ಅಭಿವೃದ್ಧಿ: ರಂಗನಾಥ್
ರಂಗನಾಥಸ್ವಾಮಿ ಟ್ರಸ್ಟ್ ನ ಅಧ್ಯಕ್ಷ ಆರ್.ರಂಗನಾಥ್ ಮಾತನಾಡಿ, ರಂಗನಾಥ ಸ್ವಾಮಿ ದೇವಾಲಯವು ಕಾಡುಗೊಲ್ಲ ಸಮುದಾಯದ ಪುಣ್ಯ ಕ್ಷೇತ್ರವಾಗಿದ್ದರೂ ಕೂಡ ಸರ್ವಧರ್ಮಗಳ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ. ಜಾತ್ರೆಗೆ ವಿಶೇಷವಾಗಿ ಕೇರಳ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ದಿಂದಲೂ ಭಕ್ತರು ಆಗಮಿಸುವುದುಂಟು. ಪ್ರತಿ ಶನಿವಾರ ಹಾಗೂ ಅಮಾವಾಸ್ಯೆ ದಿನ ಸ್ವಾಮಿಗೆ ವಿಶೇಷ ಪೂಜೆ ನಡೆಯುತ್ತದೆ. ಮದುವೆ, ಉದ್ಯೋಗ ಹಾಗೂ ಸಂತಾನ ಫಲ ಕರುಣಿಸುವ ಜೊತೆಗೆ ಆರೋಗ್ಯ ಸಮಸ್ಯೆ ಪರಿಹರಿಸುತ್ತಾನೆ ಎಂಬುದು ಭಕ್ತರ ನಂಬಿಕೆಯಾಗಿದೆ. ಮುಂದೆ ಈ ದೇವಾಲಯವನ್ನು ತಿರುಪತಿಯ ಗೋವರ್ಧನ ಗಿರಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಅವಕಾಶವಿದೆ ಎಂದರು.