ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಜಿಲ್ಲೆಯ ಪ್ರಮುಖ ಜಲಾಶಯ, ಹಾರಂಗಿ ಹಿನ್ನೀರು ವ್ಯಾಪ್ತಿಯಲ್ಲಿ ಪ್ರವಾಸಿಗರು ಸೇರಿದಂತೆ ಕೆಲವು ಸ್ಥಳೀಯರು ಮೋಜು ಮಸ್ತಿಯಲ್ಲಿ ತೊಡಗಿರುವುದು ಸಾಮಾನ್ಯವಾಗಿದೆ. ಇದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಹಾರಂಗಿ ಹಿನ್ನೀರು ಪ್ರದೇಶವಾದ ಹೇರೂರು, ನಾಕೂರು ಶಿರಂಗಾಲ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾರ್ವಜನಿಕರು ಅನಧಿಕೃತವಾದ ಪ್ರವೇಶ ಮಾಡುವುದನ್ನು ಕಾವೇರಿ ನೀರಾವರಿ ನಿಗಮದಿಂದ ನಿಷೇಧಿಸಲಾಗಿದೆ. ಅಲ್ಲದೆ ಅಕ್ರಮವಾಗಿ ಪ್ರವೇಶಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಕೂಡ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದ್ದರೂ ಕೂಡ ಸಾರ್ವಜನಿಕರು ಇದಕ್ಕೆ ಕ್ಯಾರೇ ಅನ್ನುತ್ತಿಲ್ಲ.ಹಿನ್ನೀರು ವ್ಯಾಪ್ತಿಯಲ್ಲಿ ಅಕ್ರಮವಾಗಿ ಪ್ರವೇಶಿಸುವ ಮೂಲಕ ಇಲ್ಲಿ ಸಂಭ್ರಮಿಸುತ್ತಿದ್ದಾರೆ. ಅಲ್ಲದೆ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಇದರಿಂದ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ಸಾಮಾನ್ಯವಾಗಿ ಸಿಗುತ್ತಿವೆ. ಅಲ್ಲದೆ ಹಿನ್ನೀರಿನ ದಡ ಪ್ರದೇಶದಲ್ಲಿ ಅಡುಗೆ ತಯಾರಿ ಅಲ್ಲಿಯೇ ಊಟ ಮಾಡಿ ಅದರ ತ್ಯಾಜ್ಯಗಳನ್ನು ಅಲ್ಲೆ ಎಸೆದಿರುವುದು ಕೂಡ ಕಾಣಬಹುದಾಗಿದೆ.
ಇದಲ್ಲದೆ ಹಿನ್ನೀರಿಗೆ ವಾಹನಗಳನ್ನು ಇಳಿಸುವ ಮೂಲಕ ಅಲ್ಲೇ ಕೆಲವರು ಗಂಟಗಟ್ಟಲೆ ಕಾಲ ಕಳೆಯುತ್ತಿರುವುದು ಕಂಡುಬಂದಿದೆ. ಇದರಿಂದ ಇಲ್ಲಿ ಹೇಳುವವರಿಲ್ಲ. ಕೇಳುವವರಿಲ್ಲ ಎಂಬಂತಾಗಿದೆ. ಅಕ್ರಮ ಪ್ರವೇಶ ಮಾಡುವುದು ಮಾತ್ರವಲ್ಲದೆ ಕಾರು, ಜೀಪು ಹಾಗೂ ಬೈಕ್ ಗಳನ್ನು ಹಿನ್ನೀರಿನ ದಡಕ್ಕೆ ಇಳಿಸಿ ದುಸ್ಸಾಹಸ ಮಾಡುತ್ತಿರುವವರ ವಿರುದ್ಧ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.ಅಕ್ರಮ ಪಂಪ್ ಸೆಟ್ ಗಳು: ಹಾರಂಗಿ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಅಲ್ಲಲ್ಲಿ ಅಕ್ರಮವಾಗಿ ಪಂಪ್ ಸೆಟ್ ಗಳನ್ನು ಹಾಕುವ ಮೂಲಕ ದಿನಂ ಪ್ರತಿ ಹಿನ್ನೀರಿನಿಂದ ನೀರನ್ನು ತೆಗೆಯಲಾಗುತ್ತಿದೆ. ಕೆಲವರು ಹಿನ್ನೀರಿನಿಂದ ನೇರವಾಗಿ ತಮ್ಮ ಕಾಫಿ ತೋಟಗಳಿಗೆ ನೀರು ಸಿಂಪಡೆ ಮಾಡುತ್ತಿರುವ ಚಿತ್ರಣ ಸಾಮಾನ್ಯವಾಗಿದೆ. ಇನ್ನೂ ಕೆಲವರು ಇತರೆ ಚಟುವಟಿಕೆಗಳಿಗೆ ನೀರನ್ನು ತೆಗೆಯುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲೇ ನೀರು ತೆಗೆಯುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾದರೆ ಪರಿಸ್ಥಿತಿ ಹೇಗೆ ಎಂಬಂತಾಗಿದೆ.
ತ್ಯಾಜ್ಯಗಳ ರಾಶಿ : ಹಾರಂಗಿ ಜಲಾಶಯದ ನೀರನ್ನು ಕುಡಿಯುವುದು ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತದೆ. ಆದರೆ ಹಿನ್ನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಸದ ರಾಶಿಗಳು ಸೇರುತ್ತಿದೆ. ಇದರಿಂದ ನೀರಿನ ಗುಣಮಟ್ಟ ಕಳಪೆಯಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ಉಂಟಾಗಿದೆ. ಹಿನ್ನೀರು ವ್ಯಾಪ್ತಿಯಲ್ಲಿರುವ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಬೇಕಾದ ಅನಿವಾರ್ಯತೆ ಉಂಟಾಗಿದೆ.ಹಿನ್ನೀರು ಪ್ರದೇಶ ಸೇರಿದಂತೆ ಹಾರಂಗಿ ಜಲಾಶಯ ವ್ಯಾಪ್ತಿಯ ನಿರ್ಬಂಧಿತ ಪ್ರದೇಶದಲ್ಲಿ ಸಾರ್ವಜನಿಕರ ಅನಧಿಕೃತ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸಂಬಂಧ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದರೂ ಇಲ್ಲಿಗೆ ಸಾರ್ವಜನಿಕರು ಪ್ರವೇಶ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಹಾರಂಗಿ ಜಲಾಶಯದ ನಿಷೇಧಿತ ಪ್ರದೇಶಕ್ಕೆ ಸಾರ್ವಜನಿಕರು ತೆರಳುವಂತಿಲ್ಲ. ವಿಷಯವನ್ನು ಪೊಲೀಸರಿಗೆ ತಿಳಿಸಲಾಗುವುದು. ಸಾರ್ವಜನಿಕರು ಅನಧಿಕೃತವಾಗಿ ಅಲ್ಲಿ ತಿರುಗಾಡುವುದನ್ನು ತಡೆಯುವಂತೆ ಪೊಲೀಸರಿಗೆ ಮನವಿ ಮಾಡಲಾಗುವುದು. ನಮ್ಮ ಇಲಾಖೆ ಕಡೆಯಿಂದಲೂ ಸಿಬ್ಬಂದಿ ಕಳುಹಿಸಿ ಪರಿಶೀಲನೆ ನಡೆಸಲಾಗುವುದು. ತಪ್ಪಿತಸ್ಥರು ಕಂಡು ಬಂದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಾರಂಗಿ ಪುನರ್ವಸತಿ ವಿಭಾಗ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಹೇಳಿದರು.