ಕರ್ಕಶ ಶಬ್ದ ಮಾಡುವ ವಾಹನಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮದ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಅದ್ಯಾವುದನ್ನು ಲೆಕ್ಕಿಸದೆ ಕೆಲ ಯುವಕರು ತಮ್ಮ ಹುಚ್ಚಾಟ ಮುಂದುವರೆಸಿದ್ದಾರೆ.
ಬಿ.ರಾಮಪ್ರಸಾದ್ ಗಾಂಧಿ ಹರಪನಹಳ್ಳಿ
ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ನಗರದಲ್ಲಿ ಕೆಲವೊಂದು ಬೈಕ್‌ಗಳು ಹೊರಹೊಮ್ಮುತ್ತಿರುವ ಕರ್ಕಶ ಶಬ್ದದಿಂದ ನಾಗರಿಕರು ರೋಸಿ ಹೋಗಿದ್ದಾರೆ.ಕೆಲ ವಾಹನ ಸವಾರರು ಬೈಕ್‌ಗಳ ಸೈಲೆನ್ಸರ್ ಮಾರ್ಪಡಿಸಿಕೊಂಡು ಅತಿಯಾದ ಶಬ್ದ ಮಾಡಿಕೊಂಡು ಸಂಚರಿಸುವುದು ಸ್ಟೈಲ್ ಆಗಿ ಬಿಟ್ಟಿದೆ, ಜನನಿಬಿಡ ಪ್ರದೇಶಗಳು ಹಾಗೂ ವಸತಿ ಬಡಾವಣೆಗಳಲ್ಲಿ ಈ ರೀತಿಯ ಕರ್ಕಶ ಶಬ್ದದಿಂದ ವೃದ್ಧರು, ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಶಬ್ದ ಮಾಡುತ್ತ ರಸ್ತೆಗಳಲ್ಲಿ ಸಂಚರಿಸುವ ಬೈಕ್‌ಗಳಿಂದ ಏಕಾಏಕಿ ಕಠೋರ ಸದ್ದು ಕೇಳಿಬರುತ್ತಿದ್ದು, ಪಾದಚಾರಿಗಳು, ಇತರ ವಾಹನ ಸವಾರರು ಬೆಚ್ಚಿಬೀಳುವಂತಾಗಿದೆ. ಕೆಲ ಸಂದರ್ಭಗಳಲ್ಲಿ ಸವಾರರು ವಾಹನದ ನಿಯಂತ್ರಣ ಕಳೆದುಕೊಂಡು ಸಣ್ಣಪುಟ್ಟ ಅಪಘಾತಗಳಿಗೆ ಒಳಗಾಗುತ್ತಿರುವ ಘಟನೆಗಳು ನಡೆದಿವೆ.ಕರ್ಕಶ ಶಬ್ದ ಮಾಡುವ ವಾಹನಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮದ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಅದ್ಯಾವುದನ್ನು ಲೆಕ್ಕಿಸದೆ ಕೆಲ ಯುವಕರು ತಮ್ಮ ಹುಚ್ಚಾಟ ಮುಂದುವರೆಸಿದ್ದಾರೆ.
ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಹೊರಸೂಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸುವುದು, ದಂಡ ವಿಧಿಸುವುದು ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ, ಪಟ್ಟಣದ ಪ್ರಮುಖ ರಸ್ತೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ವಿಶೇಷ ವಾಹನ ತಪಾಸಣಾ ಕಾರ್ಯಾಚರಣೆ ನಡೆಸಿ ಮಾರ್ಪಾಡಿಸಿದ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡಿರುವ ಹಾಗೂ ನಿಯಮ ಉಲ್ಲಂಘಿಸುವ ಬೈಕ್ ಪತ್ತೆ ಹಚ್ಚಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.ಕರ್ಕಶ ಶಬ್ದಕ್ಕೆ ಕಡಿವಾಣ ಹಾಕುವ ಮೂಲಕ ಪಟ್ಟಣದಲ್ಲಿ ಶಾಂತಿ ಹಾಗೂ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ.
ಪೊಲೀಸ್ ಠಾಣೆ ದೂರ, ಯುವಕರ ಹುಚ್ಚಾಟ -ಬಸ್ ನಿಲ್ದಾಣ ಹಾಗೂ ಜನನಿಬಿಡ ಪ್ರದೇಶಗಳಿಂದ ಪೊಲೀಸ್ ಠಾಣೆ ದೂರದಲ್ಲಿರುವುದರಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ನಿಗಾ ಕಡಿಮೆಯಾಗಿದ್ದು, ಇದರಿಂದ ಕೆಲ ಯುವಕರು ಯಾವುದೇ ಭಯವಿಲ್ಲದೆ ಅತಿವೇಗ ಹಾಗೂ ಕರ್ಕಶ ಶಬ್ದದೊಂದಿಗೆ ವಾಹನ ಚಲಾಯಿಸುತ್ತಿದ್ದಾರೆ.
ಇದರ ಜತೆಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕರು ಬೈಕ್ ಚಲಾಯಿಸುವ ಪ್ರಕರಣಗಳೂ ಹೆಚ್ಚಾಗಿವೆ. ಒಂದೇ ಬೈಕ್‌ನಲ್ಲಿ ನಾಲ್ವರು ಸಂಚರಿಸುವುದು, ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದು ಸೇರಿದಂತೆ ಇತರೆ ಸಂಚಾರ ನಿಯಮಗಳ ಉಲ್ಲಂಘನೆಗೆ ಕಾರಣವಾಗಿದೆ.ಕರ್ಕಶ ಶಬ್ದ ಮಾಡುವ ಬೈಕ್ ಸವಾರರ ವಿರುದ್ಧ ವಿಶೇಷ ತಪಾಸಣೆ ನಡೆಸಿ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಎಸ್ಪಿ ಎಸ್.ಜಾಹ್ನವಿ ತಿಳಿಸಿದ್ದಾರೆ.ಹರಪನಹಳ್ಳಿಯಲ್ಲಿ ಕರ್ಕಶ ಶಬ್ದ ಮಾಡುವ ಬೈಕ್‌ಗಳ ಬಗ್ಗೆ ಗಮನಕ್ಕೂ ಬಂದಿದೆ. ಗಣೇಶ ಹಬ್ಬದ ಬಂದೋಬಸ್ತ್ ಹಿನ್ನೆಲೆ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಸಿಬ್ಬಂದಿಗಳು ನಿಗಾ ವಹಿಸಲಿದ್ದಾರೆ, ಮಾರ್ಪಡಿಸಿದ ಸೈಲೆನ್ಸರ್ ಅಳವಡಿಸಿಕೊಂಡು ನಿಯಮ ಉಲ್ಲಂಘಿಸುವ ವಾಹನಗಳನ್ನು ಪತ್ತೆಹಚ್ಚಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹರಪನಹಳ್ಳಿ ಡಿವೈಎಸ್ಪಿ ಸಂತೋಷ್ ಚವ್ಹಾಣ್ ತಿಳಿಸಿದ್ದಾರೆ.
ಪಟ್ಟಣದ ಮುಖ್ಯ ರಸ್ತೆಗಳಲ್ಲೇ ಒಂದೇ ಬೈಕ್‌ನಲ್ಲಿ ನಾಲ್ವರು ಯುವಕರು ಸಂಚರಿಸುವುದು, ಮಾರ್ಪಡಿಸಿದ ಸೈಲೆನ್ಸರ್‌ಗಳಿಂದ ಕರ್ಕಶ ಶಬ್ದ ಮಾಡುತ್ತ ಅತಿವೇಗದಲ್ಲಿ ವಾಹನ ಚಲಾಯಿಸುವುದು ಹೆಚ್ಚಾಗಿದೆ, ಸಂಚಾರ ನಿಯಮ ಉಲ್ಲಂಘಿಸುವ ಇಂತಹ ವಾಹನಗಳ ವಿರುದ್ಧ ಪೊಲೀಸರು ವಿಶೇಷ ತಪಾಸಣೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ಕೆ.ಶ್ರೀನಿವಾಸರಾವ್ ತಿಳಿಸಿದ್ದಾರೆ.