ಪ್ರಕರಣವೊಂದರಲ್ಲಿ ಪತಿಗೆ ಪದೇ ಪದೇ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಹಾಗೂ ಸುದೀರ್ಘ ಕಾಲ ಪ್ರತ್ಯೇಕ ವಾಸುತ್ತಿದ್ದ ಪತ್ನಿಯ ಧೋರಣೆ ಪರಿಗಣಿಸಿದ ಹೈಕೋರ್ಟ್, ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಕರಣವೊಂದರಲ್ಲಿ ಪತಿಗೆ ಪದೇ ಪದೇ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಹಾಗೂ ಸುದೀರ್ಘ ಕಾಲ ಪ್ರತ್ಯೇಕ ವಾಸುತ್ತಿದ್ದ ಪತ್ನಿಯ ಧೋರಣೆ ಪರಿಗಣಿಸಿದ ಹೈಕೋರ್ಟ್, ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ.

ವಿಚ್ಛೇದನ ಮಂಜೂರಾತಿಗೆ ನಿರಾಕರಿಸಿದ್ದ ಮೈಸೂರಿನ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ್ದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್.ಶಾಂತಿಭೂಷಣ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಪತ್ನಿಗೆ 17 ಲಕ್ಷ ರು. ಶಾಶ್ವತ ಜೀವನಾಂಶ ನಿಗದಿಪಡಿಸಿದ ನ್ಯಾಯಪೀಠ, ಈ ಮೊತ್ತವನ್ನು ತೀರ್ಪಿನ ಪ್ರತಿ ದೊರೆತ 8 ವಾರಗಳಲ್ಲಿ ಪಾವತಿಸಬೇಕು ಎಂದು ಮೇಲ್ಮನವಿದಾರನಿಗೆ ಸೂಚಿಸಿದೆ.

ಸಾಕ್ಷ್ಯಾಧಾರಗಳು ಹಾಗೂ ದಾಖಲೆಗಳಿಂದ ಮೇಲ್ಮನವಿದಾರ ಪತಿಗೆ ಪತ್ನಿ ಕಿರುಕುಳ ನೀಡಿರುವುದು ದೃಢಪಡುತ್ತದೆ. ಸೂಕ್ತ ಕಾರಣವಿಲ್ಲದೆ ಪತಿಯನ್ನು ತ್ಯಜಿಸಿದ ಪತ್ನಿ, 2017ರಿಂದಲೂ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಪತ್ನಿ ಮತ್ತೊಂದು ವ್ಯಕ್ತಿಯೊಂದಿಗಿರುವ ದೃಶ್ಯಗಳನ್ನು ಮಕ್ಕಳೇ ನೋಡಿದ್ದಾರೆ. ಆ ವಿಷಯವನ್ನು ಪತಿಗೆ ತಿಳಿಸದಂತೆ ಪತ್ನಿ ತನ್ನ ಮಕ್ಕಳಿಗೆ ಎಚ್ಚರಿಸಿದ್ದಾರೆ. ಹೀಗಿದ್ದರೂ ವಿಚ್ಛೇದನ ಮಂಜೂರು ಮಾಡದ ಕೌಟುಂಬಿಕ ನ್ಯಾಯಾಲಯದ ಆದೇಶ ನ್ಯಾಯಸಮ್ಮತವಾಗಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಬಾಕ್ಸ್,,,,

ಏನಿದು ಪ್ರಕರಣ?

ಮೇಲ್ಮನವಿದಾರ ಮತ್ತು ಆಕೆಯ ಪತ್ನಿ 2004ರ ಡಿ.20ರಂದು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮದುವೆಯಾದ 1 ವರ್ಷದ ಬಳಿಕ ಭಿನ್ನಾಭಿಪ್ರಾಯ ಮೂಡಿ, ಮನೆಯಲ್ಲಿ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಇದರಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪತಿ, ಪತ್ನಿ ಅನಗತ್ಯವಾಗಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ. ಮಕ್ಕಳನ್ನು ಬಿಟ್ಟು ಮನೆ ತೊರೆದು ಹೋಗುತ್ತಿದ್ದಾರೆ. ಕಾರು ತೆಗೆದುಕೊಂಡು ತಾನು ಬಯಸಿದ ಸ್ಥಳಕ್ಕೆ ಹೋಗುತ್ತಿದ್ದಾರೆ. ಪ್ರಶ್ನಿಸಿದರೆ ಸಬೂಬು ಹೇಳುತ್ತಾರಲ್ಲದೆ, ಬೆದರಿಕೆ ಸಹ ಹಾಕುತ್ತಾರೆ. ಮತ್ತೊಂದೆಡೆ ತನ್ನ ವಿರುದ್ಧ ಸುಳ್ಳು ದೂರು ನೀಡಿ, ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನನ್ನ ಮತ್ತು ಮಕ್ಕಳೊಂದಿಗೆ ಬದುಕದೇ, ಪ್ರತ್ಯೇಕವಾಗಿ ವಾಸವಿದ್ದಾರೆ. ಈ ಎಲ್ಲ ಕಾರಣ ಪರಿಗಣಿಸಿ ವಿಚ್ಛೇದನ ಮಂಜೂರು ಮಾಡಬೇಕೆಂದು ಕೋರಿದ್ದರು.

ಆ ಮನವಿ ತಿರಸ್ಕರಿಸಿ ಮೈಸೂರಿನ ಕೌಟುಂಬಿಕ ನ್ಯಾಯಾಲಯವು 2019ರ ಫೆ.11ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಪತಿ 2019ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.