ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಉಪ ನೋಂದಣಿ ಕಚೇರಿಯಲ್ಲಿ ಸಬ್ ರಿಜಿಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮೇಲೆ ಅನಾವಶ್ಯಕವಾಗಿ ಕೆಲವರು ಅನಾಮಧೇಯ ಪತ್ರಗಳನ್ನು ಬರೆದು ಕಿರುಕುಳ ನೀಡುತ್ತಿರುವುದು ಖಂಡನೀಯ ಎಂದು ಕುಶಾಲನಗರದ ವಕೀಲರು ಹೇಳಿಕೆ ನೀಡಿದ್ದಾರೆ.ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವಕೀಲರಾದ ಎಸ್ ಕೆ ಮಂಜುನಾಥ್ ಮತ್ತಿತರರು ಕುಶಾಲನಗರದ ಉಪ ನೋಂದಣಿ ಕಚೇರಿಯಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೆಲವರು ಅನಾವಶ್ಯಕ ಕಿರುಕುಳ ನೀಡುವುದು ಮತ್ತು ಬೇನಾಮಿ ಹೆಸರಿನಲ್ಲಿ ದೂರುಗಳನ್ನು ನೀಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಕಚೇರಿಯಲ್ಲಿ ಸಬ್ ರಿಜಿಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ವರ್ತಿಸುತ್ತಿದ್ದು ಯಾವುದೇ ರೀತಿಯ ಅನಾನುಕೂಲಗಳು ಕಂಡುಬಂದಿಲ್ಲ. ಕಚೇರಿಗೆ ಕಾರ್ಯನಿಮಿತ್ತ ಆಗಮಿಸುವ ಸಾರ್ವಜನಿಕರೊಂದಿಗೆ ಅವರಿಗೆ ಅಗತ್ಯವಾಗಿರುವ ಕೆಲಸಗಳನ್ನು ನಿರ್ವಹಿಸುತ್ತಿದ್ದು ಉತ್ತಮ ಸೇವೆ ನೀಡುತ್ತಿದ್ದಾರೆ. ಕೆಲವು ಅನಾಮಧೇಯ ವ್ಯಕ್ತಿಗಳು ವಿನಾಕಾರಣ ಕಚೇರಿಗೆ ಬಂದು ಅಧಿಕಾರಿಗೆ ಮತ್ತು ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ಲಾಕ್ಮೈಲ್ ಮಾಡುವ ಮೂಲಕ ಅಧಿಕಾರಿಯನ್ನು ಕೆಲವು ದಂದೆಕೋರರು ಬೆದರಿಸುತ್ತಿದ್ದಾರೆ ಎಂದು ವಕೀಲರಾದ ಕೆ ಸಿ ಶಿವಮೂರ್ತಿ ಅವರು ತಿಳಿಸಿದ್ದಾರೆ.ಇಂತಹ ಬೇನಾಮಿ ವ್ಯಕ್ತಿಗಳ ಮೇಲೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಹಲವು ಇಲಾಖೆಗಳಿಗೆ ಅನಾಮಧೇಯ ಪತ್ರಗಳ ಮೂಲಕ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭ ಕುಶಾಲನಗರದ ವಕೀಲರಾದ ಎಚ್.ಸಿ. ಮೋಹನ್ ಕುಮಾರ್, ಎಸ್ ಜೆ ನವೀನ್ ಕುಮಾರ್ ಹಾಗೂ ಸಾರ್ವಜನಿಕರಾದ ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.