ಸಾರಾಂಶ
ರೈತರು ಕಾರ್ಮಿಕರ ಮನೆ ಮುರುಕ ಮೈಕೋ ಫೈನಾನ್ಸ್ ದಾಳಿಯನ್ನು ಹತ್ತಿಕ್ಕಲು ವಿಳಂಬವಿಲ್ಲದೆ ಕ್ರಮ ಜರುಗಿಸುವ ಮೂಲಕ ಬಡವರ ಬದುಕನ್ನು ಉಳಿಸುವ ಕೆಲಸ ಸರಕಾರದಿಂದಾಗಬೇಕು - ಆರ್.ಬಿ. ಪಾಟೀಲ
ಹಾನಗಲ್ಲ: ರೈತರು ಕಾರ್ಮಿಕರ ಮನೆ ಮುರುಕ ಮೈಕೋ ಫೈನಾನ್ಸ್ ದಾಳಿಯನ್ನು ಹತ್ತಿಕ್ಕಲು ವಿಳಂಬವಿಲ್ಲದೆ ಕ್ರಮ ಜರುಗಿಸುವ ಮೂಲಕ ಬಡವರ ಬದುಕನ್ನು ಉಳಿಸುವ ಕೆಲಸ ಸರಕಾರದಿಂದಾಗಬೇಕು, ಕಿರುಕುಳ ನೀಡಿ ವಸೂಲಿ ದಂಧೆ ನಡೆಸುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಬಿ. ಪಾಟೀಲ ಆಗ್ರಹಿಸಿದರು.
ಸೋಮವಾರ ಹಾನಗಲ್ಲ ತಾಲೂಕು ತಹಸೀಲ್ದಾರ್ ಮೂಲಕ ರಾಜ್ಯ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿ ಮಾತನಾಡಿದ ಅವರು, ಬಡತನ ರೇಖೆಯಿಂದ ಕೆಳಗಿರುವ, ಬ್ಯಾಂಕುಗಳಿಂದ ಸಾಲ ಸಿಗದೇ ಅನಿವಾರ್ಯವಾಗಿ ಮೈಕ್ರೋ ಫೈನಾನ್ಸ್ ಸಾಲಕ್ಕೆ ಮೊರೆ ಹೋದವರಿಗೆ ಹಿಂಸೆ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳು ಅಮಾನವೀಯವಾಗಿ ಸಾಲಗಾರರನ್ನು ಕಾಣುತ್ತಿವೆ.
ಹಗಲಿರುಳೆನ್ನದೆ ಮನೆಯ ಮೇಲೆ ದಾಳಿ ಮಾಡಿ ಹಣ ವಸೂಲಿಗೆ ನಿಯಮ ಬಾಹಿರ ಕ್ರಮಕ್ಕೆ ಮುಂದಾಗಿವೆ. ಇಲ್ಲಿ ಸಾಲ ಪಡೆದವರು ತಾವು ಪಡೆದ ಸಾಲಕ್ಕಿಂತ ಹೆಚ್ಚು ಹಣವನ್ನು ಬಡ್ಡಿ, ಮರಿ ಬಡ್ಡಿ ಹೆಸರಿನಲ್ಲಿ ಮರು ಪಾವತಿ ಮಾಡಿದ್ದಾರೆ. ಆದರೆ ಈ ಕಂಪನಿಗಳು ಮಾನಸಿಕ ಹಿಂಸೆ ನೀಡುತ್ತಿರುವುದರಿಂದ ಇಡೀ ರಾಜ್ಯಾದ್ಯಂತ ಆತ್ಮಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ.
ಇದಕ್ಕೆಲ್ಲ ಕಡಿವಾಣ ಹಾಕಿ ರೈತರು ಕಾರ್ಮಿಕರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಅನಧಿಕೃತ ಮೈಕ್ರೋ ಫೈನಾನ್ಸ ಕಂಪನಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಕಾನೂನು ರೀತಿಯಲ್ಲಿ ಪರವಾನಗಿ ಪಡೆದ ಕಂಪನಿಗಳಿಗೆ ನಿಯಮ ಬಾಹೀರ ಸಾಲ ವಸೂಲಿಗೆ ಕಡಿವಾಣ ಹಾಕಬೇಕು. ಸಾಲ ಪಡೆದವರು ಮನೆ ಬಿಟ್ಟು ಹೋಗಿ ಮಾನ ಕಾಯ್ದುಕೊಳ್ಳುತ್ತಿರುವುದು ಅಮಾನವೀಯ. ಸಾಲಗಾರರನ್ನು ನಿಂದಿಸುವುದು, ಮಹಿಳೆಯರು ಶಾಲೆಯ ಓದುವ ಮಕ್ಕಳೊಂದಿಗೆ ಊರು ಬಿಟ್ಟು ಹೋಗುತ್ತಿರುವುದು ಶೋಚನೀಯ. ಇಂಥಹವರ ಸಹಾಯಕ್ಕೆ ನಿಲ್ಲುವುದರ ಜೊತೆಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಚಿಗಳ್ಳಿ ಮಾತನಾಡಿ, ಮಹಿಳೆಯರನ್ನು ಮಾನಸಿಕವಾಗಿ ಹಿಂಸಿಸುವ ಈ ಮೈಕ್ರೋ ಫೈನಾನ್ಸನಿಂದ ಮುಕ್ತಿ ಸಿಗದಿದ್ದರೆ ಸರಕಾರದ ವಿರುದ್ಧ ಬೀದಿಗಳಿದು ಹೋರಾಟ ಅನಿವಾರ್ಯ. ಸಾಲಕ್ಕೆ ಬಡ್ಡಿ ಪ್ರತಿ ಬಡ್ಡಿಯಂತೆ ಹೆಚ್ಚು ಹಣ ಪಡೆದರೂ ಮತ್ತೆ ಹಣಕ್ಕಾಗಿ ಹಿಂಸೆ ಕೊಡುವ ಈ ಕಂಪನಿಗಳು ನಾಗರಿಕ ಸಮಾಜದಲ್ಲಿ ವ್ಯವಹಾರಕ್ಕೆ ಅನರ್ಹವಾದವುಗಳಾಗಿವೆ.
ಅನಿವಾರ್ಯವಾಗಿ ಇಡೀ ತಾಲೂಕಿನ ಮಹಿಳಾ ಸಂಘಟನೆಗಳು ಬೀದಿಗಿಳಿಯುವ ಮೊದಲು ಸರಕಾರ ಈ ಸಮಸ್ಯೆಯಿಂದ ಸಾಲಗಾರ ರೈತರು ಕಾರ್ಮಿಕರನ್ನು ರಕ್ಷಿಸುವಂತೆ ಮನವಿ ಮಾಡಿದರು. ಜಿಲ್ಲಾ ಉಪಾಧ್ಯಕ್ಷ ಎಂ.ವಿ.ಪಡೆಪ್ಪನವರ, ಸಲೀಮಅಹಮ್ಮದ ಸಸಿವಳ್ಳಿ, ಬಿ.ಎಂ. ಪಾಟೀಲ, ಜ್ಯೋತಿ ಚಿಗಳ್ಳಿ, ಕಟ್ಟಿಮನಿ, ಗುತ್ತೆಮ್ಮ ವರ್ದಿ, ಶೋಭಾ ಹಿತ್ತಲಮನಿ, ರೇಣುಕಾ ಕಟ್ಟಿಮನಿ, ಮಂಜಪ್ಪ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಪವಿತ್ರ ಸಂಕಿನಮಠ ಮೊದಲಾದವರಿದ್ದರು.