ಸಾರಾಂಶ
ಶಿವಮೊಗ್ಗ: ಶರಾವತಿ ಸಂತ್ರಸ್ತರ, ಬಗರ್ ಹುಕುಂ ಸಾಗುವಳಿದಾರರಿಗೆ ಅರಣ್ಯ ಮತ್ತು ಕಂದಾಯ ಇಲಾಖೆಯವರು ನೀಡುತ್ತಿರುವ ಕಿರುಕುಳವನ್ನು ಖಂಡಿಸಿ ನೋಟಿಸ್ ಕೊಡುವುದನ್ನು ವಿರೋಧಿಸಿ ಫೆ.21ರಂದು ಬೆಳಗ್ಗೆ 10 ಗಂಟೆಗೆ ಭದ್ರಾವತಿಯ ರಂಗಪ್ಪ ಸರ್ಕಲ್ ನಿಂದ ತಹಸೀಲ್ದಾರ್ ಕಚೇರಿ ಮತ್ತು ಡಿಎಫ್‌ಒ ಕಚೇರಿವರೆಗೆ ಬೃಹತ್ ಪ್ರತಿಭಟನೆಯ ಮೂಲಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಗರ್‌ಹುಕುಂ ಸಾಗುವಳಿ ಮತ್ತು ಶರಾವತಿ ಮುಳುಗಡೆ ರೈತರ ಹಿತರಕ್ಷಣಾ ಸಮಿತಿಯ ಮುಖ್ಯ ಸಂಚಾಲಕ ಹಾಗೂ ರೈತ ಮುಖಂಡ ಎಚ್.ಆರ್.ಬಸವರಾಜಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾವತಿ ತಾಲೂಕಿನ ಸುತ್ತಮುತ್ತಲ ಅನೇಕ ಗ್ರಾಮಗಳ ರೈತರಿಗೆ ಅರಣ್ಯ ಇಲಾಖೆಯವರು ನೋಟಿಸ್ ಕೊಡುವುದರ ಜೊತೆಗೆ ಕಿರಕುಳ ನೀಡುತ್ತಿದ್ದಾರೆ. ದೌರ್ಜನ್ಯದಿಂದ ಜೆಸಿಬಿ ಯಂತ್ರಗಳ ಮೂಲಕ ಸಾಗುವಳಿದಾರರ ಜಮೀನುಗಳಲ್ಲಿರುವ ಅಡಕೆ ಮರಗಳನ್ನು ಕಿತ್ತೆಸೆಯುತ್ತಿದ್ದಾರೆ. ಇದನ್ನು ರೈತ ಸಂಘ ಮತ್ತು ಸಾಗುವಳಿದಾರರು ತೀವ್ರವಾಗಿ ಖಂಡಿಸುತ್ತೇವೆ ಎಂದರು.1956ರಲ್ಲಿ ಶರಾವತಿ ಮುಳುಗಡೆ ರೈತರಿಗೆ ಭದ್ರಾವತಿಯ ಸುತ್ತಮುತ್ತಲ ಊರುಗಳ ಸರ್ವೆ ನಂಬರ್‌ಗಳಲ್ಲಿ ಜಮೀನುಗಳನ್ನು ನೀಡಲಾಗಿತ್ತು. ಆ ಜಮೀನಿನಲ್ಲಿ ಸಂತ್ರಸ್ತರು ಕಳೆದ ೬೫ ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಾಳು ಕಟ್ಟಿಕೊಂಡಿದ್ದಾರೆ. ರೈತರ ಹೆಸರಿಗೆ ಪಹಣಿ ಕೂಡ ಇದೆ. ಆದರೆ, ಹಲವು ವರ್ಷಗಳ ನಂತರ ಈಗ ಆ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಪಹಣಿಯಲ್ಲಿ ತಿದ್ದುಪಡಿ ಮಾಡಿದ್ದಾರೆ. ರೈತರಿಗೆ ಜಮೀನು ಕೊಡುವಾಗ ಎಲ್ಲವೂ ಸರಿ ಇದ್ದು, ಈಗ ಅದು ಹೇಗೆ ಬದಲಾಗುತ್ತದೆ. ರೈತರು ಎಲ್ಲಿಗೆ ಹೋಗಬೇಕು ? ಸರ್ಕಾರವೇ ಈ ಜಾಗವನ್ನು ಕೊಟ್ಟಿದ್ದು, ರೈತರೇನು ಒತ್ತುವರಿ ಮಾಡಿಕೊಂಡಿಲ್ಲ. ಈಗ ಅರಣ್ಯ ಇಲಾಖೆಯವರು ಆ ರೈತರಿಗೆ ನೋಟಿಸ್ ಕೊಡುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದರ ವಿರುದ್ಧ ಈಗ ರೈತರೆಲ್ಲ ಸಂಘಟಿತರಾಗುತ್ತಿದ್ದೇವೆ. ಇದು ಪಕ್ಷಾತೀತ ಸಂಘಟನೆಯಾಗಿದೆ. ಸಂತ್ರಸ್ತರು ಎಲ್ಲಾ ಪಕ್ಷದಲ್ಲಿಯೂ ಇದ್ದಾರೆ. ಹಿತರಕ್ಷಣಾ ಸಮಿತಿ ಮೂಲಕ ಫೆ. ೨೧ ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸುಮಾರು ೪ ಸಾವಿರಕ್ಕೂ ಅಧಿಕ ಸಂತ್ರಸ್ತ ರೈತರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಈ ಬೃಹತ್ ಪ್ರತಿಭಟನೆಗೆ ರೈತರು, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಶಾರದಾ ಪೂರ್ಯಾನಾಯ್ಕ್, ಬಿ.ಕೆ.ಸಂಗಮೇಶ್, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಲ್ಕೀಶ್ ಬಾನು ಸೇರಿದಂತೆ ಹಲವು ರಾಜಕೀಯ ಮುಖಂಡರನ್ನು ಆಹ್ವಾನಿಸಲಾಗಿದೆ. ಈ ಎಲ್ಲಾ ಜನಪ್ರತಿನಿಧಿಗಳು ಪ್ರತಿಭಟನೆಗೆ ಬಂದು ರೈತರ ಸಮಸ್ಯೆಗಳನ್ನು ಆಲಿಸಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ಬಗರ್‌ಹುಕುಂ ಸಾಗುವಳಿದಾರರ ಮತ್ತು ಶರಾವತಿ ಮುಳುಗಡೆ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಜಗದೀಶ್ ಗೌಡ, ದಾನೇಶಪ್ಪ, ಸತೀಶ್, ಕುಮಾರಪ್ಪ, ಕುಬೇಂದ್ರಪ್ಪ, ರುದ್ರೇಶ್, ಹನುಮಂತು, ಮಂಜುನಾಥ್, ಸಿದ್ದಲಿಂಗಪ್ಪ ಮತ್ತಿತರರು ಇದ್ದರು.