ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ
ಮಂಗಗಳನ್ನು ಹಿಡಿಯುತ್ತಿದ್ದಾರೆ ಎಂಬ ಸುಳ್ಳು ಮಾಹಿತಿಯನ್ನಾಧರಿಸಿ ತಾಲೂಕಿನ ಇಕ್ಕೇರಿಯಲ್ಲಿ ಕೃಷಿಕರ ಮೇಲೆ ದೌರ್ಜನ್ಯ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳ ನಡೆ ಖಂಡಿಸಿ ಕಚೇರಿ ಎದುರು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ಅಡಕೆ ಬೆಳೆಗಾರರು ಘೇರಾವ್ ಮಾಡಿದರು.ಕಳೆದ ಜುಲೈನಲ್ಲಿ ಬಾಳೆಹಳ್ಳಿ ಗ್ರಾಮದಲ್ಲಿ ಮಂಗಗಳನ್ನು ಹಿಡಿದ ಆರೋಪದ ಮೇಲೆ ಅಡಕೆ ಬೆಳೆಗಾರರೊಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಮಂಗಳವಾರ ಇಕ್ಕೇರಿ ಗ್ರಾಮದಲ್ಲಿ ಮಂಗ ಹಿಡಿಯಲು ಹೋದ ಕೃಷಿಕರೊಬ್ಬರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದರ್ಪ ತೋರಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲೂಕಿನಾದ್ಯಂತ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದೆ. ಅಡಕೆ, ಬಾಳೆ, ತೆಂಗು, ಕಾಫಿ ಮೊದಲಾದ ಬೆಳೆ ಬೆಳೆಗಾರರ ಕೈ ಸೇರುವ ಮೊದಲೇ ಮಂಗಗಳ ಪಾಲಾಗುತ್ತಿವೆ. ವನ್ಯಜೀವಿ ಪಟ್ಟಿಗೆ ಮಂಗಗಳೂ ಸೇರಿರುವುದರಿಂದ ಅವುಗಳನ್ನು ಹಿಡಿಯಲು ಮುಂದಾದರೆ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಮಂಗ ಮಾತ್ರವಲ್ಲದೆ ಹಲವೆಡೆ ಕಾಡುಕೋಣ, ಕಾಡೆಮ್ಮೆ, ಕಾಡುಹಂದಿಗಳು ಕೃಷಿಭೂಮಿಗೆ ನುಗ್ಗಿ ಫಸಲು ನಾಶ ಮಾಡುತ್ತಿವೆ. ಇಂತಹ ವನ್ಯಜೀವಿಗಳನ್ನು ಅರಣ್ಯ ಇಲಾಖೆ ಹಿಡಿದು ಕಾಡಿಗೆ ಸಾಗಿಸಬೇಕು. ಇಲ್ಲದಿದ್ದರೆ ಬೆಳೆಗಾರರಿಗೆ ಕಾಡುಪ್ರಾಣಿ ಹಿಡಿಯಲು ಅನುಮತಿ ನೀಡಬೇಕು ಎಂದು ಅವರು ಆಗ್ರಹಿಸಿದರು.ಬೆಳೆಗಾರರ ಅಹವಾಲಿಗೆ ಸ್ಪಂದಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಇಂತಹ ಘಟನೆ ಮುಂದೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ಕಾಡು ಪ್ರಾಣಿಗಳ ಹಾವಳಿಯಿಂದ ಆದ ನಷ್ಟಕ್ಕೆ ಪರಿಹಾರ ಕೋರಿ ಸಲ್ಲಿಸಿದ ಎಲ್ಲರ ಅರ್ಜಿಯನ್ನೂ ಕಳುಹಿಸಿದ್ದು ಪರಿಹಾರ ಮೊತ್ತ ಬಂದ ತಕ್ಷಣ ವಿತರಿಸಲಾಗು ವುದು. ಜಿಲ್ಲಾ ವನ್ಯಜೀವಿ ಸಂರಕ್ಷಣಾಧಿಕಾರಿಗಳೊಂದಿಗೆ ಮಾತನಾಡಿ, ಸಾಗರದಲ್ಲಿಯೇ ಬೆಳೆಗಾರರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಲು ಸಮಯ ನಿಗದಿಗಾಗಿ ಕೋರುತ್ತೇನೆ ಎಂದರು.
ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ನಿರ್ದೇಶಕರಾದ ಅವಿನಾಶ್, ನಾಗಾನಂದ, ಪ್ರಮುಖರಾದ ಮಲ್ಲಿ ಕಾರ್ಜುನ ಹಕ್ರೆ, ಯು.ಎಚ್.ರಾಮಪ್ಪ, ಕೆ.ಎನ್.ವಿ.ಗಿರಿ, ಆರ್.ಎಸ್.ಗಿರಿ, ರವೀಶ್ ಕುಮಾರ್, ಸತೀಶ್ ಲಿಂಗದಹಳ್ಳಿ, ಅಶೋಕ್ ದೊಂಬೆ, ಗಜಾನನ, ಲಕ್ಷ್ಮೀ ನಾರಾಯಣ ಮುಂಡಿಗೇಸರ, ಲಿಂಗಪ್ಪಗೌಡರು, ಹು.ಭಾ.ಅಶೋಕ, ಗಿರೀಶ್ ಹಕ್ರೆ, ಅಮರ, ಗುಂಡಿಭಟ್ಟರು, ನಾಗೇಂದ್ರ ಭಟ್, ರಾಜಶೇಖರ್ ಹಂದಿಗೋಡು, ಶೇಷಗಿರಿ ಬೇಳೂರು, ಅಕ್ಷಯ, ಭೋಜರಾಜ ಇದ್ದರು.