ಕಾಂಗ್ರೆಸ್‌ನಿಂದ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ: ಬಿಜೆಪಿ ಆರೋಪ

| Published : Apr 13 2024, 01:01 AM IST

ಕಾಂಗ್ರೆಸ್‌ನಿಂದ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ: ಬಿಜೆಪಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದೆ. ಇದನ್ನು ಖಂಡಿಸುತ್ತೇವೆ. ಮುಂದೆ ಇಂತಹ ಘಟನೆ ಮರುಕಳಿಸಿದರೆ ಪ್ರತಿಭಟನೆ ಕೂಡ ನಡೆಸಬೇಕಾಗುತ್ತದೆ ಎಂದು ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕಾಂಗ್ರೆಸ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದೆ. ಇದನ್ನು ಖಂಡಿಸುತ್ತೇವೆ. ಮುಂದೆ ಇಂತಹ ಘಟನೆ ಮರುಕಳಿಸಿದರೆ ಪ್ರತಿಭಟನೆ ಕೂಡ ನಡೆಸಬೇಕಾಗುತ್ತದೆ ಎಂದು ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಸಾಮಾಜಿಕ ಜಾಲತಾಣದಲ್ಲಿ ಹಳೆ ವೀಡಿಯೋ ಫಾರ್ವರ್ಡ್ ಆಗಿದ್ದು, ರಾಜ್ಯ ರೈತ ಮೋರ್ಚಾದ ಕಾರ್ಯಕಾರಿಣಿ ಯಮುನಾ ಚೆಂಗಪ್ಪ, ಕಾಂಗ್ರೆಸ್‌ಗೆ ಪಾಕಿಸ್ತಾನದಿಂದ ಹಣ ಬರುತ್ತಿದೆ ಎಂದು ಫಾರ್ವಡ್ ಮಾಡಿದ್ದಕ್ಕೆ ಅವರ ಮೇಲೆ 107 ದೂರು ದಾಖಲಿಸಲಾಗುತ್ತದೆ. ಅಲ್ಲದೆ ರಾತ್ರೋ ರಾತ್ರಿ ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ. ವೈಯಕ್ತಿಕ ಹತಾಶೆ ಮನೋಭಾವನೆಯಿಂದ ಬಿಜೆಪಿಯ ಕಾರ್ಯಕರ್ತರ ಮೇಲೆ ದೂರು ದಾಖಲಿಸಲಾಗುತ್ತಿದೆ ಎಂದರು.ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಕುಶಾಲನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಮಾಡಿ ನಮಾಜ್ ಮಾಡಲಾಗಿದೆ. ಇದನ್ನು ಕೇಳುವವರಿಲ್ಲ. ಈ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅನುಮತಿ ಪಡೆದುಕೊಂಡಿದ್ದಾರೆಯೇ? ಅವರ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರು ಅನುದಾನ ಇಲ್ಲದೆ ಕೊರಗುವಂತಾಗಿದೆ. ಆದರೆ ಕೊಡಗಿನ ಶಾಸಕರು 250 ಕೋಟಿ ರುಪಾಯಿ ತಂದಿದ್ದೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಕೇಂದ್ರದ ಯೋಜನೆಯಾದ ಅಮೃತ್ 1 ಹಾಗೂ ಅಮೃತ್ 2 ಯೋಜನೆಯಡಿ ವಿರಾಜಪೇಟೆ ಕುಡಿಯುವ ನೀರು ಯೋಜನೆಗೆ 58 ಕೋಟಿ ರು., ಸೋಮವಾರಪೇಟೆಗೆ 15 ಕೋಟಿ ರು. ಬಂದಿದ್ದು, ಇದನ್ನೇ ತಮ್ಮ ಯೋಜನೆ ಎಂದು ವಿರಾಜಪೇಟೆ ಶಾಸಕರು ಸುಳ್ಳು ಹೇಳುತ್ತಿದ್ದಾರೆ. ಈ ಯೋಜನೆಗೆ ನಮ್ಮ ಸರ್ಕಾರದ ಅವಧಿಯಲ್ಲಿಯೇ ಆಡಳಿತಾತ್ಮಕ ಅನುಮೋದನೆ ದೊರಕಿತ್ತು ಎಂದ ಬೋಪಯ್ಯ, ದಾಖಲೆ ಪ್ರತಿಯನ್ನು ಪ್ರದರ್ಶನ ಮಾಡಿದರು.

* ಕಾಮಗಾರಿಯಲ್ಲಿ ಬದಲಾವಣೆ

ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ನಿಧಿಯಿಂದ 149 ಕೋಟಿ ರುಪಾಯಿ ಯೋಜನೆಯ ಕಾಮಗಾರಿಯಲ್ಲಿ ಕಾಂಗ್ರೆಸ್ ಸರ್ಕಾರ ಬದಲಾವಣೆ ಮಾಡಿದ್ದು, ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಲಾಗಿದೆ. ಗೋಣಿಕೊಪ್ಪ ಬಸ್ ನಿಲ್ದಾಣ ಕಾಮಗಾರಿಗೆ ಬಿಜೆಪಿ ಅವಧಿಯಲ್ಲೇ ಆದೇಶವಾಗಿತ್ತು. ಆದರೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿದೆ ಎಂದರು.

ಭಾಗಮಂಡಲದಲ್ಲಿ ಹೊಸ ಕಾಮಗಾರಿ ಮಾಡಬೇಕಾದರೆ ಅಷ್ಠಮಂಗಲ ಪ್ರಶ್ನೆ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಅಲ್ಲದೆ ಇಲ್ಲಿನ ಅಭಿವೃದ್ಧಿಗೆ ಸ್ಥಳೀಯರ ತಕರಾರು ಕೂಡ ಇದೆ. ಆದರೆ ಈಗ ಟೆಂಡರ್ ಕೂಡ ಕರೆಯದೆ ಭಾಗಮಂಡಲದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಾಡಾನೆ ಹಾವಳಿ ತಡೆಗಟ್ಟಲು ನಮ್ಮ ಸರ್ಕಾರದ ಅವಧಿಯ ಸಂದರ್ಭದಲ್ಲಿ ಸುಮಾರು 150 ಕೋಟಿ ರು. ರೈಲ್ವೆ ಬ್ಯಾರಿಕೇಡ್‌ಗೆ ನೀಡಲಾಗಿದೆ. ಈ ಸಾಲಿನ ಬಜೆಟ್‌ನಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ 120 ಕೋಟಿ ರು.ನಲ್ಲಿ ಎಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ ಎಂದು ಪ್ರಶ್ನಿಸಿದ ಬೋಪಯ್ಯ, ಈ ಹಣವನ್ನು ಗ್ಯಾರಂಟಿ ಯೋಜನೆಗೆ ವರ್ಗಾಯಿಸಲಾಗಿದೆಯೇ ಎಂದು ಕೇಳಿದರು.

* ಅಲ್ಪಸಂಖ್ಯಾತರಿಗೆ ಅನುದಾನ

ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಈಗಿನ ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿ ಅನುದಾನವನ್ನು ವಿಕೇಂದ್ರೀಕೃತ ಮಾಡಿದೆ. ಅಲ್ಲದೆ ಅಲ್ಪಸಂಖ್ಯಾತರಿಗೆ ಅನುದಾನ ನೀಡುತ್ತಿದೆ ಎಂದು ಆರೋಪಿಸಿದರು.

ಸೋಮವಾರಪೇಟೆ ಆಸ್ಪತ್ರೆಯಲ್ಲಿ 12 ವೈದ್ಯರು ಇದ್ದರು. ಆದರೆ ಈಗ ಇಬ್ಬರು ಮಾತ್ರ ಇದ್ದಾರೆ. ಜಿಲ್ಲೆಯಲ್ಲಿ ಪಿಡಿಒಗಳ‌ ಕೊರತೆ ಇದೆ. ಜನಪ್ರತಿನಿಧಿಗಳು ಏನು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸೋಮವಾರಪೇಟೆ ಟರ್ಫ್ ಮೈದಾನ ಉದ್ಘಾಟನೆಗೆ ಐದು ಮಂದಿ ಭಾರತೀಯ ಹಾಕಿ ಆಟಗಾರರನ್ನು ಕರೆಸಿ ಸನ್ಮಾನಿಸಲು ನಿರ್ಧರಿಸಲಾಗಿತ್ತು. ಆದರೆ ಈಗಿನ ಶಾಸಕರು ತಮ್ಮ 20 ಲಕ್ಷ ರು. ಅನುದಾನದಲ್ಲಿ ಬೋರ್ವೆಲ್ ಹಾಕಿಸಿ ಉದ್ಘಾಟನೆ ಮಾಡಿದ್ದಾರೆ. ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಭ್ರಷ್ಟಚಾರ ನಡೆಯುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಶಾಸಕರು ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಏ.14 ರಂದು ಮೈಸೂರಿಗೆ ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದಾರೆ. ಕೊಡಗಿನಿಂದ ನೂರಕ್ಕೂ ಅಧಿಕ ಬಸ್‌ಗಳಲ್ಲಿ ಹತ್ತು ಸಾವಿರ ಮಂದಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಪ್ರಮುಖರಾದ ಮಹೇಶ್ ಜೈನಿ, ನಾಗೇಶ್ ಕುಂದಲ್ಪಾಡಿ, ನೆಲ್ಲಚಂಡ ಕಿರಣ್, ಸುಬ್ರಮಣಿ ಉಪಧ್ಯಾಯ ಹಾಜರಿದ್ದರು.