ಸಾರಾಂಶ
ಹುಬ್ಬಳ್ಳಿ:
ಧಾರವಾಡ ಜಿಲ್ಲೆಯ "ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ "ದ (ಆರ್‌ಬಿಎಸ್‌ಕೆ) ವೈದ್ಯರ ಕಿರುಕುಳ, ಬೆದರಿಕೆಯಿಂದ ತನ್ನನ್ನು ರಕ್ಷಿಸುವಂತೆ ಕೋರಿ ಮಹಿಳಾ ಸಿಬ್ಬಂದಿ (ನೇತ್ರ ಸಹಾಯಕಿ) ಸಲ್ಲಿಸಿದ ದೂರನ್ನು ವಿಚಾರಣೆ ಮಾಡುವಲ್ಲಿ ವಿಳಂಬ ಮಾಡಿದ ಜಿಲ್ಲಾ ಆರೋಗ್ಯ ಇಲಾಖೆಯ ವಿರುದ್ಧ "ಕರ್ನಾಟಕ ಮಹಿಳಾ ಆಯೋಗ " ಕೆಂಡಾಮಂಡಲವಾಗಿದೆ."ಮಹಿಳಾ ಸಿಬ್ಬಂದಿಗೆ ಆರ್‌ಬಿಎಸ್‌ಕೆ ವೈದ್ಯರ ಕಿರುಕುಳ " ಶೀರ್ಷಿಕೆಯಡಿ ಕನ್ನಡಪ್ರಭದಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿದ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ಶುಕ್ರವಾರ ಸಂಜೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿಕಲಾ ಪಾಟೀಲ್ ಹಾಗೂ ಆರ್‌ಸಿಎಚ್‌ಒ ಡಾ. ಸುಜಾತಾ ಹಸವಿಮಠ ಅವರಿಗೆ ಕರೆಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನವೆಂಬರ್ 5ರಂದೇ ದೂರು ಸಲ್ಲಿಸಿದ್ದರೂ ಈ ವರೆಗೆ ಯಾಕೆ ವಿಚಾರಣೆ ಮಾಡಿಲ್ಲ ಮತ್ತು ತಪ್ಪಿತಸ್ಥರ ಮೇಲೆ ಕ್ರಮ ಕೈಕೊಂಡಿಲ್ಲ? ಹಲವು ವರ್ಷಗಳಿಂದ ಆ ಮಹಿಳೆಯ ಮೇಲೆ ನಡೆಯುತ್ತಿರುವ ಕಿರುಕುಳವನ್ನು ಅಲ್ಲಿನ ತಾಲೂಕು ವೈದ್ಯಾಧಿಕಾರಿಯೇ ತಪ್ಪಿಸಬೇಕಿತ್ತು. ಅವರಿಂದ ಆಗಿಲ್ಲ ಎನ್ನುವ ಕಾರಣಕ್ಕೆ ನಿಮ್ಮ ಬಳಿ ಬಂದು ನ್ಯಾಯ ಬೇಡಿ ಲಿಖಿತವಾಗಿ ದೂರು ಸಲ್ಲಿಸಿದ್ದಾಗ್ಯೂ ನೀವು ನಿರ್ಲಕ್ಷ್ಯ ಮಾಡಿದ್ದೀರಿ. ನಿಮ್ಮಿಂದ ಅಮಾಯಕರಿಗೆ ನ್ಯಾಯ ಸಿಗಲು ಹೇಗೆ ಸಾಧ್ಯ? ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು "ಈ ಪ್ರಕರಣವನ್ನು ವಿಚಾರಣೆ ಮಾಡಿ ವರದಿ ಸಲ್ಲಿಸುವಂತೆ ತಾಲೂಕು ವೈದ್ಯಾಧಿಕಾರಿಗೆ ಸೂಚಿಸಿದ್ದೆವು. ಅಷ್ಟರೊಳಗೆ ದೂರುದಾರಳಾದ ಶ್ರೀದೇವಿ ಮೇಟಿ ಮಾಧ್ಯಮಗಳ ಬಳಿ ಹೋಗಿದ್ದಾರೆ " ಎಂದು ವಿವರಣೆ ನೀಡಿದಾಗ, ಕೆರಳಿಕೆಂಡವಾದ ಡಾ. ನಾಗಲಕ್ಷ್ಮಿ, ಇಂಥ ಪ್ರಕರಣಗಳು ಅತ್ಯಂತ ಸೂಕ್ಷ್ಮ. ನಿಮ್ಮಿಂದಲೂ ನ್ಯಾಯ ಸಿಗುವ ವಿಶ್ವಾಸ ಇಲ್ಲದಾದಾಗ ಮಾಧ್ಯಮ ಅಷ್ಟೇ ಅಲ್ಲ ನ್ಯಾಯಾಲಯಕ್ಕೂ ಹೋಗುವ ಹಕ್ಕು ಅವರಿಗಿದೆ. ನೀವೂ ಕೂಡಾ ಮಹಿಳೆಯರು, ನಿಮಗೇ ಇಂಥ ನೋವು ಆಗಿದ್ದರೆ ಏನು ಮಾಡುತ್ತಿದ್ದಿರಿ? ನೀವು ಏನು ಮಾಡುತ್ತೀರೋ ನಮಗೆ ಗೊತ್ತಿಲ್ಲ, ನೊಂದ ಮಹಿಳಾ ಸಿಬ್ಬಂದಿಗೆ ಅನ್ಯಾಯವಾದರೆ ನಾವು ಸುಮ್ಮನೇ ಕೂಡ್ರುವುದಿಲ್ಲ. ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮುಂದಿನ ವಿಚಾರ ನಿಮಗೆ ಬಿಟ್ಟಿದ್ದು ಎಂದು ಎಚ್ಚರಿಸಿದ್ದಾರೆ.ಧೈರ್ಯ ತುಂಬಿದ ಅಧ್ಯಕ್ಷೆ:
ಬಳಿಕ ದೂರುದಾರೆ ನೇತ್ರ ಸಹಾಯಕಿ ಶ್ರೀದೇವಿ ಮೇಟಿ ಅವರಿಗೆ ಕರೆಮಾಡಿದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ನಿನಗೆ ಅನ್ಯಾಯವಾಗಲು ಬಿಡುವುದಿಲ್ಲ. ನಿನ್ನ ಜತೆ ಮಹಿಳಾ ಆಯೋಗ, ಧಾರವಾಡ ಜಿಲ್ಲಾ ಆಡಳಿತ ಸೇರಿದಂತೆ ಸರ್ಕಾರವೇ ಇರುತ್ತದೆ. ಯಾವುದೇ ಸಂದರ್ಭದಲ್ಲಿ ವಿಶ್ವಾಸ ಕಳೆದುಕೊಂಡು ದುಡುಕಿನ ನಿರ್ಧಾರ ಕೈಕೊಳ್ಳಬೇಡ ಎಂದು ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.ಈ ಮಧ್ಯ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಕೂಡ ''''ಕನ್ನಡಪ್ರಭ'''' ವರದಿಯನ್ನು ಗಮನಿಸಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ.
ಇಂದು ''''ಕನ್ನಡಪ್ರಭ''''ದಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿ ಡಿಎಚ್‌ಒ, ಆರ್‌ಸಿಎಚ್‌ಒ ಅವರಿಗೆ ದೂರವಾಣಿಯಲ್ಲಿ ಮಾತಾಡಿ ಪ್ರಕರಣದ ಗಂಭೀರತೆ ಕುರಿತು ಎಚ್ಚರಿಕೆ ನೀಡಿರುವೆ. ಅದೇ ಕಾಲಕ್ಕೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಾಳೆಯೇ ಪತ್ರ ಬರೆಯುತ್ತೇನೆ. ಅಮಾಯಕ ಮಹಿಳೆಯರಿಗೆ ರಕ್ಷಣೆ ನೀಡುವುದು, ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.-ನೇತ್ರ ಸಹಾಯಕಿಗೆ ವೈದ್ಯರು ಕಿರುಕುಳ ನೀಡಿದ ಪ್ರಕರಣದ ಸಮಗ್ರ ತನಿಖೆಗೆ ಆರ್‌ಸಿಎಚ್‌ಒ ನೇತೃತ್ವದಲ್ಲಿ ಐವರು ಜಿಲ್ಲಾ ಮಟ್ಟದ ಅಧಿಕಾರಿಗಳ ತನಿಖಾ ಸಮಿತಿ ರಚಿಸಲಾಗಿದೆ. ನೊಂದ ಮಹಿಳೆಯ ವಿವರಣೆ, ಟಿಎಚ್‌ಒ ಹಾಗೂ ಅಲ್ಲಿನ ವೈದ್ಯರ ವಿಚಾರಣೆ ನಡೆಸಿ ವರದಿ ಸಲ್ಲಿಸಿಲು ಸಮಿತಿಗೆ ಏಳು ದಿನಗಳ ಗಡುವು ನೀಡಲಾಗಿದೆ ಎಂದು ಧಾರವಾಡ ಡಿಎಚ್‌ಒ ಡಾ. ಶಶಿಕಲಾ ಪಾಟೀಲ್ ಹೇಳಿದರು.