ಮನುಷ್ಯರಾಗಿ ಬದುಕು ಕಟ್ಟಿಕೊಳ್ಳುವುದು ತುರ್ತು ಅಗತ್ಯ

| Published : Nov 09 2024, 01:15 AM IST

ಸಾರಾಂಶ

ಚಿತ್ರದುರ್ಗ: ಜಾತಿಗಳಾಗಿ ವಿಘಟನೆ ಆಗುವ ಬದಲು ಎಲ್ಲರೂ ಮೊದಲು ಮನುಷ್ಯರಾಗಿ ಪರಸ್ಪರ, ಸ್ನೇಹದಿಂದ ಬದುಕು ಕಟ್ಟಿಕೊಳ್ಳೋಣವೆಂದು ಸಮಾಜ ಕಲ್ಯಾಣಾಧಿಕಾರಿ ನಾಗೇಂದ್ರಪ್ಪ ತಿಳಿಸಿದರು.

ಚಿತ್ರದುರ್ಗ: ಜಾತಿಗಳಾಗಿ ವಿಘಟನೆ ಆಗುವ ಬದಲು ಎಲ್ಲರೂ ಮೊದಲು ಮನುಷ್ಯರಾಗಿ ಪರಸ್ಪರ, ಸ್ನೇಹದಿಂದ ಬದುಕು ಕಟ್ಟಿಕೊಳ್ಳೋಣವೆಂದು ಸಮಾಜ ಕಲ್ಯಾಣಾಧಿಕಾರಿ ನಾಗೇಂದ್ರಪ್ಪ ತಿಳಿಸಿದರು. ತಾಲೂಕಿನ ಬೊಮ್ಮಕ್ಕನಹಳ್ಳಿಯಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಪೊಲೀಸ್ ಇಲಾಖೆ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ ಕುರಿತು ಶುಕ್ರವಾರ ಆಯೋಜಿಸಿದ್ದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತಾನಾಡಿದರು,

ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿರುವುದಿಲ್ಲ. ವ್ಯಕ್ತಿ ಬೆಳೆದ ನಂತರ ಜಾತಿ ವ್ಯವಸ್ಥೆ ಅಡಿಯಲ್ಲಿ ಬದುಕಲು ಆರಂಭಿಸುತ್ತಾನೆ. ಸಮಾಜದಲ್ಲಿ ಜಾತಿಗೆ ಅನುಗುಣವಾಗಿ ಸಂಸ್ಕೃತಿಯು ಸಹ ಬೆಳೆದಿದೆ. ಇವುಗಳ ನಡುವಿನ ಮೂಢನಂಬಿಕೆಗೆ ಜನರು ಮಾರುಹೋಗಿದ್ದಾರೆ. ಹಾಗಾಗಿ ಕಂದಾಚಾರಗಳನ್ನು ಬದಿಗೆ ಒತ್ತಿ ಭಾರತ ಸಂವಿಧಾನದ ಕಾನೂನುಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕೆಂದು ತಿಳಿಸಿದರು. ಶತಮಾನಗಳಿಂದಲೂ ದಲಿತರ ಮೇಲೆ ಸಾಕಷ್ಟು ದೌರ್ಜನಗಳು ನಡೆಯುತ್ತಿವೆ. ಪ್ರಕರಣಗಳು ದಾಖಲಾಗುತ್ತಲೇ ಇವೆ. ಇವುಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾದರೆ ಕಾನೂನಿನ ಅರಿವು ಹಾಗೂ ಶಿಕ್ಷಣದ ಮಹತ್ವವನ್ನು ನಾವು ತಿಳಿದುಕೊಳ್ಳಬೇಕಿದೆ. ಮಕ್ಕಳಿಗೆ ಶಿಕ್ಷಣದ ಜ್ಞಾನವನ್ನು ತುಂಬಿದರೆ ಜಾತಿಯ ವೈಷಮ್ಯಗಳು ಅವರಲ್ಲಿ ಬೇರೂರುವುದಿಲ್ಲ ಎಂದು ಹೇಳಿದರು. ಎಸ್ಸಿ ಎಸ್ಟಿ ಸಮುದಾಯದವರನ್ನು ಮೇಲ್ಜಾತಿ ವರ್ಗದವರು ಗ್ರಾಮದಿಂದ ಬಹಿಷ್ಕಾರ ಹಾಕುವುದು ಕಾನೂನುಬಾಹಿರ. ಇಂತಹ ಅಪರಾಧಗಳಿಗೆ ಕಾನೂನಿನಲ್ಲಿ ತಕ್ಕ ಶಿಕ್ಷೆಗಳಿವೆ. ಹಾಗಾಗಿ ಸಮಾಜದಲ್ಲಿ ಪ್ರೀತಿ ವಿಶ್ವಾಸದಿಂದ ಸಹೋದರತ್ವ ಭ್ರಾತೃತ್ವದಿಂದ ಬದುಕಬೇಕು ಎಂದು ತಿಳಿಸಿದರು. ತುರುವನೂರು ಪೊಲೀಸ್ ಠಾಣೆಯ ಪಿಎಸ್‌ಐ ತಳವಾರು ಮಾತನಾಡಿ, ಜಾತಿ ವ್ಯವಸ್ಥೆಯಲ್ಲಿರುವ ಮೂಢನಂಬಿಕೆಯಿಂದ ದೂರವಿದ್ದಷ್ಟು ಜ್ಞಾನದ ಅರಿವು ಹೆಚ್ಚಾಗುತ್ತದೆ. ಶಿಕ್ಷಣದ ಜೊತೆ ಜೊತೆಗೆ ಕಾನೂನಿನ ಅರಿವು ಸಹ ತಿಳಿದುಕೊಳ್ಳೋದು ಅವಶ್ಯಕ. ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ನಾವೆಲ್ಲರೂ ಕೂಡ ಕಾನೂನಿಗೆ ಗೌರವಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು. ಕೂನಬೇವು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ್ ಮಾತನಾಡಿ, ದಲಿತರ ಮೇಲೆ ದಬ್ಬಾಳಿಕೆ ಮಾಡದೆ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಕಾನೂನನ್ನು ಪ್ರತಿಯೊಬ್ಬರು ಗೌರವಿಸುತ್ತಾ ಸಮಾನತೆಯನ್ನು ಸಮಾಜಕ್ಕೆ ಸಾರುತ್ತಾ ಹೋದರೆ ಈ ದೇಶದಲ್ಲಿ ಸಂಘರ್ಷಗಳೇ ಇರುವುದಿಲ್ಲ ಎಂದು ಹೇಳಿದರು. ಮಡಿಲು ಸಂಸ್ಥೆಯ ಕಾರ್ಯದರ್ಶಿ ಆನಂದ್.ಡಿ ಮಾತನಾಡಿ, ಭಾರತ ದೇಶದಲ್ಲಿ ನಡೆಯುವ ಜಾತಿ ಜಾತಿಗಳ ಸಂಘರ್ಷಗಳು ಮತ್ತೊಂದು ದೇಶದಲ್ಲಿಲ್ಲ. ಭಾರತ ದೇಶದ ಸಂವಿಧಾನದಲ್ಲಿ ಸರ್ವರಿಗೂ ಸಮಾನವಾಗಿ ಬದುಕಲು ಅವಕಾಶವನ್ನು ಕಲ್ಪಿಸಲಾಗಿದೆ. ಆ ನಿಟ್ಟಿನಲ್ಲಿ ಸಂಘರ್ಷಗಳಿಗೆ ಎಡೆ ಮಾಡಿಕೊಡದೆ ಸಂವಿಧಾನವನ್ನು ಗೌರವಿಸುತ್ತಾ ಜೀವನವನ್ನು ನಡೆಸಬೇಕಾಗಿದೆ ಎಂದರು.ಸಮಾಜ ಕಲ್ಯಾಣ ಇಲಾಖೆಯ ಮುಸ್ಟೂರಪ್ಪ, ದೀಪಾ, ಕೂನಬೇಕು ಗ್ರಾಪಂ ಅಧ್ಯಕ್ಷ ಮಂಜಣ್ಣ, ಮಾಜಿ ಅಧ್ಯಕ್ಷೆ ಕವಿತಮ್ಮ, ಸದಸ್ಯರಾದ ಜಯಣ್ಣ, ಪ್ರಕಾಶ್ ಮಂಜುಳಮ್ಮ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ, ಖಜಾಂಚಿ ಪ್ರದೀಪ್, ನಿರ್ದೇಶಕ ದ್ಯಾಮ್ ಕುಮಾರ್ ಇದ್ದರು.