ಮಹಿಳಾ ಸಿಬ್ಬಂದಿಗೆ ಆರ್‌ಬಿಎಸ್‌ಕೆ ವೈದ್ಯರ ಕಿರುಕುಳ

| Published : Nov 07 2024, 11:58 PM IST

ಸಾರಾಂಶ

ಗೈಡ್‌ಲೈನ್ಸ್ ಪ್ರಕಾರ ವೈದ್ಯರು ತಾವು ಗುರುತಿಸಿದ 4ಡಿಎಸ್‌ ಹಾಗೂ ಫಾಲೋಅಪ್‌ಗಳನ್ನು ಸ್ವಾಸ್ಥ್ಯ ಕಿರಣ ಆನ್‌ಲೈನ್‌ನಲ್ಲಿ ತಾವೇ ಭರ್ತಿ ಮಾಡಬೇಕು. ನನ್ನ ಕೆಲಸದ ಹೊರತಾಗಿ ವೈದ್ಯರ ಈ ಕೆಲಸವನ್ನೂ ನನ್ನ ಮೇಲೆ ಬಲವಂತವಾಗಿ ಹೇರಿಕೆ ಮಾಡುತ್ತಿದ್ದಾರೆ.

ಹುಬ್ಬಳ್ಳಿ:

ವೈದ್ಯರ ಕಾಟಾಚಾರದ ಸೇವೆಯಿಂದಾಗಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್‌ಬಿಎಸ್‌ಕೆ) ಧಾರವಾಡ ಜಿಲ್ಲೆಯಲ್ಲಿ ಕುಟುಂತ್ತ ಸಾಗಿದ್ದು, ಮಾನಸಿಕ ಕಿರುಕುಳ ಮತ್ತು ಕೆಲಸ ಬಿಡಿಸುವ ಬೆದರಿಕೆಗೆ ರೋಸಿ ಹೋಗಿರುವ ನೇತ್ರ ಸಹಾಯಕಿಯೊಬ್ಬರು ನ್ಯಾಯಬೇಡಿ ವೈದ್ಯರ ವಿರುದ್ಧ ಮೇಲಧಿಕಾರಿಗೆ ಲಿಖಿತ ದೂರು ನೀಡಿರುವುದು ಬೆಳಕಿಗೆ ಬಂದಿದೆ.

ಈ ದೂರಿನ ಪ್ರತಿ ''''ಕನ್ನಡಪ್ರಭ''''ಕ್ಕೆ ಲಭ್ಯವಾಗಿದ್ದು, ಹುಬ್ಬಳ್ಳಿ ನಗರ ವ್ಯಾಪ್ತಿಯ ಆರ್‌ಬಿಎಸ್‌ಕೆ ತಂಡ-3ರ ವೈದ್ಯರ ಮಾನಸಿಕ ಕಿರುಕುಳ, ಕೆಲಸ ಬಿಡಿಸುವ ಬೆದರಿಕೆಗೆ ರೋಸಿ ಹೋಗಿರುವ ಅಲ್ಲಿನ ನೇತ್ರ ಸಹಾಯಕಿ ಶ್ರೀದೇವಿ ಮೇಟಿ ಎಂಬುವರು ಈ ಯೋಜನೆಯ ಜಿಲ್ಲಾ ಅಧಿಕಾರಿ ಡಾ. ಸುಜಾತಾ ಹಸವಿಮಠ ಅವರಿಗೆ ಇದೇ ನ. 5ರಂದು ಲಿಖಿತ ದೂರು ಸಲ್ಲಿಸಿ, ಈ ಕುರುಕುಳ, ಹಿಂಸೆ, ಬೆದರಿಕೆಯಿಂದ ಪಾರು ಮಾಡುವಂತೆ ಕೋರಿದ್ದಾರೆ.

"ಗೈಡ್‌ಲೈನ್ಸ್ ಪ್ರಕಾರ ವೈದ್ಯರು ತಾವು ಗುರುತಿಸಿದ 4ಡಿಎಸ್‌ ಹಾಗೂ ಫಾಲೋಅಪ್‌ಗಳನ್ನು ಸ್ವಾಸ್ಥ್ಯ ಕಿರಣ ಆನ್‌ಲೈನ್‌ನಲ್ಲಿ ತಾವೇ ಭರ್ತಿ ಮಾಡಬೇಕು. ನನ್ನ ಕೆಲಸದ ಹೊರತಾಗಿ ವೈದ್ಯರ ಈ ಕೆಲಸವನ್ನೂ ನನ್ನ ಮೇಲೆ ಬಲವಂತವಾಗಿ ಹೇರಿಕೆ ಮಾಡುತ್ತಿದ್ದಾರೆ. ಅದಕ್ಕೆ ವಿರೋಧಿಸಿದಾಗ ತಾಲೂಕು ವೈದ್ಯಾಧಿಕಾರಿಗಳಿಗೆ ಇಲ್ಲಸಲ್ಲದ ಚಾಡಿ ಹೇಳಿ ಕಿರುಕುಳ ನೀಡುತ್ತಿದ್ದಾರೆ. ಮೇಲಾಗಿ ಕೆಲಸದಿಂದ ತೆಗೆಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ನಾನು ಮಾನಸಿಕವಾಗಿ ಕುಗ್ಗಿಹೋಗಿದ್ದೇನೆ. ಈ ವೈದ್ಯರಿಗೆ ತಿಳಿಹೇಳಿ ನನ್ನನ್ನು ಒತ್ತಡ, ಕಿರುಕುಳ, ಬೆದರಿಕೆಯಿಂದ ಪಾರುಮಾಡಬೇಕು " ಎಂದು ಶ್ರೀದೇವಿ ಲಿಖಿತ ದೂರಿನಲ್ಲಿ ಬೇಡಿಕೊಂಡಿದ್ದಾರೆ.

15 ವರ್ಷಗಳ ಹಿಂಸೆ:

ಕಳೆದ 15 ವರ್ಷಗಳಿಂದ ಈ ರಾಷ್ಟ್ರೀಯ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಶ್ರೀದೇವಿ ಎರಡು ಮಕ್ಕಳ ತಾಯಿ. ಎರಡನೇ ಬಾರಿ ಗರ್ಭಿಣಿಯಾದಾಗ ಕೆಲಸದ ಸ್ಥಳದಲ್ಲೇ ರಕ್ತವಾಂತಿ ಮಾಡಿಕೊಂಡು ಒದ್ದಾಡುತ್ತಿದ್ದರೂ ಸಹೋದ್ಯೋಗಿ ವೈದ್ಯರು ಇವರ ನೆರವಿಗೆ ಬಾರದೇ ಗೇಲಿ ಮಾಡಿದರಂತೆ. ನಾಲ್ಕಾರು ವರ್ಷಗಳಿಂದ ನಿತ್ಯವೂ ಒಂದಿಲ್ಲ ಒಂದು ರೀತಿಯ ಮಾನಸಿಕ ಕುರುಕಳ, ಏಕವಚನದಲ್ಲಿ ಮಾತನಾಡುವುದು, ಹೊತ್ತು ಮೀರಿ ಕೆಲಸ ಮಾಡಿಸಿಕೊಳ್ಳುವುದು, ಹೀಯಾಳಿಸುವುದು ಮತ್ತು ಕೆಲಸ ಬಿಡಿಸುವ ಬೆದರಿಕೆಯಿಂದ ನೊಂದಿರುವ ಇವರು ಅನಿವಾರ್ಯವಾಗಿ ಈಗ ಮೇಲಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಹಳ್ಳ ಹಿಡಿದ ಯೋಜನೆ:

ಜಿಲ್ಲೆಯಲ್ಲಿ ಒಟ್ಟು 15 ಆರ್‌ಬಿಎಸ್‌ಕೆ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ತಂಡದಲ್ಲಿ ಇಬ್ಬರು ವೈದ್ಯರು, ಇಬ್ಬರು ಸ್ಟಾಪ್ ನರ್ಸ್‌, ಓರ್ವ ನೇತ್ರ ಸಹಾಯಕ ಸೇರಿದಂತೆ ಐದು ಸಿಬ್ಬಂದಿ ಇರುತ್ತಾರೆ. ಈ ತಂಡ ಶಾಲೆಗಳಿಗೆ ತೆರಳಿ ಮಕ್ಕಳ ದೃಷ್ಟಿ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡುವುದು, ಹೆಚ್ಚಿನ ಚಿಕಿತ್ಸೆ ಅಥವಾ ಆಪರೇಷನ್‌ ಮಾಡಿಸುವುದಿದ್ದರೆ ಜಿಲ್ಲಾ ಆಸ್ಪತ್ರೆಗೆ ಕಳಿಸುವ ಕಾರ್ಯ ಮಾಡುತ್ತದೆ.

ಆದರೆ, ಬಹುತೇಕ ವೈದ್ಯರು ಇಲ್ಲಿ ಸೇವೆ ಮಾಡುವ ಜತೆಗೆ ಸ್ವಂತ ಕ್ಲಿನಿಕ್‌, ಬೇರೆ ಬೇರೆ ಆಸ್ಪತ್ರೆಗಳಿಗೆ ವಿಸಿಟಿಂಗ್‌ ಡಾಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದರಿಂದ ಅವರು ಮಾಡಬೇಕಿರುವ ಕೆಲಸ-ಕಾರ್ಯವೆಲ್ಲವನ್ನೂ ಸ್ಟಾಪ್‌ ನರ್ಸ್‌ ಮತ್ತು ನೇತ್ರ ಸಹಾಯಕರ ಹೆಗಲಿಗೆ ಬೀಳುತ್ತಿದೆ. ಮಕ್ಕಳ ವೈದ್ಯಕೀಯ ವಿವರಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಲೂ ಈ ವೈದ್ಯರಿಗೆ ಪುರುಸೊತ್ತಿಲ್ಲ. ವಾರಕ್ಕೊಮ್ಮೆ ಕಚೇರಿಗೆ ಬಂದು ಹಾಜರಿಗೆ ಸಹಿ ಮಾಡುವವರೂ ಇದ್ದಾರೆ. ಸಂಬಳ ಮಾತ್ರ ಪೂರ್ಣಪ್ರಮಾಣದಲ್ಲಿ ಜಮೆ ಆಗುತ್ತಿದೆ.

ಅವರವರ ಕಾರ್ಯಗಳನ್ನು ಅವರಿಂದಲೇ ಮಾಡಿಸಿ ಅವಾಂತರಗಳನ್ನು ತಪ್ಪಿಸಬೇಕಿದ್ದ ತಾಲೂಕು ಆರೋಗ್ಯಾಧಿಕಾರಿಗಳು ಆ ವೈದ್ಯರ ರಾಜಕೀಯ ಪ್ರಭಾವಕ್ಕೆ ಮಣಿದು ನರ್ಸ್‌, ನೇತ್ರ ಸಹಾಯಕರ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸುತ್ತಿದ್ದರಿಂದ ಈ ರಾಷ್ಟ್ರೀಯ ಕಾರ್ಯಕ್ರಮ ಅಕ್ಷರಶಃ ಹಳ್ಳಹಿಡಿದಿದೆ.

ನೇತ್ರ ಸಹಾಯಕಿ ಆಗಿರುವ ಶ್ರೀದೇವಿ ಮೇಟಿ ಎಂಬವರು ಮಂಗಳವಾರ ಸಂಜೆ ನನ್ನ ಕಚೇರಿಗೆ ಬಂದು ತನಗೆ ಆಗುತ್ತಿರುವ ಮಾನಸಿಕ ಕಿರುಕುಳ, ಬೆದರಿಕೆ ಬಗ್ಗೆ ಲಿಖಿತ ದೂರು ನೀಡಿದ್ದು, ಇಡೀ ಪ್ರಕರಣವನ್ನು ಸಮಗ್ರ ತನಿಖೆ ಮಾಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಕೊಳ್ಳುತ್ತೇವೆ ಎಂದು ಡಿಆರ್‌ಸಿಎಚ್‌ಒ ಡಾ. ಸುಜಾತಾ ಹಸವಿಮಠ

ಹೇಳಿದರು.