ರೈಲಿನಲ್ಲಿ ಯುವತಿಗೆ ಕಿರುಕುಳ: ಆರೋಪಿ ಬಂಧನ

| Published : Aug 30 2024, 01:04 AM IST

ಸಾರಾಂಶ

ಯುವತಿ ಮೊಬೈಲಿನಲ್ಲಿ ಆತನ ಫೋಟೋವನ್ನು ಕ್ಲಿಕ್ಕಿಸಿ ರೈಲ್ವೆ ಆ್ಯಪ್‌ಗೆ ಅಪ್‌ಲೋಡ್ ಮಾಡಿದ್ದರು. ಅದನ್ನೇ ದೂರು ಆಗಿ ಸ್ವೀಕರಿಸಿದ ರೈಲ್ವೆ ಇಲಾಖೆ, ತಕ್ಷಣ ಮಣಿಪಾಲ ಪೊಲೀಸರಿಗೆ ವರ್ಗಾಯಿಸಿದರು. ಕೂಡಲೇ ಪೊಲೀಸರು ಕಾರ್ಯಾಚರಣೆಗಿಳಿದರು.

ಕನ್ನಡಪ್ರಭ ವಾರ್ತೆ ಉಡುಪಿಬೆಂಗಳೂರಿನಿಂದ ಬರುತ್ತಿದ್ದ ರೈಲಿನಲ್ಲಿ ಉಡುಪಿಯ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು 24 ಗಂಟೆಗಳಲ್ಲಿ ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಭಟ್ಕಳದ ಮುಹಮ್ಮದ್ ಶುರೈಂ (22) ಎಂದು ಗುರುತಿಸಲಾಗಿದೆ.

ಭಾನುವಾರ ಬೆಳಗ್ಗೆ ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಬರುತ್ತಿತ್ತು. ರೈಲು ಮೂಲ್ಕಿ ಬಳಿ ತಲುಪಿದಾಗ ಆರೋಪಿ, ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಉಡುಪಿಯ ನಿವಾಸಿ ಯುವತಿಗೆ ಪದೇಪದೆ ಲೈಂಗಿಕ ಕಿರುಕುಳ ನೀಡಿದ್ದ. ಯುವತಿ ಮೊಬೈಲಿನಲ್ಲಿ ಆತನ ಫೋಟೋವನ್ನು ಕ್ಲಿಕ್ಕಿಸಿ ರೈಲ್ವೆ ಆ್ಯಪ್‌ಗೆ ಅಪ್‌ಲೋಡ್ ಮಾಡಿದ್ದರು.ಅದನ್ನೇ ದೂರು ಆಗಿ ಸ್ವೀಕರಿಸಿದ ರೈಲ್ವೆ ಇಲಾಖೆ, ತಕ್ಷಣ ಮಣಿಪಾಲ ಪೊಲೀಸರಿಗೆ ವರ್ಗಾಯಿಸಿದರು. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು, ಯುವತಿ ಪ್ರಯಾಣಿಸಿದ್ದ ಬೋಗಿಯ ಎಲ್ಲ ಪ್ರಯಾಣಿಕರ ವಿವರ ಪಡೆದರು. ನಂತರ ಉಡುಪಿಯಿಂದ ಮುಂದಿನ ಎಲ್ಲ ನಿಲ್ದಾಣಗಳ ಸಿಸಿ ಕ್ಯಾಮರ ದೃಶ್ಯಗಳನ್ನು ಪರಿಶೀಲಿಸಿದರು. ಆಗ ಆರೋಪಿ ಭಟ್ಕಳ ನಿಲ್ದಾಣದಲ್ಲಿ ಇಳಿದಿರುವುದು ಪತ್ತೆಯಾಯಿತು.ಭಟ್ಕಳಕ್ಕೆ ತೆರಳಿದ ಪೊಲೀಸರು, ಆರೋಪಿ ಮುಹಮ್ಮದ್ ಶುರೈಂನನ್ನು ಆತನ ಮನೆಯಿಂದಲೇ ಹಿಡಿದು ತಂದು ವಿಚಾರಣೆ ನಡೆಸಿದ್ದಾರೆ. ಆತ ಮೈಸೂರಿನಲ್ಲಿ ತಮ್ಮ ಧಾರ್ಮಿಕ ಶಿಕ್ಷಣವನ್ನು ನಡೆಸಿ ಊರಿಗೆ ಬರುತ್ತಿದ್ದಾಗ ಈ ಕೃತ್ಯವನ್ನು ಎಸಗಿದ್ದಾನೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.ಯುವತಿಯ ಸಮಯಪ್ರಜ್ಞೆ ಮತ್ತು ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.